Sri Lanka crisis ಜನರಿಗಾಗಿ ಯಾವುದೇ ರೀತಿಯ ತ್ಯಾಗ ಮಾಡಲು ಸಿದ್ಧ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ

| Updated By: ರಶ್ಮಿ ಕಲ್ಲಕಟ್ಟ

Updated on: May 09, 2022 | 3:21 PM

. "ಜನರಿಗಾಗಿ ನಾನು ಯಾವುದೇ ತ್ಯಾಗ ಮಾಡಲು ಸಿದ್ಧನಿದ್ದೇನೆ " ಎಂದು ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಬೆಂಬಲಿಗರಿಗೆ ಹೇಳಿರುವುದನ್ನು ಉಲ್ಲೇಖಿಸಿ ದೇಶದ ಪ್ರಮುಖ ಸುದ್ದಿಜಾಲ ಲಂಕಾ ಫಸ್ಟ್  ವರದಿ ಮಾಡಿದೆ.

Sri Lanka crisis ಜನರಿಗಾಗಿ ಯಾವುದೇ ರೀತಿಯ ತ್ಯಾಗ ಮಾಡಲು ಸಿದ್ಧ: ಶ್ರೀಲಂಕಾ ಪ್ರಧಾನಿ  ಮಹಿಂದಾ ರಾಜಪಕ್ಸೆ
ಮಹಿಂದ ರಾಜಪಕ್ಸೆ
Follow us on

ಕೊಲಂಬೊ: ದೇಶ ಎದುರಿಸುತ್ತಿರುವ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ತನ್ನ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ (Gotabaya Rajapaksa)  ನೇತೃತ್ವದ ಮಧ್ಯಂತರ ಸರ್ಕಾರವನ್ನು ರಚಿಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರಧಾನಿ ಕೆಳಗಿಳಿಯಲು ಮುಂದಾಗಬಹುದು ಎಂದು ವರದಿಗಳು ಹೇಳುತ್ತಿವೆ. ಏತನ್ಮಧ್ಯೆ ಜನರಿಗಾಗಿ “ಯಾವುದೇ ತ್ಯಾಗ” ಮಾಡಲು ಸಿದ್ಧ ಎಂದು ಮಹಿಂದಾ ರಾಜಪಕ್ಸೆ (Mahinda Rajapaksa) ಅವರು ಸೋಮವಾರ ಹೇಳಿದ್ದಾರೆ. 76ರ ಹರೆಯದ ರಾಜಪಕ್ಸೆ ತಮ್ಮ ಸ್ವಂತ ಶ್ರೀಲಂಕಾ ಪೊದುಜನ ಪೆರಮುನಾ (SLPP) ರಂಗದಿಂದ ರಾಜೀನಾಮೆ ನೀಡುವಂತೆ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇದನ್ನು ನಿಭಾಯಿಸಲು ಅವರು ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅವರ ಕಿರಿಯ ಸಹೋದರ, ಅಧ್ಯಕ್ಷ ಗೊಟಬಯ ರಾಜಪಕ್ಸೆ, ಮಹಿಂದ ರಾಜಪಕ್ಸೆ ಅವರ  ರಾಜೀನಾಮೆ ಬಯಸಿದ್ದರೂ ಅವರ ಆಶಯವನ್ನು ನೇರವಾಗಿ ತಿಳಿಸಿರಲಿಲ್ಲ. ರಾಷ್ಟ್ರೀಯ ಏಕತೆಯ ಸರ್ಕಾರಕ್ಕಾಗಿ ಪ್ರಧಾನಿ ರಾಜೀನಾಮೆ ಕೊಡಬೇಕೆಂದು ಅಧ್ಯಕ್ಷರು ಬಯಸುತ್ತಾರೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವವರೆಗೆ ಮಧ್ಯಂತರ ವ್ಯವಸ್ಥೆ ಆಗಿದೆ ಎಂದು ಮೂಲಗಳು ತಿಳಿಸಿವೆ. “ಜನರಿಗಾಗಿ ನಾನು ಯಾವುದೇ ತ್ಯಾಗ ಮಾಡಲು ಸಿದ್ಧನಿದ್ದೇನೆ ” ಎಂದು ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಬೆಂಬಲಿಗರಿಗೆ ಹೇಳಿರುವುದನ್ನು ಉಲ್ಲೇಖಿಸಿ ದೇಶದ ಪ್ರಮುಖ ಸುದ್ದಿಜಾಲ ಲಂಕಾ ಫಸ್ಟ್  ವರದಿ ಮಾಡಿದೆ.

ಪ್ರಧಾನಿಯವರ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಹಿಂದಾ ರಾಜಪಕ್ಸೆ ಈ ಹೇಳಿಕೆಗಳನ್ನು ನೀಡಿದ್ದು ಅಧಿಕಾರದಿಂದ ಕೆಳಗಿಳಿಯದಂತೆ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷದ ಸದಸ್ಯರು ಮನವಿ ಮಾಡಿದ್ದಾರೆ. “ಅವರು ನೇರ ರಾಜೀನಾಮೆ ನೀಡದಿರಬಹುದು” ಎಂದು ಆಡಳಿತ ಸಮ್ಮಿಶ್ರ ಭಿನ್ನಮತೀಯ ದಯಾಸಿರಿ ಜಯಶೇಖರ ಪಿಟಿಐಗೆ ತಿಳಿಸಿದರು.

