
ದುಬೈ, ಅಕ್ಟೋಬರ್ 02: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಹಾರಾಟದ ಮಧ್ಯೆ ಏಕಾಏಕಿ ಕೋ ಪೈಲಟ್ನಿಂದ ದಾಳಿಗೊಳಗಾಗಿದ್ದ ಸಮಯದಲ್ಲಿ ಕೂಡ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿಸಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕುಟುಂಬದ ವಿವರಗಳು ಇಲ್ಲಿವೆ.
ಸ್ಮಿತ್ ಅವರದ್ದು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ವೃದ್ಧ ತಂದೆ-ತಾಯಿಯನ್ನೊಳಗೊಂಡ ಒಟ್ಟು 6 ಜನರ ಸುಖೀ ಕುಟುಂಬ. ಪತ್ನಿ ಸೋನಲ್, ಐದು ವರ್ಷದ ಮುದ್ದಾದ ಮಗಳು ಜೀವಾ, ಎರಡು ವರ್ಷದ ಪುಟ್ಟ ಮಗ ಕ್ರಿಶ್ ಅವರೊಂದಿಗೆ ಸ್ಮಿತ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ. ಇವರ ಪೋಷಕರಾದ ತಂದೆ ಉಪೇಂದ್ರ ಮಚ್ಚರ್ ಮತ್ತು ತಾಯಿ ಗೀತಾ ಮಚ್ಚರ್ ಮುಂಬೈನ ತಿಲಕ್ ನಗರದ ಸ್ವಸ್ತಿ ಹೈಟ್ಸ್‌ನಲ್ಲಿ ವಾಸವಾಗಿದ್ದು, ಮಾವ ಜಯಸುಖ್ ಜೋಗಿ ಕೂಡ ಘಾಟ್‌ಕೋಪರ್‌ನಲ್ಲಿದ್ದಾರೆ.
ಗುಜರಾತ್ ಟು ಮುಂಬೈ ವಲಸೆ: ಸ್ಮಿತ್ ಮಚ್ಚರ್ ಅವರ ಕುಟುಂಬದ ಮೂಲ ಗುಜರಾತಿನ ಸಾವರ್ಕುಂಡ್ಲಾದ ವಾಧ್ವಾನ್. ಆದರೆ ಸ್ಮಿತ್ ಜನನಕ್ಕೂ ಮುನ್ನವೇ ಅವರ ತಂದೆ ಉಪೇಂದ್ರ ಮಚ್ಚರ್ ವ್ಯಾಪಾರಕ್ಕಾಗಿ ಮುಂಬೈನ ಘಾಟ್‌ಕೋಪರ್‌ಗೆ ಬಂದು ನೆಲೆಸಿದರು. ಹೀಗಾಗಿ ಸ್ಮಿತ್ ಹುಟ್ಟಿ ಬೆಳೆದಿದ್ದೆಲ್ಲವೂ ಮುಂಬೈನಲ್ಲೇ.
ಟೆಕ್ಸ್‌ಟೈಲ್ ಎಂಜಿನಿಯರಿಂಗ್‌ನಿಂದ ವಾಯುಯಾನದತ್ತ: ಉದ್ಯಮಿಯ ಮಗನಾಗಿ ಬೆಳೆದ ಸ್ಮಿತ್, ಆರಂಭದಲ್ಲಿ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುವ ಉದ್ದೇಶದಿಂದ ಜವಳಿ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಆದರೆ, ಆಕಾಶದಲ್ಲಿ ಹಾರಾಡುವ ಅವರ ಕನಸು ಕೊನೆಗೆ ಅವರನ್ನು ವಾಯುಯಾನ ಕ್ಷೇತ್ರದತ್ತ ಕರೆತಂದಿತು.
ಸ್ಪೈಸ್‌ಜೆಟ್‌ನಲ್ಲಿ 11 ವರ್ಷಗಳ ಸೇವೆ: 2011 ರಲ್ಲಿ ಭಾರತದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ಸ್ಮಿತ್, ಅಲ್ಲಿ ಬರೋಬ್ಬರಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ನವೆಂಬರ್ 2020 ರಲ್ಲಿ ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಆಗಿ ಬಡ್ತಿ ಪಡೆದು, ನೂರಾರು ಯುವ ಪೈಲಟ್‌ಗಳಿಗೆ ತರಬೇತಿ ನೀಡುವ ಹಿರಿಯ ಕಮಾಂಡರ್ ಆದರು.
ಮತ್ತಷ್ಟು ಓದಿ: ಕೋ-ಪೈಲಟ್ನಿಂದ ಗಾಯಗೊಂಡಿದ್ದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ಸೌದಿಯಿಂದ ದುಬೈಗೆ ಏರ್‌ಲಿಫ್ಟ್
ಫ್ಲೈದುಬೈ ಪಯಣ: ಸಿಎನ್‌ಎನ್ (CNN) ವರದಿಯ ಪ್ರಕಾರ, ಜೂನ್ 2022 ರಲ್ಲಿ ಅವರು ಯುಎಇ ಮೂಲದ ಖ್ಯಾತ ವಿಮಾನಯಾನ ಸಂಸ್ಥೆ ‘ಫ್ಲೈದುಬೈ’ ಗೆ ನೇರ ಪ್ರವೇಶ ಕ್ಯಾಪ್ಟನ್ ಆಗಿ ಆಯ್ಕೆಯಾದರು. ನಂತರ ತಮ್ಮ ಪತ್ನಿ ಸೋನಲ್ ಹಾಗೂ ಮಕ್ಕಳೊಂದಿಗೆ ದುಬೈಗೆ ಸ್ಥಳಾಂತರಗೊಂಡರು.
2025 ರಲ್ಲಿ ನೀಡಿದ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಪರತೆಯ ಬಗ್ಗೆ ಮಾತನಾಡಿದ್ದ ಸ್ಮಿತ್ ಮಚ್ಚರ್, “ನಾನು ನನ್ನ ಪೈಲಟ್ ಸಮವಸ್ತ್ರ ಧರಿಸಿದಾಗ ಬೇರೆ ಯಾವುದೇ ಅಸಂಬದ್ಧ ಆಲೋಚನೆಗಳನ್ನು ಮಾಡುವುದಿಲ್ಲ; ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆಯ ಕರ್ತವ್ಯವನ್ನಷ್ಟೇ ಮಾಡುತ್ತೇನೆ” ಎಂದು ಹೇಳಿದ್ದರು. ಅವರು ಹೇಳಿದ ಆ ಕರ್ತವ್ಯನಿಷ್ಠೆಯ ಮಾತುಗಳನ್ನು ಇಂದು 30,000 ಅಡಿ ಎತ್ತರದಲ್ಲಿ ಸಹ-ಪೈಲಟ್ ಚಾಕುವಿನಿಂದ ಇರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದಾಗಲೂ ಅಕ್ಷರಶಃ ಪಾಲಿಸಿ, ಪ್ರಜ್ಞೆ ತಪ್ಪುವ ಮುನ್ನವೇ ಕಾಕ್‌ಪಿಟ್ ಬಾಗಿಲು ತೆರೆದು ಇಡೀ ಜಗತ್ತೇ ಮೆಚ್ಚುವ ಸಾಹಸ ಮೆರೆದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Fri, 2 October 26