ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು ಮತ್ತು ಸಿಖ್ರ ಜೀವ ಸದಾ ಅಪಾಯದಲ್ಲೇ ಇರುತ್ತದೆ. ಅದಕ್ಕೆ ಸಾಕ್ಷಿಯಾಗಿ ಮತ್ತೊಂದು ಘಟನೆ ನಡೆದಿದೆ. ಪಾಕಿಸ್ತಾನದ ವಾಯುವ್ಯ ನಗರ ಪೇಶಾವರ(Peshawar) ದಲ್ಲಿ ಸಿಖ್ ಸಮುದಾಯ (Sikh Community)ದ ವೈದ್ಯನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ. ಸರ್ದಾರ್ ಸತ್ನಮ್ ಸಿಂಗ್ (45) ಎಂಬುವರು ಹತ್ಯೆಗೀಡಾದವರು. ಇವರು ಪ್ರಸಿದ್ಧ ಹಕೀಮ್ ಆಗಿದ್ದು, ಅವರ ಕ್ಲಿನಿಕ್ನಲ್ಲಿಯೇ ಹತ್ಯೆ ಮಾಡಲಾಗಿದೆ. (ಹಕೀಮ್ ಎಂದರೆ ಪಾಕಿಸ್ತಾನದಲ್ಲಿ ಯುನಾನಿ ವೈದ್ಯಕೀಯವನ್ನು ಅಭ್ಯಾಸ ಮಾಡಿದ ವೈದ್ಯ).
ಸರ್ದಾರ್ ಸತ್ನಮ್ ಸಿಂಗ್ ಅವರು ಕ್ಲಿನಿಕ್ನಲ್ಲಿ ಇದ್ದ ಸಮಯದಲ್ಲಿ ಬಂದೂಕು ಹಿಡಿದ ವ್ಯಕ್ತಿಗಳು ಅಲ್ಲಿಗೆ ನುಗ್ಗಿದರು. ಕ್ಲಿನಿಕ್ ಕ್ಯಾಬಿನ್ನ ಬಾಗಿಲು ತೆಗೆದುಹೋಗಿ ಒಂದೇ ಸಮ ಗುಂಡಿನ ದಾಳಿ ನಡೆಸಿದ್ದಾರೆ. ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಾಳಿಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಜಾಗದ ಸುತ್ತಮುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಯುತ್ತಿದೆ. ಹತ್ಯೆಯ ಹಿಂದಿನ ಕಾರಣ ಗೊತ್ತಾಗಲಿಲ್ಲ. ಯಾರೊಬ್ಬರೂ ಈ ದಾಳಿಯ ಜವಾಬ್ದಾರಿಯನ್ನು ಇದುವರೆಗೂ ಹೊತ್ತಿಲ್ಲ.
ಸರ್ದಾರ್ ಸತ್ನಾಮ್ ಸಿಂಗ್ ಸಿಖ್ ಸಮುದಾಯದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಪೇಶಾವರ್ನ ಚರ್ಸದ್ದ ರಸ್ತೆಯಲ್ಲಿ ಧರ್ಮಂದರ್ ಫಾರ್ಮಸಿ ಎಂಬ ಹೆಸರಿನ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ 20ವರ್ಷಗಳಿಂದಲೂ ಈ ಪೇಶಾವರದಲ್ಲಿಯೇ ವಾಸವಾಗಿದ್ದರು. ಇದೀಗ ಅವರ ಹತ್ಯೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇದು ಉಗ್ರರ ಕೃತ್ಯವೋ ಅಥವಾ ಬೇರೆ ಯಾರಾದರೂ ಮಾಡಿದ್ದಾ? ಎಂಬಿತ್ಯಾದಿ ಆಯಾಮಗಳಿಂದ ತನಿಖೆ ಪ್ರಾರಂಭಿಸಿದ್ದಾರೆ.
ಸರ್ದಾರ್ ಸತ್ನಮ್ ಸಿಂಗ್ ಹತ್ಯೆಯನ್ನು ಖೈ ಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಮಹಮ್ಮದ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಹತ್ಯೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ, ಆದಷ್ಟು ಶೀಘ್ರದಲ್ಲೇ ಕೊಲೆಗಾರನನ್ನು ಹಿಡಿಯಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಇನ್ನು ಪೇಶಾವರದಲ್ಲಿ ಸುಮಾರು 15000 ಮಂದಿ ಸಿಖ್ಖರು ಇದ್ದು, ಬಹುತೇಕರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಹಲವರು ಹೀಗೆ ಫಾರ್ಮಸಿ, ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ. ಹಾಗೇ, ಪೇಶಾವರದಲ್ಲಿ ಸಿಖ್ರನ್ನು ಪದೇಪದೆ ಟಾರ್ಗೆಟ್ ಮಾಡಲಾಗುತ್ತಿದೆ. 2018ರಲ್ಲಿ ಸಿಖ್ ಪ್ರಮುಖ ನಾಯಕ ಚರಣಜಿತ್ ಸಿಂಗ್ ಎಂಬುವರನ್ನು ಅಪರಿಚಿತನೊಬ್ಬ ಹತ್ಯೆ ಮಾಡಿದ್ದ. ಹಾಗೇ, 2016ರಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸದಸ್ಯ ಸೋರೆನ್ ಸಿಂಗ್ರನ್ನು ಪೇಶಾವರದಲ್ಲಿಯೇ ಹತ್ಯೆ ಮಾಡಲಾಗಿತ್ತು. 2020ರಲ್ಲಿ ಸುದ್ದಿವಾಹಿನಿಯೊಂದರ ನಿರೂಪಕ ರವೀಂದರ್ ಸಿಂಗ್ರನ್ನು ಭೀಕರವಾಗಿ ಕೊಲ್ಲಲಾಗಿತ್ತು.
ಪ್ರಧಾನಿ ಮೋದಿ ಮಧ್ರಪ್ರವೇಶಕ್ಕೆ ಬೇಡಿಕೆ ಇಟ್ಟ ಭಾರತೀಯ ವಿಶ್ವ ವೇದಿಕೆ ಅಧ್ಯಕ್ಷ
ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ರ ಜೀವಕ್ಕೆ ಪದೇಪದೆ ಅಪಾಯ ಎದುರಾಗುತ್ತಿರುವ ಬೆನ್ನಲ್ಲೇ ಭಾರತೀಯ ವಿಶ್ವ ವೇದಿಕೆ (Indian World Forum -IWF) ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಪಾಕ್ನಲ್ಲಿರುವ ಹಿಂದು-ಸಿಖ್ ಸಮುದಾಯಗಳ ರಕ್ಷಣೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೇ, ಈ ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ಒದಗಿಸುತ್ತೇವೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಬೇಕು. ವಿಶ್ವಸಂಸ್ಥೆ ಇನ್ನಷ್ಟು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Charanjit Singh Channi ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಇಂದು ಸಂಜೆ ಭೇಟಿ ಮಾಡಲಿದ್ದಾರೆ ಚರಣ್ಜಿತ್ ಸಿಂಗ್ ಚನ್ನಿ
ಹುಬ್ಬಳ್ಳಿ: ತಂದೆ –ತಾಯಿಯನ್ನು ತಬ್ಬಲಿ ಮಾಡಿದ ಮಗ; ಬಡತನಕ್ಕೆ ಹೆದರಿ ಮನೆ ಬಿಟ್ಟು ಪರಾರಿ
Published On - 1:09 pm, Fri, 1 October 21