ಕಡಲತೀರದಲ್ಲಿ ವಿಶೇಷ; ತಿಮಿಂಗಿಲ ವಿಸರ್ಜಿಸಿದ ಈ ವಸ್ತುವಿಗೆ ಕೋಟ್ಯಾಂತರ ರೂಪಾಯಿ ಬೆಲೆ!

| Updated By: ganapathi bhat

Updated on: Apr 06, 2022 | 7:25 PM

ಆ್ಯಂಬರ್ಗಿಸ್ ಎಂದು ಕರೆಯಲ್ಪಡುವ ಈ ವಸ್ತು ಬಹು ಬೆಲೆ ಹೊಂದಿದೆ. ತಿಮಿಂಗಿಲದಿಂದ ಸಿಗುವ ಈ ವಸ್ತುವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರಂತೆ.

ಕಡಲತೀರದಲ್ಲಿ ವಿಶೇಷ; ತಿಮಿಂಗಿಲ ವಿಸರ್ಜಿಸಿದ ಈ ವಸ್ತುವಿಗೆ ಕೋಟ್ಯಾಂತರ ರೂಪಾಯಿ ಬೆಲೆ!
ತಿಮಿಂಗಿಲ ವಿಸರ್ಜಿಸಿದ್ದ ವಸ್ತು
Follow us on

ಕಡಲತೀರಕ್ಕೆ ಹೋದಾಗ ಸಣ್ಣ ಚಿಪ್ಪು ಸಿಕ್ಕಿದರೂ ಖುಷಿಯಿಂದ ಮರಳುವವರು ನಾವು. ಅಂಥದ್ದರಲ್ಲಿ ಏನೋ ಭರ್ಜರಿ ವಸ್ತು ಸಿಕ್ಕಿಬಿಟ್ಟರೆ ಕೇಳಬೇಕೇ! ಥಾಯ್ಲೆಂಡ್​ನ ಬೀಚ್​ನಲ್ಲಿ ನಡೆದ ಘಟನೆ ಇದು. ಥಾಯ್ಲೆಂಡ್ ಮಹಿಳೆ ಸಿರಿಪಾರ್ನ್ ನಿಯಮ್ರಿನ್​ಗೆ ಎಂಬ 49 ವರ್ಷದ ಮಹಿಳೆಗೆ ಕಡಲತೀರದಲ್ಲಿ ನಡೆದು ಹೋಗುತ್ತಿರಬೇಕಾದರೆ ಒಂದು ವಿಶಿಷ್ಟ ವಸ್ತು ಸಿಕ್ಕಿದೆ. ಅದೇನು ಎಂದು ಗಮನಿಸಿದಾಗ ಮೀನಿನ ವಾಸನೆ ಇದೆ, ಹಾಗಾಗಿ ಏನೋ ಉಪಯೋಗಕ್ಕೆ ಬರುವ ವಸ್ತುವೇ ಆಗಿರಬೇಕು ಎಂದು ಅವರು ಅಂದುಕೊಂಡಿದ್ದಾರೆ. ಮಾತ್ರವಲ್ಲ ಅದನ್ನು ಮನೆಗೆ ಕೊಂಡೊಯ್ದಿದ್ದಾರೆ. ಈ ಘಟನೆ ಫೆಬ್ರವರಿ 23ರಂದು ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಆಕೆ, ಕಡಲತೀರದಲ್ಲಿ ಸಿಕ್ಕಿದ ಆ ವಸ್ತುವಿನೊಂದಿಗೆ ಮನೆಗೆ ಹಿಂತಿರುಗಿದ ಬಳಿಕ ಮನೆಯವರಲ್ಲಿ ಆ ವಸ್ತು ಏನು ಎಂದು ಗುರುತಿಸುವಂತೆ ಕೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ನೆರೆಹೊರೆಯವರ ಬಳಿಯೂ ವಸ್ತುವನ್ನು ಗುರುತಿಸಲು ತಿಳಿಸಿದ್ದಾಳೆ. ಆದರೆ, ನಿಜವಾಗಿ ಆ ವಸ್ತು ಯಾವುದು ಎಂದು ತಿಳಿದಾಗ ಅಲ್ಲಿದ್ದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಒಂದು ಕ್ಷಣ ಅಯ್ಯೋ ಅಂದುಕೊಂಡಿದ್ದಾರೆ. ಅಂಥಾ ವಸ್ತು ಏನದು ಅಂತೀರಾ?

