ಕಾಬೂಲ್: ಸರ್ಕಾರಿ ಪಡೆಗಳೊಂದಿಗೆ ಭೀಕರ ಕಾದಾಟ ನಡೆಸಿದ ತಾಲೀಬಾನ್ ಪಡೆಗಳು ಅಫ್ಗಾನಿಸ್ತಾನದ ಪ್ರಮುಖ ಪ್ರಾಂತ್ಯ ಎನಿಸಿದ ಕಂದಹಾರ್ ಜಿಲ್ಲೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕಂದಹಾರ್ ದಕ್ಷಿಣದ ಪಂಜ್ವಾಯಿ ಜಿಲ್ಲೆ ಸಹ ತಾಲೀಬಾನ್ ಹಿಡಿತಕ್ಕೆ ಸಿಕ್ಕಿದೆ. ಅಮೆರಿಕ ಮತ್ತು ಅದರ ಮಿತ್ರಪಡೆಗಳು ಕಾಬೂಲ್ ಸಮೀಪದ ಬಾರ್ಗಾಮ್ ವಾಯುನೆಲೆ ತೊರೆದ ಕೇವಲ ಎರಡು ದಿನಗಳಲ್ಲಿ ತಾಲೀಬಾನ್ ಮೇಲುಗೈ ಸಾಧಿಸಿರುವುದು ಮಹತ್ವದ ಬೆಳವಣಿಗೆ ಎನಿಸಿದೆ.
ಪಂಜ್ವಾಯಿ ಜಿಲ್ಲೆಯನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ತಾಲೀಬಾನ್ ಬಹುಕಾಲದಿಂದ ಪ್ರಯತ್ನಿಸುತ್ತಿತ್ತು. ಪಂಜ್ವಾಯಿ ನಗರವು ತಾಲೀಬಾನ್ ವಶಕ್ಕೆ ಹೋದ ಹಿನ್ನೆಲೆಯಲ್ಲಿ ಅಲ್ಲಿಂದ ಸಾವಿರಾರು ಕುಟುಂಬಗಳು ಹೊರ ನಡೆಯತ್ತಿವೆ. ಪಂಜ್ವಾಯಿ ನಗರದಲ್ಲಿ ಶೀಘ್ರದಲ್ಲಿಯೇ ಇಸ್ಲಾಮಿಕ್ ಷರಿಯಾ ಕಾನೂನನ್ನು ತಾಲೀಬಾನ್ ಜಾರಿ ಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ತಾಲೀಬಾನ್ ಪ್ರಕಾರ ಅದು ಮಾತ್ರ ಇಸ್ಲಾಮ್ನ ನಿಜವಾದ ಜೀವನ ವಿಧಾನವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮತ್ತು ರಾಜ್ಯಪಾಲರ ಕಚೇರಿ ಕಟ್ಟಡವನ್ನು ತಾಲೀಬಾನ್ ವಶಪಡಿಸಿಕೊಂಡಿದೆ ಎಂದು ಪಂಜ್ವಾಯಿ ಜಿಲ್ಲಾ ರಾಜ್ಯಪಾಲ ಹಸ್ತಿ ಮೊಹಮದ್ ಹೇಳಿದರು. ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಫ್ಗಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದ ನಂತರ ತಾಲೀಬಾನ್ ದಾಳಿ ಹೆಚ್ಚಾಗಿದೆ. ಅಮೆರಿಕ ಪಡೆಗಳು ಅಫ್ಗನ್ನಿಂದ ಹೊರನಡೆಯುವ ಪ್ರಕ್ರಿಯೆ ಅಂತಿಮಘಟ್ಟಕ್ಕೆ ಬರುತ್ತಿದ್ದಂತೆಯೇ ತಾಲೀಬಾನ್ ಗ್ರಾಮೀಣ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾಗಿದೆ.
ಪಂಜ್ವಾಯಿ ಜಿಲ್ಲೆಯು ತಾಲೀಬಾನ್ ಹಿಡಿತಕ್ಕೆ ಸಿಕ್ಕ ಬಗ್ಗೆ ಕಂದಹಾರ್ ಪ್ರಾದೇಶಿಕ ಆಡಳಿತ ಮಂಡಳಿಯು ಸರ್ಕಾರಿ ಪಡೆಗಳನ್ನು ಹೊಣೆಯಾಗಿಸಿದೆ. ಅಮೆರಿಕ ಪಡೆಗಳು ಅಫ್ಗಾನಿಸ್ತಾನದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭವಾದ ನಂತರ ಸರ್ಕಾರಿ ಪಡೆಗಳು ಉದ್ದೇಶಪೂರ್ವಕವಾಗಿಯೇ ಯುದ್ಧಭೂಮಿಯಿಂದ ಹಿಂದೆ ಸರಿದವು ಎಂದು ಆಡಳಿತ ಮಂಡಳಿಯು ಆರೋಪಿಸಿದೆ. ಅಫ್ಗಾನಿಸ್ತಾನದ 421 ಜಿಲ್ಲೆಗಳ ಪೈಕಿ 100 ಜಿಲ್ಲೆಗಳನ್ನು ತಾಲೀಬಾನ್ ನಿಯಂತ್ರಿಸುತ್ತಿದೆ. ಕಂದಹಾರ್ ಪ್ರಾಂತ್ಯದಲ್ಲಿ ತಾಲೀಬಾನ್ ವಶಕ್ಕೆ ಹೋದ ಐದನೇ ಜಿಲ್ಲೆಯಿದು.
ಅಫ್ಗನ್ನ ಉತ್ತರ ಗಡಿಯುದ್ದಕ್ಕೂ ಸರ್ಕಾರಿ ಪಡೆಗಳು ತಜಕಿಸ್ತಾನಕ್ಕೆ ಪಲಾಯನ ಮಾಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ಶನಿವಾರ ಸಂಜೆ 6.30ಕ್ಕೆ 300ಕ್ಕೂ ಹೆಚ್ಚು ಅಫ್ಗನ್ ಸೈನಿಕರು ಗಡಿದಾಟಿ ನಮ್ಮ ದೇಶಕ್ಕೆ ಬಂದಿದ್ದಾರೆ ಎಂದು ತಜಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ. ಮಾನವೀಯತೆಯ ದೃಷ್ಟಿಯಿಂದ ಅವರಿಗೆ ನಮ್ಮ ದೇಶದಲ್ಲಿ ಇರಲು ಅವಕಾಶ ನೀಡಲಾಗಿದೆ ಎಂದು ತಜಕ್ ಅಧಿಕಾರಿಗಳು ಹೇಳಿದ್ದಾರೆ.
(Taliban Fighters captured Kandahar districts Afghanistan forces flee to Tajikistan)
ಇದನ್ನೂ ಓದಿ: ಅಫ್ಗಾನಿಸ್ತಾನ | ಮಕ್ಕಳನ್ನು ಗುರಿಯಾಗಿಸಿ ಬಾಂಬ್ ದಾಳಿ; 11 ಚಿಣ್ಣರು ಬಲಿ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪರ ಕೆಲಸ ಮಾಡಿದ್ದ ರಷ್ಯಾಗೆ ಅಮೆರಿಕ ಆರ್ಥಿಕ ನಿರ್ಬಂಧ: ಭಾರತ ಸೇರಿ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ
Published On - 6:41 pm, Sun, 4 July 21