ದೆಹಲಿ: ನೌಕಾಪಡೆಯ ಇಬ್ಬರು ನಿವೃತ್ತ ಯೋಧರೂ ಸೇರಿದಂತೆ ಕೆಲ ಭಾರತೀಯರು ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ (Russia Ukraine Conflict) ಬೆಂಬಲಿಸಿ ಶಸ್ತ್ರ ಹಿಡಿಯಲು ಮುಂದೆ ಬಂದಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿರುವ ಉಕ್ರೇನ್ ರಾಜತಾಂತ್ರಿಕ ಕಚೇರಿಗೆ ಲಿಖಿತ ಪ್ರಸ್ತಾವ ನೀಡಿರುವ ಕೆಲವರು ರಷ್ಯಾ ವಿರುದ್ಧದ ಹೋರಾಡಲು ಅವಕಾಶ ನೀಡಬೇಕು, ಅದಕ್ಕಾಗಿ ವಿಸಾ ಕೊಡಬೇಕು ಎಂದು ಕೇಳಿದ್ದಾರೆ. ರಷ್ಯಾ ವಿರುದ್ಧದ ಹೋರಾಟಕ್ಕೆ ಅಂತರರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು ಎಂದು ಕರೆ ನೀಡಿದ್ದ ಉಕ್ರೇನ್ ಸರ್ಕಾರವು ‘ಇಂಟರ್ನ್ಯಾಷನಲ್ ಲಿಗನ್ ಆಫ್ ಉಕ್ರೇನ್’ (International Legion of Ukraine) ರಚಿಸಿಕೊಳ್ಳಲು ಕರೆ ನೀಡಿತ್ತು.
ಉಕ್ರೇನ್ನಲ್ಲಿದ್ದ ತಮಿಳುನಾಡು ಮೂಲದ 21 ವರ್ಷದ ಭಾರತೀಯ ಯುವಕ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಸೇನೆಗೆ ಸೇರ್ಪಡೆಯಾದ ಬೆನ್ನಿಗೇ ಈ ವರದಿಗಳೂ ಪ್ರಕಟವಾಗಿವೆ. ಭಾರತೀಯ ಸೇನೆಗೆ ಸೇರಬೇಕೆಂದು ಸೈನಿಕೇಶ್ ಈ ಹಿಂದೆ ಎರಡು ಬಾರಿ ಪ್ರಯತ್ನಿಸಿದ್ದರು. ಅವರ ಯತ್ನ ಸಫಲವಾಗಿರಲಿಲ್ಲ. ಓದಲೆಂದು ಉಕ್ರೇನ್ಗೆ ಹೋಗಿದ್ದ ಸೈನಿಕೇಶ್ ಅಲ್ಲಿಯೇ ಶಸ್ತ್ರ ಹಿಡಿದಿದ್ದಾರೆ. ಯುದ್ಧ ಘೋಷಣೆಯಾದಾಗ ಉಕ್ರೇನ್ನಲ್ಲಿಯೇ ಇದ್ದವರು ಶಸ್ತ್ರ ಹಿಡಿಯುವುದು ಬೇರೆ, ಇತರ ದೇಶಗಳಲ್ಲಿರುವ ಉಕ್ರೇನ್ ಪ್ರಜೆಗಳಲ್ಲದವರು ಉಕ್ರೇನ್ ಪರವಾಗಿ ಶಸ್ತ್ರ ಹಿಡಿಯುವುದು ಬೇರೆ. ತನ್ನನ್ನು ಬೆಂಬಲಿಸುವ ವಿದೇಶಿಯರಿಗಾಗಿ ಉಕ್ರೇನ್ ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಉಕ್ರೇನ್ ಪರವಾಗಿ ಹೊರಾಡಲು ಇಚ್ಛಿಸುವ ವಿದೇಶಿಯರು ತಮ್ಮ ದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನು ಸಂಪರ್ಕಿಸಬೇಕು. ಇಮೇಲ್ ಅಥವಾ ಫೋನ್ ಕಾಲ್ ಮೂಲಕ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಬೇಕು. ಉಕ್ರೇನ್ನ ಸೇನಾಧಿಕಾರಿಗಳು ಸಂದರ್ಶನ ನಡೆಸಿ, ಆಸಕ್ತರು ಮತ್ತು ಅರ್ಹರನ್ನು ತಮ್ಮ ಪಡೆಗಳ ನೆರವಿಗೆ ಕರೆಸಿಕೊಳ್ಳುತ್ತಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಈ ಕುರಿತು ‘ದಿ ಪ್ರಿಂಟ್’ ಜಾಲತಾಣವು ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿವರ ಕೋರಿದೆ. ‘ನಾವು ಸದ್ಯಕ್ಕೆ ಯಾವುದೇ ರೀತಿಯ ವೀಸಾಗಳನ್ನು ನೀಡುತ್ತಿಲ್ಲ. ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಅಲ್ಲಿನ ರಾಜತಾಂತ್ರಿಕ ಕಚೇರಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಆದರೆ ಭಾರತ ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ಭಾರತೀಯರಿಗೆ ವಿದೇಶದ ನೆಲಗಳಲ್ಲಿ ನಡೆಯುವ ಸಂಘರ್ಷಗಳಲ್ಲಿ ಹೋರಾಟ ನಡೆಸಲು ಅವಕಾಶ ಇಲ್ಲ. ದೆಹಲಿ ಹೈಕೋರ್ಟ್ಗೆ ಈ ಕುರಿತು 2015ರಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದ ಭಾರತ ಸರ್ಕಾರವು, ‘ಯಾವೊಬ್ಬ ಭಾರತೀಯರಿಗೂ ವಿದೇಶಗಳಲ್ಲಿ ನಡೆಯುವ ಸಂಘರ್ಷದಲ್ಲಿ ಯಾವುದೇ ಗುಂಪು ಅಥವಾ ಪಕ್ಷದ ಪರವಾಗಿ ಹೋರಾಡಲು ಸರ್ಕಾರವು ಅನುಮತಿ ನೀಡುವುದಿಲ್ಲ. ಏಕೆಂದರೆ ಇದು ಭಾರತದ ವಿದೇಶಾಂಗ ನೀತಿಯ ಮೇಲೆ ದುಷ್ಪರಿಣಾಮ ಬೀರಬಹುದು. ಭಾರತ ಸರ್ಕಾರವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂಬ ಆರೋಪಕ್ಕೂ ಇದು ಕಾರಣವಾಗಬಹುದು’ ಎಂದು ಹೇಳಿತ್ತು.
ಹೋರಾಟಕ್ಕೆ ಮುಂದೆ ಬಂದಿರುವವರು ಏನು ಹೇಳುತ್ತಾರೆ
ಉಕ್ರೇನ್ ಪರ ಹೋರಾಟಕ್ಕೆ ಆಸಕ್ತಿ ತೋರಿರುವ ನಿವೃತ್ತ ನೌಕಾ ಸಿಬ್ಬಂದಿಯನ್ನು ‘ದಿ ಪ್ರಿಂಟ್’ ಪ್ರತಿನಿಧಿಗಳು ಮಾತನಾಡಿಸಿದ್ದಾರೆ. ಈ ವೇಳೆ ಅವರು ಉಕ್ರೇನ್ ರಾಜತಾಂತ್ರಿಕ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಅವರ ಸಂಪರ್ಕ ವಿವರ ಪಡೆದ ಅಲ್ಲಿನ ಸಿಬ್ಬಂದಿ ಅವರನ್ನು ಮತ್ತೆ ಸಂಪರ್ಕಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೋರ್ವ ಖಾಸಗಿ ಕಂಪನಿ ಉದ್ಯೋಗಿ ಇಮೇಲ್ ಮೂಲಕ ಉಕ್ರೇನ್ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆದರೆ ಅವರಿಗೆ ಇನ್ನೂ ಉಕ್ರೇನ್ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ವಿದೇಶಗಳಲ್ಲಿ ಭಾರತೀಯರ ಹೋರಾಟ
ಬೇರೊಂದು ದೇಶದ ಪರವಾಗಿ ಹೋರಾಡಲು ಭಾರತೀಯರು ಮುಂದಾಗಿರುವುದು ಇದೇ ಮೊದಲಲ್ಲ. 2013ರಲ್ಲಿಯೂ ನೂರಾರು ಭಾರತೀಯರು ಲೆಬನಾನ್ನಲ್ಲಿ ವಿವಿಧ ಪಕ್ಷಗಳ ಪರವಾಗಿ ಹೋರಾಡಲು ಹೋಗಿದ್ದರು. ಕೂಲಿಕಾರ್ಮಿಕರಾಗಿ ಅಲ್ಲಿಗೆ ಹೋಗಿದ್ದ ಭಾರತೀಯರನ್ನು ಬಾಡಿಗೆ ಸೈನಿಕರನ್ನು ಇವರನ್ನು ಅಲ್ಲಿನ ಯುದ್ಧದಣಿಗಳು ಬಳಸಿಕೊಂಡಿದ್ದರು. ಅಫ್ಘಾನಿಸ್ತಾನದಲ್ಲಿಯೂ ಭಾರತೀಯರು ಅಮೆರಿಕ ಸೇನಾ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡಿದ್ದರು. ಇಂದಿಗೂ ಕೆಲ ಭಾರತೀಯರು ಅಮೆರಿಕ ಸೇನೆಯಲ್ಲಿ ವಿಶೇಷ ಕಾರ್ಯಕ್ರಮವೊಂದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೇನೆಯಲ್ಲಿ ಕೆಲಸ ಮಾಡುವವರಿಗೆ ಅಮೆರಿಕದ ಪೌರತ್ವ ಪಡೆಯಲು ಸುಲಭ ಎನ್ನುವ ಕಾರಣಕ್ಕೆ ಹಲವು ಸೇರಿಕೊಂಡಿದ್ದಾರೆ. ಆದರೆ ಉಕ್ರೇನ್ ಪರವಾಗಿ ಹೋರಾಡಲು ಭಾರತೀಯರು ಮುಂದೆ ಬರುತ್ತಿರುವುದು ಇವೆಲ್ಲಕ್ಕಿಂತ ಭಿನ್ನ ಎನಿಸಿಕೊಂಡಿದೆ. ರಷ್ಯಾದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಭಾರತಕ್ಕೆ ಇದು ಹೊಸ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಉಕ್ರೇನ್ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಮ್ಮೆಲೇ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲು ಸಾಧ್ಯವೇ ಇಲ್ಲ