Swiss bank money: ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತದ ವ್ಯಕ್ತಿ, ಸಂಸ್ಥೆಗಳ 20 ಸಾವಿರ ಕೋಟಿಗೂ ಹೆಚ್ಚು ಹಣ; ದುಡ್ಡು ಅಲ್ಲೇಕೆ ಇಡ್ತಾರೆ ಗೊತ್ತಾ?

| Updated By: Srinivas Mata

Updated on: Jun 18, 2021 | 12:51 PM

ಭಾರತದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಸ್ವಿಸ್ ಬ್ಯಾಂಕ್​ಗಳಲ್ಲಿ ಇದೆ ಎಂಬ ಅಂಶವು ಎಸ್​ಎನ್​ಬಿ ಅಂಕಿ- ಅಂಶದಿಂದ ತಿಳಿದುಬಂದಿದೆ.

Swiss bank money: ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತದ ವ್ಯಕ್ತಿ, ಸಂಸ್ಥೆಗಳ 20 ಸಾವಿರ ಕೋಟಿಗೂ ಹೆಚ್ಚು ಹಣ; ದುಡ್ಡು ಅಲ್ಲೇಕೆ ಇಡ್ತಾರೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಭಾರತೀಯ ವ್ಯಕ್ತಿಗಳು ಹಾಗೂ ಸಂಸ್ಥೆಗಳು, ಭಾರತ ಮೂಲದ ಶಾಖೆಗಳು ಹಾಗೂ ಇತರ ಹಣಕಾಸು ಸಂಸ್ಥೆಗಳ ಮೂಲಕ ಇಡುವ ಹಣ ಸ್ವಿಸ್​ ಬ್ಯಾಂಕ್​ಗಳಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್ (20,700 ಕೋಟಿ ರೂಪಾಯಿಗೂ ಹೆಚ್ಚು) ಆಗಿದೆ. ಇದು 2020ರ ಅಂಕಿ- ಅಂಶ ಆಗಿದ್ದು, ಸೆಕ್ಯೂರಿಟೀಸ್ ಮತ್ತು ಆ ರೀತಿಯ ಇನ್​ಸ್ಟ್ರುಮೆಂಟ್​ಗಳ ಪ್ರಮಾಣದಲ್ಲಿ ಹೆಚ್ಚಾಗಿದ್ದರೆ, ಗ್ರಾಹಕರ ಠೇವಣಿ ಇಳಿಮುಖವಾಗಿದೆ. ಗುರುವಾರದಂದು ಬಿಡುಗಡೆಯಾದ ಸ್ವಿಟ್ಜರ್​​ಲೆಂಡ್​ನ ಕೇಂದ್ರ ಬ್ಯಾಂಕ್ ದತ್ತಾಂಶಗಳಿಂದ ಇದು ತಿಳಿದುಬಂದಿದೆ. 2019ರಲ್ಲಿ ಭಾರತೀಯ ಗ್ರಾಹಕರು ಸ್ವಿಸ್​ ಬ್ಯಾಂಕ್​ಗಳಲ್ಲಿ ಇಟ್ಟಿದ್ದ ಮೊತ್ತ ಸರಾಸರಿ 899 ಮಿಲಿಯನ್ ಸ್ವಿಸ್ ಫ್ರಾಂಕ್ಸ್ (6,625 ಕೋಟಿ ರೂಪಾಯಿ) ಇತ್ತು. ಅದಕ್ಕೂ ಮುನ್ನ ಇದ್ದ ಇಳಿಕೆ ಹಾದಿ ಉಲ್ಟಾ ಆಗಿತ್ತು. ಇನ್ನು ಮೊತ್ತವು 13 ವರ್ಷದ ಗರಿಷ್ಠ ಮಟ್ಟವನ್ನು ತಲುಪಿತ್ತು. 2006ರಲ್ಲಿ ಈ ಪ್ರಮಾಣ 6.5 ಬಿಲಿಯನ್ ಸ್ವಿಸ್ ಫ್ರಾಂಕ್​ನಷ್ಟಿತ್ತು. ಆ ನಂತರ ಕೆಲವು ವರ್ಷಗಳು, ಅಂದರೆ 2011, 2013 ಮತ್ತು 2017 ಹೀಗೆ ಕೆಲವು ವರ್ಷಗಳನ್ನು ಹೊರತುಪಡಿಸಿ, ಠೇವಣಿ ಪ್ರಮಾಣ ಇಳಿಕೆ ಹಾದಿಯಲ್ಲಿಯೇ ಇದೆ ಎಂಬುದನ್ನು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್​ಎನ್​ಬಿ) ದತ್ತಾಂಶ ತಿಳಿಸಿದೆ.

