Sri Lanka President: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾದ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ಶ್ರೀಲಂಕಾದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜನರು ಕೋಪಗೊಂಡು, ಪ್ರತಿಭಟನೆ ನಡೆಸಿದ್ದರು. ಶ್ರೀಲಂಕಾ ಅಧ್ಯಕ್ಷರ ಬಂಗಲೆಗೂ ಮುತ್ತಿಗೆ ಹಾಕಿದ್ದರು. ಇದಾದ ನಂತರ ಗೊಟಬಯ ರಾಜಪಕ್ಸ ಸಿಂಗಾಪುರ್ಗೆ ಪಲಾಯನ ಮಾಡಿ, ರಾಜೀನಾಮೆ ನೀಡಿದ್ದರು.
ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಶ್ರೀಲಂಕಾದಿಂದ ಸಿಂಗಾಪುರ್ಗೆ ಪಲಾಯನ ಮಾಡಿದ್ದಾರೆ. ಅಲ್ಲಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಇದೀಗ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ (Ranil Wickremesinghe) ಅಧಿಕಾರ ವಹಿಸಿಕೊಂಡಿದ್ದಾರೆ. ಈ ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ರಾನಿಲ್ ವಿಕ್ರಮಸಿಂಘೆ, ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಬಂಡಾಯ ನಾಯಕ ಡಲ್ಲಾಸ್ ಅಲಹಪ್ಪೆರುಮ ಮತ್ತು ಎಡಪಕ್ಷವಾದ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ಡಿಸಾನಾಯಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. 10 ದಿನಗಳ ಹಿಂದೆ ಶ್ರೀಲಂಕಾದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜನರು ಕೋಪಗೊಂಡು, ಪ್ರತಿಭಟನೆ ನಡೆಸಿದ್ದರು. ಶ್ರೀಲಂಕಾ ಅಧ್ಯಕ್ಷರ ಬಂಗಲೆಗೂ ಮುತ್ತಿಗೆ ಹಾಕಿದ್ದರು. ಇದಾದ ನಂತರ ಗೊಟಬಯ ರಾಜಪಕ್ಸ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ಅವರು ರಾಜೀನಾಮೆ ನೀಡಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ.
- ಗೊಟಬಯ ರಾಜಪಕ್ಸ ಅವರ ಉತ್ತರಾಧಿಕಾರಿಗಾಗಿ ಇಂದು ಚುನಾವಣೆ ನಡೆಯಲಿದೆ. ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, 22 ಮಿಲಿಯನ್ ಜನರು ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ.
- ಶ್ರೀಲಂಕಾ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿರುವ ರಾನಿಲ್ ವಿಕ್ರಮಸಿಂಘೆ 6 ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ನಂತರ ರಾನಿಲ್ ಹಂಗಾಮಿ ಅಧ್ಯಕ್ಷರಾಗಿದ್ದರು. ಆದರೆ, ಅವರನ್ನು ರಾಜಪಕ್ಸ ಅವರ ಮಿತ್ರ ಎಂದು ನೋಡುವ ಪ್ರತಿಭಟನಾಕಾರರಿಂದ ರಾನಿಲ್ ತಿರಸ್ಕಾರಕ್ಕೊಳಗಾಗಿದ್ದಾರೆ.
- ಆರ್ಥಿಕ ಬಿಕ್ಕಟ್ಟಿನ ಕುರಿತು ಹಲವು ತಿಂಗಳ ಪ್ರತಿಭಟನೆ ಗೊಟಬಯ ರಾಜಪಕ್ಸ ಕಳೆದ ವಾರ ಸಿಂಗಾಪುರದಿಂದ ರಾಜೀನಾಮೆಯನ್ನು ಘೋಷಿಸುವಲ್ಲಿ ಅಂತ್ಯಗೊಂಡಿದೆ.
