ಸ್ಯಾನ್ ಫ್ರಾನ್ಸಿಸ್ಕೋ: ಭಾರತದಲ್ಲಿ ನಿಷೇಧವಾದ ನಂತರ ಟಿಕ್ ಟಾಕ್ ಌಪ್ ಈಗ ಅಮೆರಿಕದಲ್ಲೂ ನಿಷೇಧದ ಕ್ಷಣಗಳನ್ನು ಎದುರಿಸುತ್ತಿದೆ. ಈ ಸಂಬಂಧ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟಿಕ್‌ಟಾಕ್ ಕಂಪನಿಗೆ 45 ದಿನಗಳ ನೋಟಿಸ್ ಕಳಿಸಿದ್ದಾರೆ.
ಆದ್ರೆ ಇದಕ್ಕೆ ಮೊದ ಮೊದಲು ಟ್ರಂಪ್ ಆಡಳಿತದ ಮನವೊಲಿಸಿ ನಿಷೇಧವನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ ಟಿಕ್ ಟಾಕ್ ಈಗ ಟ್ರಂಪ್ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಈ ಸಂಬಂಧ ಅಮೆರಿಕದ ಟಿಕ್ ಟಾಕ್ ವಕ್ತಾರರು ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರದಿಂದಾಗಿ ಟಿಕ್ ಟಾಕ್ ಌಪ್‌ಗೆ ಅಗತ್ಯ ವ್ಯವಹಾರಿಕ ಕಾರ್ಯಗಳನ್ನು ಸಹಜ ನ್ಯಾಯಮಾರ್ಗದಲ್ಲಿ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಆರೋಪಿಸಿದೆ. ಈ ಸಂಬಂಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದು, ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.
ಆಗಸ್ಟ್ 6ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ಅನ್ನು ನಿಷೇಧಿಸುವ 45 ದಿನಗಳ ನೋಟಿಸ್ ಆದೇಶ ಹೊರಡಿಸಿದ್ದರು. ಇದಾದ ನಂತರ ಇದುವರೆಗೆ ಅಮೆರಿಕದ ನಾಗರಿಕರಿಗೆ ಸಂಬಂಧಿಸಿದ ಡಾಟಾವನ್ನು ಅಮೆರಿಕಕ್ಕೆ ಹಿಂದಿರುಗಿಸುವಂತೆ ಆದೇಶಿಸಿ 90 ದಿನಗಳ ನೋಟಿಸ್ ನೀಡಿದ್ದರು.
ಈ ಆದೇಶಗಳಿಗೆ ಟ್ರಂಪ್ ಬಳಿಸಿದ್ದು ‘ದಿ ಇಂಟರ್‌ನ್ಯಾಷನಲ್ ಎಮರ್ಜೆನ್ಸಿ ಎಕಾನೊಮಿಕ್ ಪವರ್ಸ್ ಌಕ್ಟ್’. ಈ ಕಾಯ್ದೆಯಡಿ ಅಮೆರಿಕದ ರಾಷ್ಟ್ರೀಯ ಭದ್ರತೆ, ಆರ್ಥಿಕ ಭದ್ರತೆಗೆ ತೊಂದರೆಯುಂಟು ಮಾಡುವ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಗಳನ್ನು ಅಮೆರಿಕದಲ್ಲಿ ನಿಷೇಧಿಸುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗಿದೆ.
ಈ ಹಿಂದೆ ಕೂಡಾ ಅಮೆರಿಕದ ಸರ್ಕಾರಗಳು ಇದೇ ಕಾನೂನನ್ನು ಬಳಸಿ ಕೆಲ ಅಂತಾರಾಷ್ಟ್ರೀಯ ಸಂಘಟನೆಗಳನ್ನು ನಿಷೇಧಿಸಿವೆ. ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ವಿದೇಶಿ ಸರ್ಕಾರಗಳು, ಭಯೋತ್ಪಾದಕರು, ಡ್ರಗ್ಸ್ ಕಿಂಗ್‌ಪಿನ್‌ಗಳು ಮತ್ತು ಹ್ಯಾಕರ್‌ಗಳ ವಿರುದ್ಧ ಈ ಕಾನೂನನ್ನು ಬಳಸಲಾಗಿದೆ. ಆದ್ರೆ ಜಾಗತಿಕ ತಂತ್ರಜ್ಞಾನ ಕಂಪನಿಯನ್ನು ನಿಷೇಧಿಸಲು ಮುಂದಾಗಿರುವದು ಇದೇ ಮೊದಲ ಸಲವಾಗಿದೆ.