ಒಟ್ಟಾರೆಯಾಗಿ 2 ಟ್ರಿಲಿಯನ್ ಸ್ವಿಸ್ ಫ್ರಾಂಕ್​ಗೆ ಏರಿಕೆ
2020ರ ಕೊನೆಗೆ ಭಾರತೀಯ ಗ್ರಾಹಕರಿಗೆ ಸ್ವಿಸ್​ ಬ್ಯಾಂಕ್​ಗಳಿಂದ 20,706 ಕೋಟಿ ರೂಪಾಯಿ ಒಟ್ಟಾರೆಯಾಗಿ ಪಾವತಿ ಮಾಡಬೇಕಿದೆ. ಅದರಲ್ಲಿ ಗ್ರಾಹಕರ ಠೇವಣಿ 4 ಸಾವಿರ ಕೋಟಿ ರೂ., ಇತರ ಬ್ಯಾಂಕ್​ಗಳಿಂದ 3,100 ಕೋಟಿ ರೂ.ಗೂ ಹೆಚ್ಚು, ಫೈನಾನ್ಷಿಯರೀಸ್ ಅಥವಾ ಟ್ರಸ್ಟ್​ಗಳ ಮೂಲಕ 16.5 ಕೋಟಿ, ಬಾಂಡ್ಸ್, ಸೆಕ್ಯೂರಿಟೀಸ್ ಮತ್ತು ಇತರ ಹಣಕಾಸು ಇನ್​ಸ್ಟ್ರುಮೆಂಟ್​ಗಳ ರೂಪದಲ್ಲಿ ಹತ್ತಿರ ಹತ್ತಿರ 13,500 ಕೋಟಿ ರೂಪಾಯಿಯನ್ನು ಹಿಂತಿರುಗಿಸಬೇಕು. ಗ್ರಾಹಕರ ಖಾತೆ ಠೇವಣಿ ಎಂದು ಗುರುತಿಸಿರುವಂಥದ್ದು 2019ರ ಕೊನೆಗೆ 550 ಮಿಲಿಯನ್ ಸ್ವಿಸ್ ಫ್ರಾಂಕ್​ನಿಂದ ಕಡಿಮೆ ಆಗಿದೆ. ಇನ್ನು ವಿಶ್ವಾಸಾರ್ಹ ಮಧ್ಯವರ್ತಿಗಳಿಂದ ಬರುವ ಮೊತ್ತ ಕೂಡ ಅರ್ಧಕ್ಕೂ ಹೆಚ್ಚು ಇಳಿಕೆಯಾಗಿ, 7.4 ಮಿಲಿಯನ್​ಗೆ ತಲುಪಿದೆ. ಇದೇ ಅವಧಿಯಲ್ಲಿ ಇತರ ಬ್ಯಾಂಕ್​ಗಳ ಮೂಲಕ ಬಂದ ಹಣವು 88 ಮಿಲಿಯನ್ ಸ್ವಿಸ್​ ಫ್ರಾಂಕ್​ಗಿಂತ ಮೇಲೇರಿದೆ. ಅತಿ ದೊಡ್ಡ ಮಟ್ಟದಲ್ಲಿ ಜಾಸ್ತಿ ಆಗಿರುವುದು ಗ್ರಾಹಕರಿಗೆ ಬಾಕಿ ಇರುವ ಇತರ ಮೊತ್ತ. 2019ರಲ್ಲಿ 253 ಮಿಲಿಯನ್ ಸ್ವಿಸ್ ಫ್ರಾಂಕ್ ಇದ್ದದ್ದು ಆರು ಪಟ್ಟು ಹೆಚ್ಚಾಗಿದೆ.