ಥಾಯ್ಲೆಂಡ್ ಮಹಿಳೆಗೆ ಕಡಲತೀರದಲ್ಲಿ ಸಿಕ್ಕಿದ ಆ ವಸ್ತು ತಿಮಿಂಗಿಲದ ವಾಂತಿ. ತಿಮಿಂಗಿಲ ಹೊರಹಾಕಿದ ವಸ್ತು ಅದು. ಅದನ್ನು ಆ್ಯಂಬರ್ಗಿಸ್ (Ambergris) ಎಂದು ಕರೆಯುತ್ತಾರೆ. ಡೈಲಿ ಮೈಲ್ ಸುದ್ದಿಸಂಸ್ಥೆ ನೀಡಿರುವ ಮಾಹಿತಿಯಂತೆ 12 ಇಂಚು ಅಗಲದ ಮತ್ತು 24 ಇಂಚು ಉದ್ದದ ಈ ವಸ್ತು ಸುಮಾರು 1.86 ಲಕ್ಷ ಪೌಂಡ್​ಗಳಷ್ಟು ಬೆಲೆ ಬಾಳುತ್ತದೆ. ಅಂದರೆ, ಬರೋಬ್ಬರಿ 1.8 ಕೋಟಿ ರೂಪಾಯಿಗಳು!

ಆ್ಯಂಬರ್ಗಿಸ್ ಎಂದು ಕರೆಯಲ್ಪಡುವ ಈ ವಸ್ತು ಬಹು ಬೆಲೆ ಹೊಂದಿದೆ. ತಿಮಿಂಗಿಲದಿಂದ ಸಿಗುವ ಈ ವಸ್ತುವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರಂತೆ. ತುಂಬಾ ಸಮಯದವರೆಗೆ ಇದರಿಂದ ತಯಾರಿಸಿದ ಸುಗಂಧ ಉಳಿಯುವ ಕಾರಣ ವಸ್ತುವಿಗೆ ಬಹಳಷ್ಟು ಬೆಲೆ ಇದೆ.

ಆ್ಯಂಬರ್ಗಿಸ್ ಸಿಕ್ಕಿರುವ ಮಹಿಳೆ ಈಗ, ಆಕೆಯ ಮನೆಯನ್ನು ತಜ್ಞರು ಭೇಟಿ ಮಾಡಿ, ವಸ್ತುವನ್ನು ಪರಿಶೀಲಿಸುವುದನ್ನು ಕಾಯುತ್ತಿದ್ದಾಳೆ. ಇದು ನಿಜವಾಗಿಯೂ ಆ್ಯಂಬರ್ಗಿಸ್ ಆಗಿದ್ದರೆ, ಅದನ್ನು ಸೂಕ್ತ ಬೆಲೆಗೆ ಮಾರುತ್ತೇನೆ. ಕೊಂಡುಕೊಳ್ಳುವವರು ಯಾರಾದರೂ ಮುಂದೆ ಬಂದರೆ, ಆ್ಯಂಬರ್ಗಿಸ್ ಮಾರಲು ತಯಾರಿದ್ದೇನೆ. ಅದರಿಂದ ಬಂದ ಹಣವನ್ನು ಸಮುದಾಯದ ಅಭಿವೃದ್ಧಿಗೆ ಬಳಸುವ ಆಸೆ ಇದೆ ಎಂದು ಮಹಿಳೆ ತಿಳಿಸಿದ್ದಾರೆ.

ಇಂಥಾ ವಸ್ತು ಸಿಗಲು ನಾನು ತುಂಬಾ ಅದೃಷ್ಟವಂತೆ. ಇದರಿಂದ ನನಗೆ ಹಣ, ಸಂಪತ್ತು ಲಭಿಸುತ್ತದೆ ಎಂದು ಅಂದುಕೊಂಡಿದ್ದೇನೆ. ನನ್ನ ಮನೆಯಲ್ಲಿ ಜಾಗರೂಕತೆಯಿಂದ ಇಟ್ಟುಕೊಂಡಿದ್ದೇನೆ. ಸ್ಥಳೀಯ ಕೌನ್ಸಿಲ್​ನಿಂದ ಬಂದು ಈ ಬಗ್ಗೆ ಪರಿಶೀಲನೆ ಮಾಡಲು ಕೂಡ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಪರ್ ಲಾಟರಿ: ದುಬೈನಲ್ಲಿ 24 ಕೋಟಿ ಗೆದ್ದ ಕನ್ನಡಿಗ ಶಿವಮೂರ್ತಿ ಕೃಷ್ಣಪ್ಪ, ಗೆದ್ದ ಹಣದಲ್ಲಿ ಏನು ಮಾಡಲಿದ್ದಾರೆ ಗೊತ್ತಾ?

10 ಸೆಕೆಂಡ್​ಗಳ ವಿಡಿಯೊ ಬರೋಬ್ಬರಿ 48.4 ಕೋಟಿಗೆ ಮಾರಾಟ: ಏನಿದರ ವೈಶಿಷ್ಟ್ಯ

Published On - 7:01 pm, Fri, 5 March 21