ಆಸ್ಟ್ರಜೆನಿಕಾ ಮತ್ತು ಸ್ಪುಟ್ನಿಕ್ ಲಸಿಕೆಗಳ ಮಿಶ್ರಣ ನೀಡಿದೆ ಉತ್ತಮ ಪರಿಣಾಮ; ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ

Sputnik and AstraZeneca: ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ತರ ಮೈಲುಗಲ್ಲೊಂದು ತಲುಪುವ ಆಶಾಕಿರಣ ವ್ಯಕ್ತವಾಗಿದೆ. ಕೊರೊನಾ ಲಸಿಕೆಗಳಾದ ಸ್ಪುಟ್ನಿಕ್ ಮತ್ತು ಆಸ್ಟ್ರಜೆನಿಕಾದ ಮಿಶ್ರಣವು ಉತ್ತಮ ಪರಿಣಾಮವನ್ನು ಬೀರಿದ್ದು, ದೀರ್ಘಕಾಲಿಕ ರೋಗ ನಿರೋಧಕ ಶಕ್ತಿ ಒದಗಿಸಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.

ಆಸ್ಟ್ರಜೆನಿಕಾ ಮತ್ತು ಸ್ಪುಟ್ನಿಕ್ ಲಸಿಕೆಗಳ ಮಿಶ್ರಣ ನೀಡಿದೆ ಉತ್ತಮ ಪರಿಣಾಮ; ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: Jul 31, 2021 | 2:32 PM

ಎಲ್ಲಾ ರಾಷ್ಟ್ರಗಳೂ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕೊರೊನಾ ಲಸಿಕೆಗಳ ಮಿಶ್ರಣ ಹೇಗೆ ಪರಿಣಾಮ ಬೀರುತ್ತದೆ ಎಂಬ ಫಲಿತಾಂಶ ಕೊನೆಗೂ ಲಭ್ಯವಾಗಿದೆ. ರಷ್ಯಾದಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಸ್ಪುಟ್ನಿಕ್- ವಿ ಮತ್ತು ಆಸ್ಟ್ರಜೆನಿಕಾ ಲಸಿಕೆಗಳನ್ನು ಮಿಶ್ರಣ ಮಾಡಿ ಕೊರೊನನಾ ಸೋಂಕಿತರಿಗೆ ನೀಡಲಾಗಿತ್ತು. ಅದರ ಪರಿಣಾಮಗಳನ್ನು ಅಧ್ಯಯನ ಮಾಡಿರುವ ಅಜೆರ್​ಬೈಜಾನ್ (Azerbaijan) ತನ್ನ ವರದಿಗಳನ್ನು ಪ್ರಕಟಿಸಿದ್ದು, ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಗಂಭೀರ ಋಣಾತ್ಮಕ ಪರಿಣಾಮಗಳಾಗಿಲ್ಲ ಎಂದು ಸ್ಪಷ್ಟಪಡಿಸಿದೆ. 

ಸ್ಪುಟ್ನಿಕ್ ಮತ್ತು ಆಸ್ಟ್ರಜನಿಕಾ ಲಸಿಕೆಗಳ ಮಿಶ್ರಣವು ಕೆಲವು ಧನಾತ್ಮಕ ಫಲಿತಾಂಶಗಳನ್ನೂ ನೀಡಿದೆ. ದೀರ್ಘಕಾಲಿಕ ಹಾಗೂ ಸಶಕ್ತವಾದ ರೋಗ ನಿರೋಧಕ ಶಕ್ತಿಯನ್ನು ಈ ಎರಡೂ ಲಸಿಕೆಗಳು ಉತ್ಪಾದಿಸಬಲ್ಲವು ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು 2021ರ ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು.

ಅಧ್ಯಯನ ನಡೆಸಿದ್ದು ಹೇಗೆ?

