
ವಾಷಿಂಗ್ಟನ್, ಆ.12 : ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ‘ನಾಟೋ’ (NATO) ಶೃಂಗಸಭೆ ಮುಗಿಸಿ ಹಿಂತಿರುಗುವಾಗ ತಾವು ರಹಸ್ಯವಾಗಿ ಮತ್ತೊಂದು ಸಣ್ಣ ಸೇನಾ ವಿಮಾನಕ್ಕೆ ಸ್ಥಳಾಂತರಗೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತವಾಗಿ ದೃಢಪಡಿಸಿದ್ದಾರೆ. ಸಿಪಾಯಿಗಳು ಮತ್ತು ಸೀಕ್ರೆಟ್ ಸರ್ವಿಸ್‌ನ (Secret Service) ಸಲಹೆಯಂತೆ ತಾವು ವಿಮಾನ ಬದಲಿಸಿದ್ದಾಗಿ ಅವರು ತಿಳಿಸಿದ್ದಾರೆ.
ಇರಾನ್‌ನಿಂದ ಎದುರಾಗಿದ್ದ ಸಂಭಾವ್ಯ ಹತ್ಯೆ ಯತ್ನದ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದವು ಎಂದು ‘ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ವರದಿ ಮಾಡಿತ್ತು. ವಿಮಾನ ಬದಲಾವಣೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ನಾನು ಸೀಕ್ರೆಟ್ ಸರ್ವಿಸ್ ಮತ್ತು ಅಮೆರಿಕನ್ ಮಿಲಿಟರಿ ಸೂಚನೆಗಳನ್ನು ಪಾಲಿಸುತ್ತೇನೆ. ಅವರು ನನ್ನನ್ನು ಬೇರೊಂದು ವಿಮಾನದಲ್ಲಿ ಕರೆದೊಯ್ಯಲು ಬಯಸಿದ್ದರು. ಅಲ್ಲಿ ಏನೋ ಬೆದರಿಕೆ ಇತ್ತು ಎಂದು ಅನಿಸುತ್ತದೆ. ನಾನು ಅದರ ಬಗ್ಗೆ ಹೆಚ್ಚು ಪ್ರಶ್ನೆ ಮಾಡಲಿಲ್ಲ, ಏಕೆಂದರೆ ನನಗೆ ಇಂತಹ ಸಾಕಷ್ಟು ಬೆದರಿಕೆಗಳು ಬರುತ್ತಿರುತ್ತವೆ.” ಎಂದು ಹೇಳಿದರು.
“ವಾಸ್ತವವಾಗಿ ನಾನು ಪ್ರಯಾಣಿಸಿದ ವಿಮಾನವೇ ಹೆಚ್ಚಿನ ಅಪಾಯದಲ್ಲಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ದಾಳಿಕೋರರು ಆ ವಿಮಾನವನ್ನೇ ಗುರಿಯಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು” ಎಂದು ಟ್ರಂಪ್ ಹೇಳಿದ್ದಾರೆ. ವಾಷಿಂಗ್ಟನ್ ಪೋಸ್ಟ್ ವರದಿ ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ವರದಿಗಳ ಪ್ರಕಾರ ಟರ್ಕಿಯಲ್ಲಿ ಶೃಂಗಸಭೆ ಮುಗಿಸಿದ ನಂತರ ಟ್ರಂಪ್ ಕ್ಯಾಮೆರಾಗಳ ಕಣ್ಣೆದುರೇ ಹಳೆಯ ‘ಏರ್ ಫೋರ್ಸ್ ಒನ್’ ವಿಮಾನವನ್ನು ಏರಿದ್ದರು. ವಿಮಾನ ಏರಿದ ತಕ್ಷಣ, ವಿಮಾನ ನಿಲ್ದಾಣದ ಆಹಾರ ಸರಬರಾಜು ಮಾಡುವ ಕ್ಯಾಟರಿಂಗ್ ಟ್ರಕ್ ಮೂಲಕ ಅವರನ್ನು ರಹಸ್ಯವಾಗಿ ಮತ್ತೊಂದು ಸಣ್ಣ ‘C-32A’ ಸೇನಾ ವಿಮಾನಕ್ಕೆ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಇರಾನ್ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ
ಮಾಧ್ಯಮ ಪ್ರತಿನಿಧಿಗಳು ಹಾಗೂ ವೈಟ್ ಹೌಸ್‌ನ ಕೆಲವು ಸಿಬ್ಬಂದಿ ಮೂಲ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸಿದರು. ಟ್ರಂಪ್ ತಮ್ಮೊಂದಿಗಿದ್ದಾರೆ ಎಂದೇ ಅವರು ಭಾವಿಸಿದ್ದರು.ಇರಾನ್‌ನ ಬೆಂಬಲಿತ ಪಡೆಗಳು ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಇಸ್ರೇಲಿ ಗೂಢಚಾರಿ ಸಂಸ್ಥೆಗಳು ನೀಡಿದ ಮುನ್ಸೂಚನೆಯ ಆಧಾರದ ಮೇಲೆ ಈ ತುರ್ತು ಕ್ರಮ ಕೈಗೊಳ್ಳಲಾಗಿತ್ತು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