Sri Lanka Crisis ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಹಲವರಿಗೆ ಗಾಯ

Sri Lanka Crisis ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಹಲವರಿಗೆ ಗಾಯ
ಶ್ರೀಲಂಕಾದಲ್ಲಿ ಹಿಂಸಾಚಾರ

ಸಂಸದ ಅಮರಕೀರ್ತಿ ಅತ್ತುಕೋರಲ ಅವರು ನಿಟ್ಟಂಬುವದಲ್ಲಿ ಅವರ ಕಾರನ್ನು ತಡೆದಿದ್ದ ಇಬ್ಬರು ವ್ಯಕ್ತಿಗಳಿಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡರು. ಆಮೇಲೆ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಿದಾಗ ಶವವಾಗಿ ಪತ್ತೆಯಾಗಿದ್ದಾರೆ

TV9kannada Web Team

| Edited By: Rashmi Kallakatta

May 09, 2022 | 6:42 PM

ಶ್ರೀಲಂಕಾದ (Srilanka)  ಪ್ರಧಾನಿ ಮಹಿಂದಾ ರಾಜಪಕ್ಸೆ (Mahinda Rajapaksa) ಅವರ ಶಸ್ತ್ರಸಜ್ಜಿತ ಬೆಂಬಲಿಗರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ದಾಳಿ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಂಸದ ಅಮರಕೀರ್ತಿ ಅತ್ತುಕೋರಲ (MP Amarakeerthi Athukorala) ಅವರು ನಿಟ್ಟಂಬುವದಲ್ಲಿ ಅವರ ಕಾರನ್ನು ತಡೆದಿದ್ದ ಇಬ್ಬರು ವ್ಯಕ್ತಿಗಳಿಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡರು. ಆಮೇಲೆ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಿದಾಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 76ರ ಹರೆಯದ ಮಹಿಂದಾ ರಾಜಪಕ್ಸೆ ಅವರು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಕಿರಿಯ ಸಹೋದರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಗೆ ಕಳುಹಿಸಿದ್ದು, “ಹೊಸ ಐಕ್ಯ ಸರಕಾರ”ಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ, ಇದರಿಂದಾಗಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಮಾರ್ಗದರ್ಶನ ಮಾಡಲು ನೀವು ಸರ್ವಪಕ್ಷಗಳ ಸರ್ಕಾರವನ್ನು ನೇಮಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಈಗ ಸಚಿವ ಸಂಪುಟ ವಿಸರ್ಜನೆಯಾಗಿದೆ. ರಾಜಪಕ್ಸೆ ವಂಶದ ಸದಸ್ಯರ ನೇತೃತ್ವದ ಯಾವುದೇ ಸರ್ಕಾರವನ್ನು ಸೇರಲು ಅತಿದೊಡ್ಡ ವಿರೋಧ ಪಕ್ಷ ನಿರಾಕರಿಸಿದೆ.

ಇಂದು ಬೆಳಗ್ಗೆ ರಾಜಪಕ್ಸೆ ಕುಟುಂಬದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದಾಗ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರದ ದೊಡ್ಡ ಘರ್ಷಣೆಗಳು ಪ್ರಾರಂಭವಾದವು. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ವಾಣಿಜ್ಯ ರಾಜಧಾನಿ ಕೊಲಂಬೊದಲ್ಲಿ ಘರ್ಷಣೆಗಳು ಭುಗಿಲೆದ್ದಿದ್ದು ಇದು ಸಾವಿರಾರು ಜನರ ಪ್ರತಿಭಟನೆಗೆ ಕಾರಣವಾಯಿತು. ಎಎಫ್‌ಪಿ ವರದಿಯ ಪ್ರಕಾರ ಈ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 139 ಜನರು ಗಾಯಗೊಂಡಿದ್ದಾರೆ.

ಏಪ್ರಿಲ್ 9 ರಿಂದ ಕೊಲಂಬೊದ ಡೌನ್‌ಟೌನ್‌ನಲ್ಲಿರುವ ಅಧ್ಯಕ್ಷರ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ನಿರಾಯುಧ ಪ್ರತಿಭಟನಾಕಾರರ ಮೇಲೆ ಸರ್ಕಾರದ ಬೆಂಬಲಿಗರು ದಾಳಿ ನಡೆಸುತ್ತಿದ್ದಾರೆ. ಕನಿಷ್ಠ 78 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವಕ್ತಾರರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಪೊಲೀಸರು ಅಶ್ರುವಾಯು ಶೆಲ್‌ಗಳು ಮತ್ತು ಜಲ ಫಿರಂಗಿಗಳನ್ನು ಹಾರಿಸಿದ್ದು ಕೊಲಂಬೊದಲ್ಲಿ ತಕ್ಷಣದ ಕರ್ಫ್ಯೂ ಘೋಷಿಸಿದರು. ನಂತರ ಶ್ರೀಲಂಕಾದಾದ್ಯಂತ ವಿಸ್ತರಿಸಲಾಯಿತು. ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾವು ತಿಂಗಳುಗಟ್ಟಲೆ ವಿದ್ಯುತ್ ವ್ಯತ್ಯಯ ಮತ್ತು ಆಹಾರ, ಇಂಧನ ಮತ್ತು ಔಷಧಿಗಳ ಭೀಕರ ಕೊರತೆಯನ್ನು ಅನುಭವಿಸಿದೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada