ಅವಶೇಷಗಳಡಿಯಲ್ಲಿ ಮಗಳ ಮೃತದೇಹ,ಆಕೆಯ ಕೈ ಹಿಡಿದು ಕುಳಿತ ಅಪ್ಪ; ಟರ್ಕಿ ಭೂಕಂಪದ ಮನಕಲಕುವ ದೃಶ್ಯ
ಅವಶೇಷಗಳಡಿಯಲ್ಲಿ ಆಕೆಯ ದೇಹ ಸಿಕ್ಕಿಬಿದ್ದಿದ್ದು, ಆಕೆಯ ಕೈ ಮಾತ್ರ ಹೊರಗೆ ಕಾಣತ್ತದೆ. ಆ ಬಾಲಕಿಯ ಅಪ್ಪ ಆಕೆಯ ಕೈ ಹಿಡಿದು ಕೂತಿದ್ದಾನೆ. ನೋವನ್ನು ಫ್ರೇಂನಲ್ಲಿ ಹಿಡಿದಿಟ್ಟಿರುವಂತೆ ಕಾಣುವ ಚಿತ್ರ ಇದು. ಚಿತ್ರದಲ್ಲಿರುವ ಆ ವ್ಯಕ್ತಿ ಹೆಸರು ಮೆಸುಟ್ ಹ್ಯಾನ್ಸರ್.
ಕಹ್ರಾಮನ್ಮರಸ್, ಟರ್ಕಿ: ಟರ್ಕಿಯ ಭೂಕಂಪದ (Turkey earthquake) ದೃಶ್ಯಗಳನ್ನು ನೋಡಿದರೆ ಎಂಥಾ ಗಟ್ಟಿ ಮನಸ್ಸು ಕೂಡಾ ಕರಗುತ್ತದೆ. ಅಂಥಾ ಚಿತ್ರಗಳಲ್ಲಿ ಇದೂ ಒಂದು. ತನ್ನ 15ರ ಹರೆಯದ ಮಗಳು ಭೂಕಂಪದಲ್ಲಿ ಸಾವಿಗೀಡಾಗಿದ್ದಾಳೆ.ಅವಶೇಷಗಳಡಿಯಲ್ಲಿ ಆಕೆಯ ದೇಹ ಸಿಕ್ಕಿಬಿದ್ದಿದ್ದು, ಆಕೆಯ ಕೈ ಮಾತ್ರ ಹೊರಗೆ ಕಾಣತ್ತದೆ. ಆ ಬಾಲಕಿಯ ಅಪ್ಪ ಆಕೆಯ ಕೈ ಹಿಡಿದು ಕೂತಿದ್ದಾನೆ. ನೋವನ್ನು ಫ್ರೇಂನಲ್ಲಿ ಹಿಡಿದಿಟ್ಟಿರುವಂತೆ ಕಾಣುವ ಚಿತ್ರ ಇದು. ಚಿತ್ರದಲ್ಲಿರುವ ಆ ವ್ಯಕ್ತಿ ಹೆಸರು ಮೆಸುಟ್ ಹ್ಯಾನ್ಸರ್. ಒಡೆದ ಇಟ್ಟಿಗೆಗಳ ರಾಶಿಯ ಮೇಲೆ ಹೆಪ್ಪುಗಟ್ಟುವ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡಿದ್ದಾರೆ. ಅವರ ಮನೆ ನೆಲಸಮವಾಗಿದೆ. ಅವರ ಮಗಳು ಇರ್ಮಾಕ್ ಸತ್ತಿದ್ದಾಳೆ. ಆದರೆ ಅವನು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀ ಹೋಗ ಬೇಡ ಅನ್ನುವಂತಿದೆ.