- ಗೊಟಬಯ ರಾಜಪಕ್ಸ ಅವರ ರಾಜೀನಾಮೆ ಶ್ರೀಲಂಕಾದ ರಾಜಕೀಯದಲ್ಲಿ ಕಳೆದ ಎರಡು ದಶಕಗಳಲ್ಲಿ ಪ್ರಾಬಲ್ಯ ಹೊಂದಿರುವ, ಒಂದು ಕಾಲದಲ್ಲಿ ಶ್ರೀಲಂಕಾ ದೇಶವೇ ತಮ್ಮದೆಂದು ಆಳುತ್ತಿದ್ದ ರಾಜಪಕ್ಸ ಕುಟುಂಬ ರಾಜಕೀಯಕ್ಕೆ ದೊಡ್ಡ ಪೆಟ್ಟು ಕೊಟ್ಟಿತು.
- ಗೊಟಬಯ ರಾಜಪಕ್ಸ ಅವರ ಸಹೋದರರು ಕೂಡ ಈ ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವ ಸ್ಥಾನವನ್ನು ತೆರಯಬೇಕಾಯಿತು.
- 73ರ ಹರೆಯದ ರಾನಿಲ್ ವಿಕ್ರಮಸಿಂಘೆ ಇಂದಿನ ರಹಸ್ಯ ಮತದಾನಕ್ಕೆ 225 ಸದಸ್ಯರ ಸಂಸತ್ತಿನಲ್ಲಿ ಅತಿದೊಡ್ಡ ಬಣವಾದ ರಾಜಪಕ್ಸಗಳ ಎಸ್‌ಎಲ್‌ಪಿಪಿಯ ಬೆಂಬಲವನ್ನು ಹೊಂದಿದ್ದಾರೆ. ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಅವರು ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದಾರೆ.
- ಪ್ರತಿಭಟನಾಕಾರರ ವಿರುದ್ಧ ರಾನಿಲ್ ವಿಕ್ರಮಸಿಂಘೆ ತೆಗೆದುಕೊಂಡ ಕಠಿಣ ನಿಲುವು ಗುಂಪು ಪ್ರತಿಭಟನಾಕಾರರನ್ನು ಇನ್ನಷ್ಟು ಉದ್ರಿಕ್ತಗೊಳಿಸಿತು. ಹೆಚ್ಚಿನ ಎಸ್‌ಎಲ್‌ಪಿಪಿ ಶಾಸಕರು ರಾನಿಲ್ ಪರವಾಗಿ ನಿಲ್ಲುತ್ತಾರೆ ಎಂದು ವಿರೋಧ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.
- ರಾನಿಲ್ ವಿಕ್ರಮಸಿಂಘೆ ಕಾನೂನು ಮತ್ತು ಸುವ್ಯವಸ್ಥೆಯ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ ಎಂದು ತಮಿಳು ಸಂಸದ ಧರ್ಮಲಿಂಗಂ ಸಿತಧನ್ ತಿಳಿಸಿದ್ದಾರೆ.
- ವಿಕ್ರಮಸಿಂಘೆ ರಾಜಪಕ್ಸಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಒಂದುವೇಳೆ ರಾನಿಲ್ ವಿಕ್ರಮಸಿಂಘೆ ಚುನಾವಣೆಯಲ್ಲಿ ಗೆದ್ದರೆ ಮತ್ತೆ ಬೀದಿಗಿಳಿಯುತ್ತಾರೆ.
- ಮತದಾನದ ಮುನ್ನಾದಿನದಂದು, ವಿರೋಧ ಪಕ್ಷದ ನಾಯಕ ಮತ್ತು ಸಮಗಿ ಜನ ಬಲವೇಗಯ (SJB) ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರು ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು. ಅವರು ಇನ್ನೋರ್ವ ಅಭ್ಯರ್ಥಿಯಾದ ಅಲಹಪ್ಪೆರುಮ ಅವರನ್ನು ಬೆಂಬಲಿಸಲು ನಿರ್ಧರಿಸಿದರು.
Published On - 8:32 am, Wed, 20 July 22