ಅಮೆರಿಕಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ದಿನಕ್ಕೆ ಲಕ್ಷ ಲಕ್ಷ ಜನರಿಗೆ ಅಟ್ಯಾಕ್ ಮಾಡ್ತಿದೆ. ಈ ನಡುವೆ ಅಮೆರಿಕದ ವೈಟ್ ಹೌಸ್ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದು, ಮಕ್ಕಳು ಶಾಲೆಗಳಿಗೆ ತೆರಳಲೇ ಬೇಕು ಅಂತಾ ಕಟ್ಟಾಜ್ಞೆ ಮಾಡಿದೆ. ಈಗಾಗಲೇ ಅಮೆರಿಕಾದಲ್ಲಿ ಒಂದೂವರೆ ಲಕ್ಷದಷ್ಟು ಜನರು ಕೊರೊನಾಗೆ ಬಲಿಯಾಗಿದ್ರೂ, ವೈಟ್ ಹೌಸ್ ಮಾತ್ರ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸ್ತಿದೆ.
ಹೆಮ್ಮಾರಿ ಹೊಡೆತಕ್ಕೆ ಥಂಡಾ!
ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಒಟ್ಟು 2 ಲಕ್ಷದ 84 ಸಾವಿರದ 83 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 62 ಲಕ್ಷದ 5 ಸಾವಿರದ 467ಕ್ಕೇರಿಕೆಯಾಗಿದೆ. ಇದೇ ವೇಳೆ ಜಗತ್ತಿನಾದ್ಯಂತ 6 ಸಾವಿರದ 270 ಜನರು ಮೃತಪಟ್ಟಿದ್ದಾರೆ.
ಸರ್ವಾಧಿಕಾರಿ ನಾಡಲ್ಲಿ ಕೊರೊನಾ
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾಡು ಉತ್ತರಕೊರೊಯಾದಲ್ಲಿ ಕೊರೊನಾ ಮತ್ತೊಂದು ಪ್ರಕರಣ ದಾಖಲಾಗಿದೆ. ಉತ್ತರ ಕೊರಿಯಾದ ಒಬ್ಬನಿಗೆ ಕೊರೊನಾ ಶಂಕಿತ ಪತ್ತೆಯಾದ ಹಿನ್ನೆಲೆಯಲ್ಲಿ ಕಾಯೆಸಾಂಗ್ ನಗರ ಲಾಕ್ಡೌನ್ ಮಾಡಲಾಗಿದೆ. ಇದ್ರ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಕಿಮ್ ಜಾಂಗ್ ಉನ್, ಕಟ್ಟುನಿಟ್ಟಿನ ಕ್ರಮದ ಮೂಲಕ ವೈರಸ್ ತೊಲಗಿಸಲು ಕರೆ ನೀಡಿದ್ದಾರೆ.
ಬೋಲ್ಸನಾರೋಗೆ ನೆಗೆಟಿವ್!
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ನಿನ್ನೆ ಮಾಡಿದ ಕೊರೊನಾ ಟೆಸ್ಟ್ನಲ್ಲಿ ಬೋಲ್ಸನಾರೋಗೆ ನೆಗೆಟಿವ್ ಬಂದಿದೆ. ಕಳೆದ 2 ವಾರಗಳಿಂದ ಕೊರೊನಾ ಸೋಂಕಿಗೊಳಗಾಗಿದ್ದ ಬೋಲ್ಸನಾರೋ ಐಸೋಲೇಟ್ ಆಗಿದ್ದರು. ಈ ಹಿಂದೆ ಮೂರು ಬಾರಿ ಟೆಸ್ಟ್ ಮಾಡಿಸಿದಾಗಲೂ ಅವ್ರ ವರದಿ ಪಾಸಿಟಿವ್ ಬಂದಿತ್ತು. ಇದೀಗ 62 ವರ್ಷದ ಬೋಲ್ಸನಾರೋ ನಿಟ್ಟುಸಿರು ಬಿಟ್ಟಿದ್ದಾರೆ.