ಒಟ್ಟಾರೆಯಾಗಿ ಸ್ವಿಸ್ ಬ್ಯಾಂಕ್ ಠೇವಣಿ 2020ರಲ್ಲಿ ಹತ್ತಿರ ಹತ್ತಿರ 2 ಟ್ರಿಲಿಯನ್ ಸ್ವಿಸ್ ಫ್ರಾಂಕ್​ಗೆ ಏರಿಕೆಯಾಗಿದೆ. ಅದರಲ್ಲಿ 600 ಬಿಲಿಯನ್ ಸ್ವಿಸ್ ಬ್ಯಾಂಕ್ ವಿದೇಶೀ ಗ್ರಾಹಕರ ಠೇವಣಿ ಒಳಗೊಂಡಿದೆ. 377 ಬಿಲಿಯನ್​ ಫ್ರಾಂಕ್​ನೊಂದಿಗೆ ಸ್ವಿಸ್​ ಬ್ಯಾಂಕ್​ಗಳಲ್ಲಿ ಹಣ ಇಟ್ಟಿರುವುದರಲ್ಲಿ ಯುನೈಟೆಡ್ ಕಿಂಗ್​ಡಮ್ ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಅಮೆರಿಕ ದೇಶಕ್ಕೆ ಸಂಬಂಧಿಸಿದ್ದು 152 ಬಿಲಿಯನ್ ಫ್ರಾಂಕ್ ಇದೆ. ಹೀಗೆ ಎರಡು ದೇಶಗಳು ಮಾತ್ರ 100 ಬಿಲಿಯನ್ ದಾಟಿವೆ. ಇತರ ಟಾಪ್ 10 ದೇಶಗಳು ಅಂದರೆ ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪೂರ್, ಲಕ್ಸೆಂಬರ್ಗ್, ಕೇಯ್ಮನ್ ಐಲ್ಯಾಂಡ್ಸ್ ಮತ್ತು ಬಹಾಮಾಸ್ ಇದೆ.

51ನೇ ಸ್ಥಾನದಲ್ಲಿ ಭಾರತ
ಭಾರತದವು 51ನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್, ನಾರ್ವೆ, ಡೆನ್ಮಾರ್ಕ್, ಹಂಗೇರಿ, ಮಾರಿಷಿಯಸ್, ಪಾಕಿಸ್ತಾನ, ಬಾಂಗ್ಲಾದೇಶ್, ಶ್ರೀಲಂಕಾ ಈ ಎಲ್ಲ ದೇಶಗಳಿಗಿಂತ ಮುಂದಿದೆ. ಆದರೆ ಚೀನಾ ಮತ್ತು ರಷ್ಯಾಗಿಂತ ಕೆಳಗಿದೆ. ಆದರೆ ದಕ್ಷಿಣ ಆಫ್ರಿಕಾ, ಬ್ರೆಜಿಲ್​ಗಿಂತ ಮೇಲಿದೆ. ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿ ಇರುವ ದೇಶಗಳೆಂದರೆ ನೆದರ್​ಲೆಂಡ್ಸ್, ಯುಎಇ, ಜಪಾನ್, ಆಸ್ಟ್ರೇಲಿಯಾ, ಇಟಲಿ, ಸೌದಿ ಅರೇಬಿಯಾ, ಇಸ್ರೇಲ್, ಐರ್ಲೆಂಡ್, ಟರ್ಕಿ, ಮೆಕ್ಸಿಕೋ, ಆಸ್ಟ್ರಿಯಾ, ಗ್ರೀಸ್, ಈಜಿಪ್ಟ್, ಕೆನಡಾ, ಕತಾರ್, ಬೆಲ್ಜಿಯಂ, ಬರ್ಮುಡಾ, ಕುವೈತ್, ದಕ್ಷಿಣ ಕೊರಿಯಾ, ಪೋರ್ಚುಗಲ್, ಜೋರ್ಡಾನ್, ಥಾಯ್ಲೆಂಡ್, ಅರ್ಜೆಂಟೀನಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತಿತರ ದೇಶಗಳಿವೆ.

