ತಾಲಿಬಾನ್ ಉಡಾಳರ ಹೊಸ ಅವತಾರ: ಭಯೋತ್ಪಾದನೆ ಹೆಚ್ಚುವ ಆತಂಕದಲ್ಲಿ ವಿಶ್ವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 19, 2021 | 8:28 PM

ಅತ್ಯಾಧುನಿಕ ಶಸ್ತ್ರಾಸ್ತ್ರ, ರಾತ್ರಿ ಕಾರ್ಯಾಚರಣೆಗೆ ಬಳಸುವ ಕನ್ನಡಕಗಳೊಂದಿಗೆ ತರಬೇತಿ ಪಡೆಯುತ್ತಿರುವ ‘ಬದ್ರಿ 313’ ವಿಶೇಷ ಘಟಕವನ್ನು ತಾಲಿಬಾನ್ ಇದೇ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದೆ.

ತಾಲಿಬಾನ್ ಉಡಾಳರ ಹೊಸ ಅವತಾರ: ಭಯೋತ್ಪಾದನೆ ಹೆಚ್ಚುವ ಆತಂಕದಲ್ಲಿ ವಿಶ್ವ
ತಾಲಿಬಾನ್ ರೂಪಿಸಿಕೊಂಡಿರುವ ವಿಶೇಷ ಪಡೆ ಬದ್ರಿ 313
Follow us on

ಅಫ್ಘಾನಿಸ್ತಾನವನ್ನು ಇಡಿಯಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು ಎಂದರೆ ಈವರೆಗೆ ಉದ್ದನೆ ಕುರ್ತಾ, ದೊಗಲೆ ಪೈಜಾಮ, ಇಷ್ಟುದ್ದ ಗಡ್ಡಧಾರಿಗಳ ಕೈಲಿ ಎಕೆ-47 ಇರುತ್ತಿದ್ದ ಚಿತ್ರಗಳೇ ನೆನಪಿಗೆ ಬರುತ್ತಿದ್ದವು. ಆದರೆ ಇದೀಗ ತಾಲಿಬಾನ್ ಹರಿಬಿಟ್ಟಿರುವ ವಿಡಿಯೊ ತುಣುಕು ಈ ಕಲ್ಪನೆಯನ್ನು ಬದಲಿಸಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ, ರಾತ್ರಿ ಕಾರ್ಯಾಚರಣೆಗೆ ಬಳಸುವ ಕನ್ನಡಕಗಳೊಂದಿಗೆ ತರಬೇತಿ ಪಡೆಯುತ್ತಿರುವ ‘ಬದ್ರಿ 313’ ವಿಶೇಷ ಘಟಕವನ್ನು ತಾಲಿಬಾನ್ ಇದೇ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದೆ.

ವಿಶ್ವದ ಯಾವುದೇ ಅತ್ಯಾಧುನಿಕ ಮಿಲಿಟರಿ ಪಡೆಗಳಿಗೆ ಕಡಿಮೆ ಇಲ್ಲ ಎಂಬಂತೆ ಇರುವ ಈ ಘಟಕವು ತಾಲಿಬಾನ್​ಗೆ ಒಂದು ಸೇನೆಯನ್ನು ನಿರ್ವಹಿಸುವ ಸಾಮರ್ಥ್ಯ ಇದೆ ಎಂಬುದನ್ನು ಬಿಂಬಿಸಲು ಮಾಡಿದ ಪ್ರಯತ್ನದಂತಿದೆ. ನ್ಯಾಟೊ ಪಡೆಗಳಿಂದ ಅತ್ಯಾಧುನಿಕ ತರಬೇತಿ ಪಡೆದಿದ್ದ ಅಫ್ಘಾನ್ ಯೋಧರನ್ನು ಬಂದೂಕು ಹಿಡಿದ ಕಚ್ಚಾ ಹೋರಾಟಗಾರರಂತೆ ಕಾಣಿಸುವ ತಾಲಿಬಾನಿಗಳು ಹೇಗೆ ಮಣಿಸಿದರು ಎಂಬ ಪ್ರಶ್ನೆಯನ್ನು ಜಗತ್ತು ಕೇಳಿಕೊಳ್ಳುತ್ತಿರುವ ಬೆನ್ನಿಗೆ ಕಾಬೂಲ್ ವಶಪಡಿಸಿಕೊಳ್ಳುವ ಒಂದು ತಿಂಗಳು ಮೊದಲು ತಾಲಿಬಾನ್ ಪೋಸ್ಟ್ ಮಾಡಿದ್ದ ವಿಡಿಯೊ ವೈರಲ್ ಆಗಿದೆ.

ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಉದ್ದೇಶದಿಂದ ರೂಪುಗೊಂಡಿದ್ದು ಬದ್ರಿ 313. ಪ್ರವಾದಿ ಮೊಹಮ್ಮದರು ಮುನ್ನಡೆಸಿದ ಮೊದಲ ವಿಜೇತ ಸೇನೆಯ ನೆನಪಿಗೆ ತಾಲಿಬಾನಿಗಳು ಈ ಹೆಸರನ್ನು ತಮ್ಮ ವಿಶೇಷ ಘಟಕಕ್ಕೆ ಕೊಟ್ಟುಕೊಂಡಿದ್ದಾರೆ. ಕಾಬೂಲ್ ಸೇರಿದಂತೆ ಹಲವು ನಗರಗಳನ್ನು ವಶಪಡಿಸಿಕೊಳ್ಳಲು ಈ ಪಡೆಗಳು ತಾಲಿಬಾನ್​ಗೆ ನೆರವಾದವು. ಇದೀಗ ಕಾಬೂಲ್ ನಗರದಲ್ಲಿ ಅಮೆರಿಕ ಯುದ್ಧವಾಹನಗಳಲ್ಲಿ ಇದೇ ವಿಶೇಷ ಘಟಕದ ಯೋಧರು ಗಸ್ತು ತಿರುಗುತ್ತಿದ್ದಾರೆ.

ರಕ್ಷಣೆ, ದಾಳಿ, ಮನೆಗಳ ತಪಾಸಣೆ, ನಗರಗಳಲ್ಲಿ ಕಾರ್ಯಾಚರಣೆ ಸೇರಿದಂತೆ ಭದ್ರತೆಗೆ ಸಂಬಂಧಿಸಿದಂತೆ ತಾಲಿಬಾನ್​ನ ಎಲ್ಲ ಅಗತ್ಯಗಳನ್ನು ಪೂರೈಸುವ ಸ್ಥಿತಿಯಲ್ಲಿ ಬದ್ರಿ 313 ಇದೆ. ಅಮೆರಿಕ ನಿರ್ಮಿತ ಎಂ 4 ರೈಫಲ್​ಗಳು, ನೈಟ್ ವಿಷನ್ ಉಪಕರಣಗಳು, ದೇಹ ರಕ್ಷಣೆಗೆ ಬೇಕಾದ ಸವಲತ್ತು, ರೇಡಿಯೊ ಸಂವಹನ ಸೇರಿದಂತೆ ಸಮಕಾಲೀನ ಮಿಲಿಟರಿ ಪಡೆಗಳು ಬಳಸುವ ಬಹುತೇಕ ಯುದ್ಧೋಪಕರಣಗಳ ದಾಸ್ತಾನು ಮತ್ತು ಬಳಕೆಯ ಸಾಮರ್ಥ್ಯವನ್ನು ತಾಲಿಬಾನ್ ಈ ಮೂಲಕ ಪ್ರದರ್ಶಿಸಿದೆ.

ತಾಲಿಬಾನ್ ಯೋಧರೆಂದರೆ ಹೀಗೆಯೇ ಇರುತ್ತಾರೆ ಎಂಬ ಬಹುಕಾಲದ ಚಿತ್ರವನ್ನೂ ಈ ತುಕಡಿ ಬದಲಿಸಿದೆ. ವಿಶ್ವದ ಕೆಲವೇ ಭಯೋತ್ಪಾದಕ ಗುಂಪುಗಳಲ್ಲಿ ಇಂಥ ವಿಶೇಷ ಕಾರ್ಯಾಚರಣೆ ಘಟಕಗಳಿವೆ. ಇದೀಗ ಆ ಸಾಲಿಗೆ ತಾಲಿಬಾನ್ ಸಹ ಸೇರಿದಂತಾಗಿದೆ.

(Taliban Terrorists in New Avatar Shows how Badri 313 Commando units in Kabul Streets)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಟ್ಟರ್ ಷರಿಯಾ ಕಾನೂನು ಜಾರಿ ಸಾಧ್ಯತೆ, ಮನೆಯಿಂದ ಹೊರ ಬರಲು ಹೆದರುತ್ತಿರುವ ಮಹಿಳೆಯರು

ಇದನ್ನೂ ಓದಿ: ತಾಲಿಬಾನ್ ಆಡಳಿತದಲ್ಲಿ ಮಕ್ಕಳು ನಲುಗುವುದು ಬೇಡ: ಬ್ರಿಟಿಷ್ ಸೈನಿಕರತ್ತ ಮಕ್ಕಳನ್ನು ಎಸೆದ ಮಹಿಳೆಯರು

Published On - 8:27 pm, Thu, 19 August 21