ಕೊರೊನಾ ಜೊತೆಗೆ ಪ್ರವಾಹದ ಹೊಡೆತ
ಫಿಲಿಪ್ಪೀನ್ಸ್ನಲ್ಲಿ ಕೊರೊನಾ ಮಹಾಮಾರಿ ಜೊತೆಗೆ ಪ್ರವಾಹವೂ ಜನರ ಪ್ರಾಣ ಹಿಂಡುತ್ತಿದೆ. ಮನಿಲಾದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಬೇಸ್ ಬಾಲ್ ಸ್ಟೇಡಿಯಂಗೆ ಸ್ಥಳಾಂತರ ಮಾಡಲಾಗಿತ್ತು. ಆದ್ರೆ ಸ್ಟೇಡಿಯಂನಲ್ಲಿ ನೆರೆದ ಸಾವಿರಾರು ಜನರು ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ ಕಿಕ್ಕಿರಿದು ತುಂಬಿ ಹೋಗಿದ್ದಾರೆ. ಹೀಗಾಗಿ ಪ್ರವಾಹ ಸಂತ್ರಸ್ತರಿಗೆ ಕೊರೊನಾ ಸೋಂಕು ಹರಡೋ ಭೀತಿ ಇದೆ.
30 ಹುದ್ದೆಗೆ, 1000 ಅರ್ಜಿ!
ಕೊರೊನಾ ವೈರಸ್ನಿಂದಾಗಿ ಜಗತ್ತಿನ ಜನಜೀವನಕೇ ತಲೆಕೆಳಗಾಗಿದೆ. ಹಲವು ಉದ್ಯಮಗಳು ಬಂದ್ ಆಗಿದ್ರೆ, ಇನ್ನೂ ಕೆಲ ಸಂಸ್ಥೆಗಳು ಸಿಬ್ಬಂದಿಯನ್ನೇ ತೆಗೆದು ಹಾಕ್ತಿವೆ. ಇನ್ನು ಬಾರ್ ರೆಸ್ಟೋರೆಂಟ್ ಕ್ಲಬ್ ಹಾಗೂ ಹೋಟೆಲ್ಗಳೂ ಸಹ ನಷ್ಟ ಅನುಭವಿಸ್ತಿವೆ. ಹೀಗಾಗಿ, ಇಂಗ್ಲೆಂಡ್ನಲ್ಲಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ಹುದ್ದೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದ್ದು, ಕೇವಲ 30 ಪೋಸ್ಟ್ಗೆ 1 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರಂತೆ.
ಬೊಜ್ಜು ಹೆಚ್ಚಿಸಿದ ಕೊರೊನಾ!
ಕೊರೊನಾ ವೈರಸ್ನಿಂದಾಗಿ ಜಗತ್ತಿನಲ್ಲಿ ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಆದ್ರೆ, ಕೊರೊನಾದಿಂದಾಗಿ ಸೋಂಕಿತರಿಗಿಂತ ಹೆಚ್ಚಾಗಿ ಇತರರು ಅನ್ಯರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂಗ್ಲೆಂಡ್ನಲ್ಲಿ ಯುವಕರೂ ಕೂಡ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಕೊರೊನಾದಿಂದಾಗಿ ಲಾಕ್ಡೌನ್ ಹೇರಿದ್ರೆ, ಇನ್ನೂ ಕೆಲ ಸಂಸ್ಥೆಗಳು ಬಂದ್ ಆಗಿದ್ದರಿಂದಾಗಿ ಕೆಲಸವಿಲ್ಲದೇ ಮನೆಯಲ್ಲೇ ಉಳಿದಿದ್ದರಿಂದಾಗಿ ಬೊಜ್ಜು ಹೆಚ್ಚಾಗಿದೆ ಅಂತಾ ಸರ್ವೆ ತಿಳಿಸಿದೆ.
ಬೊಲಿವಿಯಾ ಕೊರೊನಾ ಭೀಕರತೆ
ಬೊಲಿವಿಯಾದಲ್ಲಿ ಹೆಮ್ಮಾರಿ ಕೊರೊನಾ ಮರಣಮೃದಂಗ ಬಾರಿಸ್ತಿದೆ. ಈಗಾಗಲೇ 66 ಸಾವಿರ ಜನರಿಗೆ ಸೋಂಕು ತಗುಲಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇದೇ ವೇಳೆ ಕೊರೊನಾದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗ್ತಿದ್ದು, ಜನರು ಬೀದಿ ಬೀದಿ ಬಿದ್ದು ಸಾಯುತ್ತಿದ್ದಾರೆ. ಬೊಲಿವಿಯಾದ ಜನವಸತಿ ಪ್ರದೇಶದ ರಸ್ತೆಯೊಂದ್ರಲ್ಲಿ ಕೊರೊನಾ ಸೋಂಕಿತ ಶವ ಅನಾಥವಾಗಿ ಬಿದ್ದಿತ್ತು, ಬಳಿಕ ಸ್ಥಳೀಯ ಆಡಳಿತ ಸಿಬ್ಬಂದಿ ಶವ ತೆರವು ಮಾಡಿದ್ರು.
Published On - 2:59 pm, Sun, 26 July 20