ಸ್ವಿಸ್​ ಬ್ಯಾಂಕ್​ನಲ್ಲಿ ಹಣ ಇದೆ ಎಂದಾಕ್ಷಣ ಅದು ಕಪ್ಪು ಹಣವೇ ಎಂದಾಗಬೇಕಿಲ್ಲ. ಬಹಳ ಮಂದಿಗೆ ಆ ಬಗ್ಗೆ ತಪ್ಪಾದ ಕಲ್ಪನೆ ಇದೆ.ಸ್ವಿಸ್​ ಬ್ಯಾಂಕ್​ ಖಾತೆಗಳ ಫಾಯಿದೆ ಏನೆಂದರೆ, ಹಣಕಾಸು ಅಪಾಯ ಕಡಿಮೆ ಇರುತ್ತದೆ. ಖಾಸಗಿತನಕ್ಕೆ ಹೆಚ್ಚು ಆದ್ಯತೆ ಇರುತ್ತದೆ. ಸ್ವಿಸ್ ಕಾನೂನಿನ ಪ್ರಕಾರ ಅಲ್ಲಿನ ಬ್ಯಾಂಕ್​ಗಳ ಬಳಿ ಹೆಚ್ಚಿನ ಬಂಡವಾಳ ಇರುತ್ತದೆ ಹಾಗೂ ಠೇವಣಿದಾರರಿಗೆ ಪ್ರಬಲ ಸುರಕ್ಷತೆ ದೊರೆಯುತ್ತದೆ. ಯಾವುದೇ ಹಣಕಾಸು ಬಿಕ್ಕಟ್ಟು ಮತ್ತು ಸಂಘರ್ಷ ಉದ್ಭವಿಸಿದರೂ ಠೇವಣಿದಾರರ ಹಣಕ್ಕೆ ಯಾವುದೇ ಮೋಸ ಆಗುವುದಿಲ್ಲ. ಅಂದಹಾಗೆ 2020ರಲ್ಲಿ ಅಮೆರಿಕ ಹಾಗೂ ಯುಕೆ ಗ್ರಾಹಕರು ಠೇವಣಿ ಮಾಡುವುದು ಕಡಿಮೆ ಆಗಿದೆ. ಬಾಂಗ್ಲಾದೇಶ್​ನಿಂದ ವೈಯಕ್ತಿಕವಾಗಿ ಹಾಗೂ ಸಂಸ್ಥೆಗಳು ಹಣ ಇಡುವುದು ಸಹ ಕಡಿಮೆ ಆಗಿದೆ. ಆದರೆ ಪಾಕಿಸ್ತಾನದ ಕಡೆಯಿಂದ ಠೇವಣಿ ಆಗಿರುವ ಮೊತ್ತ ದುಪ್ಪಟ್ಟಾಗಿ 642 ಮಿಲಿಯನ್ ಫ್ರಾಂಕ್ ಆಗಿದೆ. ಹೇಗೆ ಭಾರತದಲ್ಲಿ ಕಪ್ಪು ಹಣದ ಆರೋಪ ಕೇಳಿಬರುವಂತೆ ಪಾಕಿಸ್ತಾನದಲ್ಲೂ ಕೇಳಿಬರುತ್ತಿದೆ. ಅಂದ ಹಾಗೆ ಅಂಕಿ- ಅಂಶಗಳ ಪ್ರಕಾರ, 2020ರ ಕೊನೆಗೆ ಸ್ವಿಟ್ಜರ್​ಲೆಂಡ್​ನಲ್ಲಿ 243 ಬ್ಯಾಂಕ್​ಗಳಿವೆ.

ಇದನ್ನೂ ಓದಿ: ಬ್ಲಾಕ್ ಮನಿ ಇರೋ ಸ್ವಿಸ್ ಈಗ ಖುಲ್ಲಂ ಖುಲ್ಲಾ, ಕಪ್ಪು ಕುಳಗಳ ಸೆಕೆಂಡ್ ಲಿಸ್ಟ್ ರಿವೀಲ್

(Indian individuals and firms parked more than Rs 20,000 crores in Swiss banks in 2020. Why people park money in swiss banks. Here is the details)

Published On - 12:49 pm, Fri, 18 June 21