ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಟ್ರಂಪ್, ಶೀಘ್ರದಲ್ಲೇ ಶಾಂತಿ ಒಪ್ಪಂದ

ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಮಿಲಿಟರಿ ದಾಳಿಗಳನ್ನು ರದ್ದುಗೊಳಿಸಿದ್ದು, ಅಮೆರಿಕ-ಇರಾನ್ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಅಂತಿಮ ಹಂತ ತಲುಪಿದೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀತಿಯನ್ನು ಕೊನೆಗೊಳಿಸಿ, ಪ್ರಾದೇಶಿಕ ಸ್ಥಿರತೆಗೆ ಹೊಸ ಭರವಸೆ ಮೂಡಿಸಿದೆ. ಎರಡೂ ದೇಶಗಳು ಒಪ್ಪಂದಕ್ಕೆ ಸಕಾರಾತ್ಮಕ ಒಲವು ತೋರಿದ್ದು, ಇರಾನ್ ಜನತೆಯಲ್ಲಿ ಆರ್ಥಿಕ ಚೇತರಿಕೆಯ ನಿರೀಕ್ಷೆ ಹೆಚ್ಚಾಗಿದೆ.

ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಟ್ರಂಪ್, ಶೀಘ್ರದಲ್ಲೇ ಶಾಂತಿ ಒಪ್ಪಂದ
ಡೊನಾಲ್ಡ್​ ಟ್ರಂಪ್
Image Credit source: PTI

Updated on: Jun 12, 2026 | 9:26 AM

ವಾಷಿಂಗ್ಟನ್, ಜೂನ್ 12: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಯುದ್ಧದ ಭೀತಿ ಮತ್ತು ಬಿಕ್ಕಟ್ಟು ಕೊನೆಗೊಳ್ಳುವ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ಜಾಗತಿಕ ಮಟ್ಟದಲ್ಲಿ ನಡೆದಿದೆ. ಇರಾನ್ ಮೇಲಿನ ಸತತ ಮೂರನೇ ದಿನದ ನಿಗದಿತ ಮಿಲಿಟರಿ ದಾಳಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕೃತವಾಗಿ ರದ್ದುಗೊಳಿಸಿದ್ದು, ಟೆಹ್ರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ ಎಂದು ಘೋಷಿಸಿದ್ದಾರೆ.

ಒಪ್ಪಂದಕ್ಕೆ ಅಮೆರಿಕ-ಇರಾನ್ ಒಲವು: ಶ್ವೇತಭವನದ  ಮಾತನಾಡಿದ ಅಧ್ಯಕ್ಷ ಟ್ರಂಪ್, ಒಪ್ಪಂದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಮತ್ತು ಸ್ಥಳವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದೊಂದಿಗಿನ ಈ ತಿಳಿವಳಿಕೆ ಒಪ್ಪಂದದ ಪ್ರಸ್ತಾವನೆಯು ಇರಾನ್‌ನ ಉನ್ನತ ನಾಯಕರ ಸಕಾರಾತ್ಮಕ ಪರಿಗಣನೆಯಲ್ಲಿದೆ ಎಂದು ಟೆಹ್ರಾನ್‌ನ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ರಾಜತಾಂತ್ರಿಕ ತಂತ್ರಗಾರಿಕೆ ಯಶಸ್ವಿ: ನ್ಯಾಟೋ ಡಿಫೆನ್ಸ್ ಕಾಲೇಜಿನ ಅಂತಾರಾಷ್ಟ್ರೀಯ ಭದ್ರತಾ ತಜ್ಞ ರಿಚರ್ಡ್ ವೈಟ್ಜ್ ಅವರ ಪ್ರಕಾರ, ಟ್ರಂಪ್ ಇರಾನ್ ವಿರುದ್ಧ ಉದ್ವಿಗ್ನತೆ ಕಡಿಮೆ ಮಾಡುವ ಯಶಸ್ವಿ ತಂತ್ರವನ್ನು ಅನುಸರಿಸಿದ್ದಾರೆ. ಅಮೆರಿಕದ ಕಠಿಣ ಮಿಲಿಟರಿ ಎಚ್ಚರಿಕೆಗಳೇ ಈಗ ಉಭಯ ದೇಶಗಳನ್ನು ಯುದ್ಧದ ಹಾದಿ ಬಿಟ್ಟು ಮಾತುಕತೆಯ ಮೇಜಿನ ಬಳಿ ತಂದು ನಿಲ್ಲಿಸಲು ಕಾರಣವಾಗಿದೆ.

ಮತ್ತಷ್ಟು ಓದಿ: Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?

ಇರಾನ್ ಜನತೆಯಲ್ಲಿ ಹರ್ಷದ ವಾತಾವರಣ: ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದ ಇರಾನ್‌ನ ಸಾಮಾನ್ಯ ನಾಗರಿಕರು ಈ ಶಾಂತಿ ಸುದ್ದಿಯಿಂದ ನಿರಾಳರಾಗಿದ್ದಾರೆ. ಆರ್ಥಿಕತೆ ಚೇತರಿಸಿಕೊಳ್ಳುವ ಮತ್ತು ಮುರಿದುಬಿದ್ದಿದ್ದ ಜೀವನೋಪಾಯಗಳು ಮತ್ತೆ ಹಳಿಗೆ ಬರುವ ಭರವಸೆ ಮೂಡಿದೆ. ಇರಾನ್ ನಾಯಕತ್ವವೂ ಸಹ ಈ ಸಂಘರ್ಷದಿಂದ ದೇಶವು ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ಜನರಲ್ಲಿ ವಿಶ್ವಾಸ ತುಂಬುತ್ತಿದೆ.

ಪ್ರಾದೇಶಿಕ ಸ್ಥಿರತೆಗೆ ಮುನ್ನುಡಿ: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುವೈತ್, ಬಹ್ರೇನ್ ಹಾಗೂ ಜೋರ್ಡಾನ್ ಭಾಗದಲ್ಲಿ ಇತ್ತೀಚೆಗೆ ನಡೆಸಿದ್ದ ಸರಣಿ ಪ್ರತಿಕ್ರಿಯಾತ್ಮಕ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಆತಂಕಕ್ಕೆ ಈಗ ತೆರೆ ಬೀಳಲಿದೆ. ಇರಾನ್-ಅಮೆರಿಕ ನಡುವೆ ಏರ್ಪಡಲಿರುವ ಈ ಪ್ರಗತಿಪರ ಒಪ್ಪಂದವು ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಹೊಸ ಹೆಬ್ಬಾಗಿಲನ್ನು ತೆರೆಯಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us