Breaking News: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ

| Updated By: ಸುಷ್ಮಾ ಚಕ್ರೆ

Updated on: Jul 20, 2022 | 1:06 PM

Ranil Wickremesinghe: ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಇದುವರೆಗೂ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.

Breaking News: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ
ರಾನಿಲ್ ವಿಕ್ರಮಸಿಂಘೆ
Follow us on

ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ (Ranil Wickremesinghe) ಆಯ್ಕೆಯಾಗಿದ್ದಾರೆ. ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಇದುವರೆಗೂ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ಇಂದು ಶ್ರೀಲಂಕಾ ಅಧ್ಯಕ್ಷ (Sri Lanka President) ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಶ್ರೀಲಂಕಾದ ಪ್ರಧಾನಿಯೂ ಆಗಿರುವ ರಾನಿಲ್ ವಿಕ್ರಮಸಿಂಘೆ ವಿರುದ್ಧ ಶ್ರೀಲಂಕನ್ನರಿಗೆ ಅಪಾರ ಅಸಮಾಧಾನವಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಪ್ರತಿಭಟನಾಕಾರರು ರಾನಿಲ್ ವಿಕ್ರಮಸಿಂಘೆ ಅವರ ಮನೆಗೆ ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದ್ದರು. ಇದೀಗ ಅವರು ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಮತ್ತೊಮ್ಮೆ ಆಕ್ರೋಶ ಭುಗಿಲೇಳುವ ಸಾಧ್ಯತೆಯೂ ಇದೆ.

ಶ್ರೀಲಂಕಾದ ನೂತನ ಅಧ್ಯಕ್ಷರಾಗಿರುವ ರಾನಿಲ್ ವಿಕ್ರಮಸಿಂಘೆ ಈ ಹಿಂದೆ 6 ಬಾರಿ ಶ್ರೀಲಂಕಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ನಂತರ ರಾನಿಲ್ ಹಂಗಾಮಿ ಅಧ್ಯಕ್ಷರಾಗಿದ್ದರು.  73ರ ಹರೆಯದ ರಾನಿಲ್ ವಿಕ್ರಮಸಿಂಘೆ ಇಂದಿನ ರಹಸ್ಯ ಮತದಾನದಲ್ಲಿ 134 ಮತಗಳನ್ನು ಪಡೆಯುವ ಮೂಲಕ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಶ್ರೀಲಂಕಾ ಬಹಳ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ನನ್ನ ಮುಂದೆ ದೊಡ್ಡ ಸವಾಲುಗಳೇ ಇವೆ ಎಂದಿದ್ದಾರೆ.

ಇದನ್ನೂ ಓದಿ
Sri Lanka President: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾದ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ಹಿಂದೆಂದೂ ಕಂಡಿರದ ಪರಿಸ್ಥಿತಿ ಶ್ರೀಲಂಕಾದಲ್ಲಿದೆ, ಭಾರತವನ್ನು ಇದಕ್ಕೆ ಹೋಲಿಸುವುದು ಸರಿಯಲ್ಲ: ವಿದೇಶಾಂಗ ವ್ಯವಹಾರಗಳ ಸಚಿವ
Sri Lanka Crisis: ಶ್ರೀಲಂಕಾ ಬಿಕ್ಕಟ್ಟಿಗೆ ಮಧ್ಯಪ್ರವೇಶಿಸಲು ತಮಿಳುನಾಡು ಪಕ್ಷಗಳ ಒತ್ತಾಯ; ಇಂದು ಸರ್ವ ಪಕ್ಷ ಸಭೆ

ಗೊಟಬಯ ರಾಜಪಕ್ಸ ಶ್ರೀಲಂಕಾದಿಂದ ಸಿಂಗಾಪುರ್​ಗೆ ಪಲಾಯನ ಮಾಡಿದ್ದರು. ಅಲ್ಲಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಬಳಿಕ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದರು. ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಹಂಗಾಮಿ ಅಧ್ಯಕ್ಷರಾಗಿರುವ ರಾನಿಲ್ ವಿಕ್ರಮಸಿಂಘೆ, ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಬಂಡಾಯ ನಾಯಕ ಡಲ್ಲಾಸ್ ಅಲಹಪ್ಪೆರುಮ ಮತ್ತು ಎಡಪಕ್ಷವಾದ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ಡಿಸಾನಾಯಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

10 ದಿನಗಳ ಹಿಂದೆ ಶ್ರೀಲಂಕಾದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜನರು ಕೋಪಗೊಂಡು, ಪ್ರತಿಭಟನೆ ನಡೆಸಿದ್ದರು. ಶ್ರೀಲಂಕಾ ಅಧ್ಯಕ್ಷರ ಬಂಗಲೆಗೂ ಮುತ್ತಿಗೆ ಹಾಕಿದ್ದರು. ಇದಾದ ನಂತರ ಗೊಟಬಯ ರಾಜಪಕ್ಸ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ನಿನ್ನೆಯಷ್ಟೇ ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಮತ್ತು ಸಮಗಿ ಜನ ಬಲವೇಗಯ (SJB) ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರು ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯಲು ಮತ್ತು ಅಲಹಪ್ಪೆರುಮ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು.

 

Published On - 12:53 pm, Wed, 20 July 22