
ಕೊಲಂಬೋ, ನವೆಂಬರ್ 30: ಶ್ರೀಲಂಕಾ ದೇಶವು ದಿತ್ವಾ ಚಂಡಮಾರುತದ (Ditwah cyclone) ಅಬ್ಬರಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಈ ಭೀಕರ ಸೈಕ್ಲೋನ್ಗೆ ಬಲಿಯಾದವರ ಸಂಖ್ಯೆ 200 ದಾಟಿದೆ. ಒಂದು ವರದಿ ಪ್ರಕಾರ ಸಾವಿನ ಸಂಖ್ಯೆ 218ಕ್ಕಿಂತ ಹೆಚ್ಚಾಗಿದೆ. ಸುಮಾರು 200-250 ಮಂದಿ ಕಾಣೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರೀ ಮಳೆ, ಗಾಳಿ, ಪ್ರವಾಹ, ಭೂಕುಸಿತಗಳು ಸಂಭವಿಸುತ್ತಲೇ ಇದ್ದು, ಲಕ್ಷಾಂತರ ಮನೆಗಳು ಮತ್ತು ಕುಟುಂಬಗಳು ಬಾಧಿಗೊಂಡಿವೆ. ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿ, ಸಕಲ ರಕ್ಷಣಾ ಕಾರ್ಯಾಚರಣೆಗಳನ್ನು (rescue operations) ಕೈಗೊಂಡಿದೆ. ಶ್ರೀಲಂಕಾಗೆ ಭಾರತವೂ ಕೂಡ ನೆರವಿನ ಹಸ್ತ ಚಾಚಿದೆ. ರಕ್ಷಣಾ ಕಾರ್ಯದಲ್ಲಿ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ.
ಭಾರತೀಯ ವಾಯುಪಡೆಯು ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆ ನಡೆಸಿ ಎಂಐ-17 ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. ಪ್ರವಾಹದಲ್ಲಿ ಸಿಲುಕಿದ್ದ ಹಲವು ಜನರನ್ನು ಈ ಆಪರೇಷನ್ನಲ್ಲಿ ರಕ್ಷಿಸಲಾಗಿದೆ. ಇದರಲ್ಲಿ ಪಾಕಿಸ್ತಾನೀ ಪ್ರಜೆಯೂ ಸೇರಿ ಹಲವು ವಿದೇಶೀಯರೂ ಇದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ 123 ಜನ ಸಾವು; ತುರ್ತು ಪರಿಸ್ಥಿತಿ ಘೋಷಣೆ
ಜರ್ಮನಿ, ಸೌತ್ ಆಫ್ರಿಕಾ, ಸ್ಲೊವೇನಿಯಾ, ಯುಕೆ, ಪಾಕಿಸ್ತಾನ, ಬೆಲಾರಸ್, ಆಸ್ಟ್ರೇಲಿಯಾ, ಇರಾನ್, ಬಾಂಗ್ಲಾದೇಶ, ಪೋಲ್ಯಾಂಡ್ ಮೊದಲಾದ ದೇಶಗಳ ಪ್ರಜೆಗಳನ್ನು ಭಾರತೀಯ ವಾಯುಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಕೊಲಂಬೋ ಏರ್ಪೋರ್ಟ್ನಲ್ಲಿದ್ದ 24 ಭಾರತೀಯರನ್ನು ವಾಪಸ್ ತವರಿಗೆ ಕರೆ ತರಲಾಗಿದೆ. ಸ್ಥಳೀಯ ಶ್ರೀಲಂಕನ್ನರನ್ನೂ ರಕ್ಷಿಸುವ ಕಾರ್ಯ ಮಾಡಲಾಗಿದೆ.
ಕಳೆದ ಹಲವು ದಿನಗಳಿಂದ ದಿತ್ವಾ ಚಂಡಮಾರುತದಿಂದ ಶ್ರೀಲಂಕಾದ್ಯಂತ ಭಾರೀ ಮಳೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ದ್ವೀಪ ರಾಷ್ಟ್ರ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಇದಾಗಿದೆ. ಈ ಸಂದರ್ಭದಲ್ಲಿ ಶ್ರೀಲಂಕಾಗೆ ರಕ್ಷಣಾ ಕಾರ್ಯದಲ್ಲಿ ನೆರವಿನ ಹಸ್ತ ಚಾಚಿದ ಮೊದಲ ದೇಶವೇ ಭಾರತವೇ ಆಗಿದೆ.
ಇದನ್ನೂ ಓದಿ: ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ್ ಬಂಧು ಅಡಿ ಭಾರತದಿಂದ ಸಹಾಯಹಸ್ತ
ದಿತ್ವಾ ಚಂಡಮಾರುತವು ಈಗ ಬಂಗಾಳ ಕೊಲ್ಲಿಯತ್ತ ಸಾಗುತ್ತಿದೆ. ಪುದುಚೇರಿ ಮತ್ತು ತಮಿಳುನಾಡಿನ ಹಲವೆಡೆ ನಿರಂತರ ಮಳೆಗೆ ಕಾರಣವಾಗಿದೆ. ರಾಮನಾಥಪುರಂ, ನಾಗಪಟ್ಟಣಂ ಮೊದಲಾದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ತಮಿಳುನಾಡಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ವಿಪರೀತ ಚಳಿಗೆ ಇದೇ ಚಂಡಮಾರುತ ಕಾರಣವಾಗಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