ಮೊದಲಿಗೆ 50 ಮಂದಿ ಸ್ವಯಂಪ್ರೇರಿತರಾಗಿ ಸಂಶೋಧನೆಯಲ್ಲಿ ಭಾಗವಹಿಸಲು ಒಪ್ಪಿ ಮುಂದೆ ಬಂದರು. ಅವರಿಗೆ ಸ್ಪುಟ್ನಿಕ್ ಮತ್ತು ಆಸ್ಟ್ರಜೆನಿಕಾ ಮಿಶ್ರಣವನ್ನು ಲಸಿಕೆಯಾಗಿ ನೀಡಲಾಯಿತು. ಲಸಿಕೆ ಪಡೆದವರಿಗೆ ಋಣಾತ್ಮಕ ಪರಿಣಾಮಗಳಾಗಿಲ್ಲ. ಜೊತೆಗೆ ಲಸಿಕೆಯು ಅತ್ಯುತ್ತಮ ಪರಿಣಾಮಗಳನ್ನು ಬೀರಿದೆ. ದೀರ್ಘಕಾಲಿಕ ರೋಗ ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸಲು ಈ ಮಿಶ್ರಣ ಸಹಾಯ ಮಾಡಿದೆ. ಈ ಕುರಿತ ಅಧಿಕೃತ ಡಾಟಾವನ್ನು ಆಗಸ್ಟ್​ನಲ್ಲಿ ರಷ್ಯಾದ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್(RDIF) ಬಿಡುಗಡೆ ಮಾಡಲಿದೆ ಎಂದು ವರದಿ ತಿಳಿಸಿದೆ.

ಲಸಿಕೆಯನ್ನು ಮಿಶ್ರಣ ಮಾಡುವ ಯೋಜನೆಯು ವಿಶ್ವದ ಹಲವೆಡೆ ಏಕಕಾಲದಲ್ಲಿ ನಡೆಯುತ್ತಿದೆ. ವಿವಿಧ ಲಸಿಕೆಗಳನ್ನು ಮಿಶ್ರಣ ಮಾಡಿ ಅದರ ಪರಿಣಾಮಗಳನ್ನು ಅಧ್ಯಯನ ನಡೆಸಿದ ನಂತರ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗುತ್ತದೆ. ಈ ಮಾದರಿಯಲ್ಲಿ ಅರಬ್ ದೇಶಗಳಲ್ಲಿ ಈಗಾಗಲೇ ಸ್ವಯಂಸೇವಕರಿಗೆ ಲಸಿಕೆ ನೀಡಲಾಗಿದ್ದು, ರಷ್ಯಾ ಮತ್ತು ಬೆಲಾರಸ್​ನಲ್ಲಿ ಕೆಲ ನಿಯಮಗಳೊಂದಿಗೆ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ.

RDIF ಸಿಇಒ ಕಿರಿಲ್ ಡಿಮಿಟ್ರೀವ್(Kirill Dmitriev) ಅವರ ಪ್ರಕಾರ, ಲಸಿಕೆಗಳ ಮಿಶ್ರಣದ ಪ್ರಯೋಗಗಳು ಅತ್ಯಂತ ಮುಖ್ಯವಾಗಿದ್ದು, ಕೊರೊನಾ ರೂಪಾಂತರಿ ತಳಿಗಳ ವಿರುದ್ಧ ಸೆಣಸಲು ಇರುವ ಪ್ರಬಲ ಅಸ್ತ್ರವಾಗಿದೆ ಎಂದಿದ್ದಾರೆ. ಇದಕ್ಕೆ ಔಷಧ ತಯಾರಕರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.

ಕೃಪೆ: ಇಂಡಿಯಾ ಟುಡೆ

ಇದನ್ನೂ ಓದಿ: Karnataka Covid-19: ಕರ್ನಾಟಕದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ; ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಇದನ್ನೂ ಓದಿ: ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

(Sputnik and AstraZeneca vaccine cocktail gives good results in Russia)