ರಷ್ಯಾ ಆಟಾಟೋಪಕ್ಕೆ ಕಡಿವಾಣ: ಫಿನ್ಲೆಂಡ್, ಸ್ವೀಡನ್ಗೆ ನ್ಯಾಟೊ ಸದಸ್ಯತ್ವ ನೀಡಲು ಅಮೆರಿಕ ಸೆನೆಟ್ ಸಮ್ಮತಿ
ಮಿತ್ರರಾಷ್ಟ್ರಗಳಾಗಿರುವ ಸ್ವೀಡನ್ ಮತ್ತು ಫಿನ್ಲೆಂಡ್ಗೆ ಅಗತ್ಯ ಬೆಂಬಲ ಒದಗಿಸಲು ನಮ್ಮ ಬದ್ಧತೆಯನ್ನು ಅಮೆರಿಕ ಸೆನೆಟ್ನ ಈ ನಿರ್ಧಾರವು ಸಾರಿ ಹೇಳಿದೆ.
ವಾಷಿಂಗ್ಟನ್: ರಷ್ಯಾದೊಂದಿಗೆ ಹಲವು ಕಾರಣಗಳಿಂದ ಸಂಬಂಧ ಹಳಸಿರುವ ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳಿಗೆ ನ್ಯಾಟೊ (The North Atlantic Treaty Organization – NATO) ಸದಸ್ಯತ್ವ ನೀಡಲು ಅಮೆರಿಕದ ಸೆನೆಟ್ ಸಮ್ಮತಿಸಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಈ ಎರಡೂ ದೇಶಗಳು ರಷ್ಯಾ ಆಕ್ರಮಣದ ಭೀತಿ ಎದುರಿಸಿದ್ದವು. ಮಿಲಿಟರಿಗೆ ನೇಮಕಾತಿ ಹೆಚ್ಚಿಸುವುದೂ ಸೇರಿದಂತೆ ಹಲವು ರೀತಿಯಲ್ಲಿ ಸ್ವದೇಶದಲ್ಲಿ ಯುದ್ಧ ಸಿದ್ಧತೆ ತೀವ್ರಗೊಳಿಸಿದ್ದವು. ತಮ್ಮ ಸಂಸತ್ಗಳ ಒಪ್ಪಿಗೆ ಪಡೆದು ನ್ಯಾಟೊ ಸದಸ್ಯತ್ವಕ್ಕೂ ಅರ್ಜಿ ಹಾಕಿದ್ದವು. ನ್ಯಾಟೊ ಸದಸ್ಯ ರಾಷ್ಟ್ರಗಳ ಪೈಕಿ ಪ್ರಬಲ ಸೇನೆ ಹೊಂದಿರುವ ಟರ್ಕಿಯಿಂದ ತಕರಾರು ಎದುರಾಗಿತ್ತು. ಮಾತುಕತೆಯ ನಂತರ ಟರ್ಕಿ ಸಹ ಫಿನ್ಲೆಂಡ್ ಮತ್ತು ಸ್ವೀಡನ್ ಸೇರ್ಪಡೆಯ ವಿರೋಧದ ತೀವ್ರತೆ ಕಡಿಮೆ ಮಾಡಿತ್ತು. ಇದೀಗ ನಡೆದಿರುವ ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೊ ಒಕ್ಕೂಟಕ್ಕೆ ಫಿನ್ಲೆಂಡ್ ಮತ್ತು ಸ್ವೀಡನ್ ಸೇರ್ಪಡೆಗೆ ಅಮೆರಿಕದ ಸೆನೆಟ್ ಒಪ್ಪಿಗೆ ಸೂಚಿಸಿದೆ.
Today’s U.S. Senate ratification of @NATO membership for Finland and Sweden is a demonstration of U.S. support for our longtime partners. By joining NATO, Finland and Sweden will further strengthen our defense cooperation and benefit the entire Transatlantic Alliance.
— Ned Price (@StateDeptSpox) August 3, 2022
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕಾದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಬಹುಕಾಲದಿಂದ ಅಮೆರಿಕದ ಮಿತ್ರರಾಷ್ಟ್ರಗಳಾಗಿರುವ ಸ್ವೀಡನ್ ಮತ್ತು ಫಿನ್ಲೆಂಡ್ಗೆ ಅಗತ್ಯ ಬೆಂಬಲ ಒದಗಿಸಲು ನಮ್ಮ ಬದ್ಧತೆಯನ್ನು ಅಮೆರಿಕ ಸೆನೆಟ್ನ ಈ ನಿರ್ಧಾರವು ಸಾರಿ ಹೇಳಿದೆ. ಈ ಎರಡೂ ದೇಶಗಳ ಸೇರ್ಪಡೆಯಿಂದ ನ್ಯಾಟೊದ ಬಲ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
Published On - 6:47 am, Thu, 4 August 22