ಬಾಗ್ದಾದ್: ಈದ್ ಅಲ್-ಅಧಾ ಹಬ್ಬದ ಮುನ್ನಾದಿನದಂದು ಸೋಮವಾರ ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿವೆ. ಹಬ್ಬದ ಮುನ್ನಾದಿನ ಮಾರುಕಟ್ಟೆಯಲ್ಲಿ ಜನರು ಖರೀದಿ ಕಾರ್ಯಗಳಲ್ಲಿ ನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ.
60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಗೊಂಡವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗಬಹುದು. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಸ್ಫೋಟದ ಪರಿಣಾಮವಾಗಿ ಕೆಲವು ಅಂಗಡಿಗಳು ಸುಟ್ಟುಹೋಗಿವೆ.
ಈ ದಾಳಿ ಸಾದರ್ ನಗರದ ವಹೈಲಾತ್ ಮಾರುಕಟ್ಟೆಯಲ್ಲಿ ನಡೆದಿದೆ ಎಂದು ಇರಾಕ್‌ನ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
“ಸ್ಥಳೀಯವಾಗಿ ತಯಾರಿಸಿದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ನಡೆಸಿದ ಭಯೋತ್ಪಾದಕ ದಾಳಿ” ಇದು ಎಂದು ಇರಾಕ್‌ನ ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸ್ಫೋಟದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾದ ವಿಡಿಯೊ ತುಣುಕುಗಳಲ್ಲಿ ರಕ್ತಸಿಕ್ತವಾದ ಮೃತದೇಹಗಳ ನಡುವೆ ಜನರ ಆಕ್ರಂದನವನ್ನು ಕಾಣಬಹುದು.
ತನ್ನ ಟೆಲಿಗ್ರಾಮ್ ಚಾನೆಲ್‌ಗೆ ಪೋಸ್ಟ್ ಮಾಡಿದ ಸಂದೇಶದಲ್ಲಿ, ಸಶಸ್ತ್ರ ಗುಂಪು ಐಎಸ್ಐಎಲ್ (ಐಎಸ್ಐಎಸ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.ತಮ್ಮ ಕಾರ್ಯಕರ್ತರೊಬ್ಬರು ಜನಸಮೂಹದ ನಡುವೆ ತನ್ನ ಸ್ಫೋಟಿಸಿದ್ದಾರೆ ಎಂದು ಐಎಸ್ಐಎಸ್ ಹೇಳಿದೆ.
#UPDATE Iraq market bomb kills nearly 30 on eve of Eid holiday https://t.co/QBD1ggUEOM pic.twitter.com/r5FzalVwQR
— AFP News Agency (@AFP) July 19, 2021
‘ಘೋರ ಅಪರಾಧ’
ಇರಾಕಿ ಅಧ್ಯಕ್ಷ ಬರ್ಹಮ್ ಸಾಲಿಹ್ ಬಾಂಬ್ ಸ್ಫೋಟವನ್ನು “ಘೋರ ಅಪರಾಧ” ಎಂದು ಹೇಳಿದ್ದು ಮೃತರಿಗೆ ಸಂತಾಪ ಸೂಚಿಸಿದರು. ಅವರು ಈದ್ ಮುನ್ನಾದಿನದಂದು ಸದರ್ ಸಿಟಿಯಲ್ಲಿರುವ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಾಲಿಹ್ ಟ್ವೀಟ್ ಮಾಡಿದ್ದು ಅವರು (ದುಷ್ಕರ್ಮಿಗಳು) ಒಂದು ಕ್ಷಣವೂ ಜನರನ್ನು ಸಂತೋಷದಿಂದಿರಲು ಬಿಡುವುದಿಲ್ಲ ಎಂದಿದ್ದಾರೆ.
“ಇದು ಇರಾಕ್ ನಲ್ಲಿ ದುಃಖದ ಈದ್ ರಾತ್ರಿ” ಎಂದು ಇಂಟರ್ನ್ಯಾಷನಲ್ ರೆಡ್ ಕ್ರಾಸ್ ಹೇಳಿದೆ. “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಆಳವಾದ ಸಹಾನುಭೂತಿ ಮತ್ತು ಸಂತಾಪ.”
ಈ ವರ್ಷ ಮೂರನೇ ಬಾರಿಗೆ ಜನದಟ್ಟಣೆ ಇರುವ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಏಪ್ರಿಲ್ ನಲ್ಲಿ ಸಾದರ್ ನಗರದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದರು. ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಜೋಡಿಸಲಾದ ಸ್ಫೋಟಕ ಸಾಧನದಿಂದ ಆ ಸ್ಫೋಟ ಸಂಭವಿಸಿದೆ.
ಪ್ರಧಾನ ಮಂತ್ರಿ ಮುಸ್ತಫಾ ಅಲ್-ಕಧಿಮಿ ಫೆಡರಲ್ ಪೊಲೀಸ್ ರೆಜಿಮೆಂಟ್‌ನ ಕಮಾಂಡರ್‌ನನ್ನು ಮಾರುಕಟ್ಟೆಯ ಪ್ರದೇಶದಲ್ಲಿ ಬಂಧನದಲ್ಲಿಡಲಾಗಿದೆ ಎಂದು ಇರಾಕಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರೊದ್ದಂ ನರಸಿಂಹ ಬರಹ | ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ, ಈಗ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೇ
Published On - 11:36 am, Tue, 20 July 21