ತೋಷಖಾನಾ ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್ಗೆ ವಿಧಿಸಿದ್ದ 3 ವರ್ಷ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್
ತೋಷಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಪರಾಧ ಮತ್ತು ಮೂರು ವರ್ಷಗಳ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿ, ಜಾಮೀನು ನೀಡಿದೆ.
ಇಸ್ಲಾಮಾಬಾದ್, ಆ.29: ತೋಷಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಪರಾಧ ಮತ್ತು ಮೂರು ವರ್ಷಗಳ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿ, ಜಾಮೀನು ನೀಡಿದೆ. ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಸೋಮವಾರ ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ವಿಚಾರಣೆ ನಡೆಸಿ ಇದೀಗ ಅವರ ಅಪರಾಧ ಮತ್ತು 3 ವರ್ಷ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ. ಇನ್ನು ಇಸ್ಲಾಮಾಬಾದ್‌ನ ವಿಚಾರಣಾ ನ್ಯಾಯಾಲಯವು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಹಾಗೂ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಗಸ್ಟ್ 5 ರಂದು ದೋಷಿ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
2018-2022ರ ಇಮ್ರಾನ್ ಖಾನ್ ಅಧಿಕಾರ ಅವಧಿಯಲ್ಲಿ ಅವರು ಮತ್ತು ಅವರ ಕುಟುಂಬವು ಸ್ವಾಧೀನಪಡಿಸಿಕೊಂಡ ದೇಶದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ. ಮುಂಬರುವ ಚುನಾವಣೆಗೆ ಸ್ಪರ್ಧಿಸದಂತೆ ಐದು ವರ್ಷಗಳ ಕಾಲ ಅವರನ್ನು ರಾಜಕೀಯದಿಂದ ನಿರ್ಬಂಧಿಸಲಾಗಿದೆ.
ಇಮ್ರಾನ್ ಖಾನ್ ಅವರನ್ನು ಲಾಹೋರ್‌ನಲ್ಲಿ ಮನೆಯಲ್ಲಿ ಬಂಧಿಸಲಾಗಿತ್ತು. ಇದೀಗ ಅವರನ್ನು ಲಾಹೋರ್ನ ಅಟಾಕ್ ಜೈಲಿನಲ್ಲಿ ಇರಿಸಲಾಗಿದೆ. ಇಮ್ರಾನ್ ಖಾನ್ ಅವರು 2018 ರಿಂದ 2022ರ ವರೆಗೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ತೋಷಖಾನಾ ವಿದೇಶಿ ಅಧಿಕಾರಿಗಳಿಂದ ಸರ್ಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾದ ಉಡುಗೊರೆಯ ದಾಖಲೆಗಳನ್ನು ಮರೆಮಾಚಿದ್ದು, ಜತೆಗೆ ಅದನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ, ಈ ಶಿಕ್ಷೆಯನ್ನು ನೀಡಲಾಗಿತ್ತು, ಅವರ ಬಂಧನದ ನಂತರ ಅವರ ಪತ್ನಿ ಬುಶ್ರಾ ಬೀಬಿ ಅವರು ಇಮ್ರಾನ್ ಖಾನ್ ಅವರ ಜೀವಕ್ಕೆ ಅಪಾಯ ಇದೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಈ ಬಗ್ಗೆ ಪಾಕ್ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಸುಪ್ರೀಂ ಮೊರೆ ಹೋಗಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Tue, 29 August 23