ಪ್ರಸ್ತುತ ಬಿಕ್ಕಟ್ಟಿನಲ್ಲಿ ನನಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಅವರು ಹೇಳಬಹುದು. ಆದ್ದರಿಂದ ನಾನು ರಾಜೀನಾಮೆ ನೀಡಲು ಯಾವುದೇ ಕಾರಣಗಳಿಲ್ಲ, ನೀವು ಬಯಸಿದರೆ ನನ್ನನ್ನು ವಜಾ ಮಾಡಿ ಎಂದು ಅವರು ಗೋಟಾಬಯ ರಾಜಪಕ್ಸೆ ಅವರ ಅಂಗಳದಲ್ಲಿ ಚೆಂಡನ್ನು ಹಾಕುತ್ತಾರೆ ಎಂದು ನನಗನಿಸುತ್ತಿದೆ ಎಂದು ಜಯಶೇಖರ ಹೇಳಿದರು. ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ ಗೊಟಾಬಯ, ಪ್ರಧಾನ ಮಂತ್ರಿ ಮಹಿಂದಾ ಅವರು ಅಧಿಕಾರವನ್ನು ತೊರೆಯಲು ನಿರಾಕರಿಸಿದ್ದಾರೆ.

ಇದನ್ನೂ ಓದಿ
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ, ನೇಪಾಳ, ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ನಿಧಿ ಕುಸಿತ: ಭಾರತದ ಸುತ್ತಲ ದೇಶಗಳಲ್ಲಿ ತಲ್ಲಣ

ಮಹಿಂದಾ ರಾಜಪಕ್ಸೆ ಅವರು ಭಾನುವಾರದಂದು ಪವಿತ್ರ ನಗರವಾದ ಅನುರಾಧಪುರಕ್ಕೆ ಭೇಟಿ ನೀಡಿದಾಗ , ಇಂಧನ, ಅಡುಗೆ ಅನಿಲ ಮತ್ತು ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇಡೀ ರಾಜಪಕ್ಸೆ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದ ಕದ್ದ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಬಯಸುತ್ತಾರೆ.

ಪ್ರಬಲ ಬೌದ್ಧ ಪಾದ್ರಿಗಳು ಸಹ ಮಧ್ಯಂತರ ಸರ್ಕಾರಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ಮತ್ತು ಸಚಿವ ಸಂಪುಟದ ರಾಜೀನಾಮೆಗೆ ಒತ್ತಡ ಹೇರಿದ್ದರು. ದೇಶದಲ್ಲಿ ಈಗ ತುರ್ತು ಪರಿಸ್ಥಿತಿಯಲ್ಲಿರುವ ರಾಜಕೀಯ ಅನಿಶ್ಚಿತತೆಯ ಮಧ್ಯೆ, ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ತನ್ನ ನಾಯಕ ಸಜಿತ್ ಪ್ರೇಮದಾಸ ಅವರಿಗೆ ಅಧ್ಯಕ್ಷ ಗೊಟಾಬಯ ನೀಡಿದ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಶ್ರೀಲಂಕಾದ ಪ್ರಮುಖ ಪ್ರತಿಪಕ್ಷ ಎಸ್​​ಜೆಬಿ ಭಾನುವಾರ ಹೇಳಿದೆ.

ಭಿನ್ನಮತೀಯ ಗುಂಪಿನ 11 ಪಕ್ಷಗಳ ಮೈತ್ರಿಯು ಬಿಕ್ಕಟ್ಟನ್ನು ಕೊನೆಗೊಳಿಸುವ ಮಾರ್ಗಗಳ ಕುರಿತು ಸೋಮವಾರ ಹೆಚ್ಚಿನ ಮಾತುಕತೆ ನಡೆಸಲಿದೆ ಎಂದು ಜಯಶೇಖರ ಹೇಳಿದರು. ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದರೆ ಮಧ್ಯಂತರ ಸರ್ಕಾರ ರಚನೆಯಾಗುವ ನಿರೀಕ್ಷೆಯಲ್ಲಿದ್ದಾರೆ ಇವರು. ಪೆಟ್ರೋಲ್ ಮತ್ತು ಗ್ಯಾಸ್ ಪಡೆಯಲು ಸರತಿ ಸಾಲುಗಳು ಹೆಚ್ಚಾದಂತೆ ಸಾರ್ವಜನಿಕ ಪ್ರತಿಭಟನೆಗಳು ಪ್ರತಿದಿನವೂ ಆವೇಗವನ್ನು ಪಡೆಯುತ್ತಿವೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

 

 

Published On - 3:03 pm, Mon, 9 May 22