ನವದೆಹಲಿ, ಸೆಪ್ಟೆಂಬರ್ 24: ಕೆನಡಾ ಮತ್ತು ಭಾರತ ಮಧ್ಯೆ ಬಿಕ್ಕಟ್ಟು ಉದ್ಬವವಾಗಿದ್ದರ ಲಾಭ ಪಡೆಯಲು ಭಾರತ ವಿರೋಧಿ ಶಕ್ತಿಗಳು ಯತ್ನಿಸುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿವೆ. ಭಾರತದ ವಿರುದ್ಧ ತೀವ್ರವಾಗಿ ಧ್ವನಿ ಎತ್ತುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ಬೆಂಬಲವಾಗಿ ಸೆರ್ರೇ ನಗರದಲ್ಲಿ ನಿನ್ನೆ (ಸೆ. 23) ಸಮಾವೇಶ ಆಯೋಜಿಸಲಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ ಬಹಳ ಕಡಿಮೆ ಎನ್ನಲಾಗಿದೆ. ‘ಸ್ಟ್ಯಾಂಡ್ ವಿತ್ ಟ್ರುಡೋ’ ಮೆರವಣಿಗೆಗೆ (Stand With Trudeau Rally) ಪಾಕಿಸ್ತಾನದ ಐಎಸ್ಐ ಬೆಂಬಲ ಇದ್ದೂ ಸಾಕಷ್ಟು ಜನರು ಸೇರಿಲ್ಲ ಎಂದು ಹೇಳಲಾಗುತ್ತಿದೆ.
ಸರೇ ನಗರದ ಸೆಂಟ್ರಲ್ ಸ್ಕೈ ಟ್ರೈನ್ ಸ್ಟೇಷನ್ನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಭಾರೀ ಜನರು ಸೇರುವ ನಿರೀಕ್ಷೆಯಲ್ಲಿ ಈ ಸ್ಥಳವನ್ನು ಆಯ್ದುಕೊಳ್ಳಲಾಗಿತ್ತು. ರಾಹತ್ ರಾಯ್ ಎಂಬ ಕೆನಡಿಯನ್ ವ್ಯಕ್ತಿ ಇದರ ಆಯೋಜಕನಾಗಿದ್ದ. ಈತ ಪಾಕಿಸ್ತಾನೀ ತಂಡಗಳನ್ನು ತನ್ನ ಸ್ಥಳಕ್ಕೆ ಕರೆತಂದು ಆಡಿಸುತ್ತಿರುತ್ತಾನೆ. ಈತನಿಗೆ ಐಎಸ್ಐ ಜೊತೆ ನಿಕಟ ಸಂಪರ್ಕ ಇದೆ. ಈತ ಸ್ಟ್ಯಾಂಡ್ ವಿತ್ ಟ್ರುಡೋ ಸಮಾವೇಶ ಆಯೋಜಿಸಿದ್ದು, ಕೆನಡಾ ಪ್ರಧಾನಿಗೆ ಯಾರೆಲ್ಲರೊಂದಿಗೆ ನಿಕಟ ಸಂಪರ್ಕ ಇದೆ ಎಂಬುದು ಗೊತ್ತಾಗುತ್ತದೆ ಎಂದು ಕೆನಡಾ ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಕರೀಮಾ ಬಲೂಚ್ ಹತ್ಯೆಯಾದಾಗ ಕೆನಡಾ ಯಾಕೆ ಮೌನವಹಿಸಿತ್ತು? ಮಾನವ ಹಕ್ಕು ಸಂಸ್ಥೆ ಪ್ರಶ್ನೆ; ಯಾರಿದು ಕರೀಮಾ?
ಖಲಿಸ್ತಾನೀ ಪ್ರತ್ಯೇಕತಾವಾದಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೆನಡಾದಲ್ಲಿ ಜೂನ್ ತಿಂಗಳಲ್ಲಿ ಹತ್ಯೆಗೈಯಲಾಗಿತ್ತು. ಈ ವಿಚಾರವನ್ನು ಕೆದಕಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಆ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಗುಪ್ತಚರರ ಮಾಹಿತಿಯನ್ನಾಧರಿಸಿ ಅವರು ಆರೋಪ ಮಾಡಿದ್ದಾರೆಯೇ ವಿನಃ ಇನ್ನೂ ಸಾಕ್ಷ್ಯಾಧಾರಗಳನ್ನು ತೋರಿಸಿಲ್ಲ.
ಟ್ರುಡೋ ಆರೋಪವನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ. ನಿಜ್ಜರ್ ಹತ್ಯೆಯಲ್ಲಿ ತನ್ನ ಕೈವಾಡ ಇಲ್ಲ ಎಂದು ಭಾರತ ಹೇಳಿದ್ದು, ಕೆನಡಿಯನ್ನರಿಗೆ ವೀಸಾ ಸೇವೆ ರದ್ದುಗೊಳಿಸಿದೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಹತ್ಯೆಗೆ ಕರೆ; ಗುರುದ್ವಾರದ ಪೋಸ್ಟರ್ ತೆಗೆಯಲು ಆದೇಶ
ಇತ್ತೀಚೆಗೆ ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಕುತೂಹಲದ ವಿಚಾರ ಹೊರಬಂದಿದೆ. ಕೆನಡಾ ಪ್ರಧಾನಿಯಾಗಲು ಯಾರು ಸೂಕ್ತ ವ್ಯಕ್ತಿ ಎನ್ನುವ ಸಮೀಕ್ಷೆಯಲ್ಲಿ ಹಾಲಿ ಪ್ರಧಾನಿ ಜಸ್ಟಿನ್ ಟ್ರುಡೋ ಎರಡನೇ ಸ್ಥಾನ ಪಡೆದಿದ್ದಾರೆ. ಈ ಸಮೀಕ್ಷೆಯಲ್ಲಿ ಈಗಿನ ವಿಪಕ್ಷ ನಾಯಕ ಪಿಯೆರೆ ಪೋಯಿಲೇವರ್ ಅವರಿಗೆ ಅತಿಹೆಚ್ಚು ಮಂದಿ ಬೆಂಬಲ ನೀಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