ಸೋಮವಾರದಂದು ಮೊದಲ ಭೂಕಂಪ ಸಂಭವಿಸಿದಾಗ ಹಾಸಿಗೆಯಲ್ಲಿ ಮಲಗಿದ್ದ ಮಗಳು ಭೂಕಂಪಕ್ಕೆ ಬಲಿಯಾಗಿದ್ದಾಳೆ. ಅಲ್ಲಿ ರಕ್ಷಣಾ ತಂಡಗಳು ಇರಲಿಲ್ಲ. ಬದುಕುಳಿದವರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಅವಶೇಷಗಳನ್ನು ಸರಿಸುತ್ತಿದ್ದರು. ಅಲ್ಲಿ ರಾಶಿ ಬಿದ್ದಿದ್ದು ಅವರ ಮನೆಗಳ ತುಣುಕುಗಳಾಗಿತ್ತು. ಛಿದ್ರಗೊಂಡ ಬಾಲ್ಕನಿಗಳ ಮೇಲೆ ಬೆಡ್‌ಫ್ರೇಮ್‌ಗಳು ಬಿದ್ದಿವೆ. ಹರಿದ ಬಟ್ಟೆಗಳು ಮತ್ತು ಆಟಿಕೆಗಳು ಕಳೆದುಹೋದ ಜೀವಗಳ ಕತೆ ಹೇಳುತ್ತಿತ್ತು.
ಒಂದು ಶತಮಾನದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಶಕ್ತಿಶಾಲಿ ಭೂಕಂಪದಲ್ಲಿ ಸುಮಾರು 20,000 ಜನರು ಸಾವಿಗೀಡಾಗಿದ್ದಾರೆ. ಅಂದಹಾಗೆ ಮಗಳ ಕೈ ಹಿಡಿದು ಮೌನವಾಗಿ ರೋದಿಸುತ್ತಿರುವ ಆಪ್ಪನ ಚಿತ್ರವನ್ನು ಅಂಕಾರಾದ AFP ಯ ಹಿರಿಯ ಛಾಯಾಗ್ರಾಹಕ ಅಡೆಮ್ ಅಲ್ಟಾನ್ ಸೆರೆಹಿಡಿದಿದ್ದು. ಅವರು 60 ಮೀಟರ್ (200 ಅಡಿ) ದೂರದಿಂದ ಹ್ಯಾನ್ಸರ್‌ನ ಚಿತ್ರ ಸೆರೆ ಹಿಡಿದರು. ಅದೊಂದು ಸೂಕ್ಷ್ಮ ಕ್ಷಣವಾಗಿತ್ತು. ಆಗ ಅಲ್ಟಾನ್ ನ್ನು ಹತ್ತಿರ ಕರೆದ ಹ್ಯಾನ್ಸರ್”ನನ್ನ ಮಗುವಿನ ಚಿತ್ರಗಳನ್ನು ತೆಗೆದುಕೊಳ್ಳಿ,” ಎಂದರು
‘ನಾನು ಮೂಕನಾಗಿದ್ದೆ’ ಅಂತಾರೆ ಅಲ್ಟಾನ್.
ಜಗತ್ತು ತನ್ನ ಮತ್ತು ತನ್ನ ರಾಷ್ಟ್ರದ ದುಃಖವನ್ನು ನೋಡಬೇಕೆಂದು ತಂದೆ ಬಯಸಿದ್ದರು, ಅದು ಆಗಿದೆ. AFP ಛಾಯಾಚಿತ್ರವು ಫೈನಾನ್ಷಿಯಲ್ ಟೈಮ್ಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ಪ್ರಪಂಚದಾದ್ಯಂತದ ಪ್ರಮುಖ ಪತ್ರಿಕೆಗಳ ಮೊದಲ ಪುಟಗಳಲ್ಲಿ ಕಾಣಿಸಿಕೊಂಡಿದೆ.
“ನಾನು ಫೋಟೊ ತೆಗೆದುಕೊಳ್ಳುವಾಗ ತುಂಬಾ ದುಃಖಿತನಾಗಿದ್ದೆ. ಗಾಢವಾದ ನೋವು ಅದಾಗಿತ್ತು. ನನಗೆ ಅಳು ತಡೆಯಲು ಸಾಧ್ಯವಾಗಲಿಲ್ಲ ಅಂತಾರೆ ಅಲ್ಟಾನ್. “ನಾನು ಮೂಕನಾಗಿದ್ದೆ.” ನಾನು ಅವರ ಹೆಸರು ಮತ್ತು ಮಗಳ ಹೆಸರೇನೆಂದು ಕೇಳಿದ್ದೆ. “ಅವರು ಕಷ್ಟದಿಂದ ಮಾತನಾಡುತ್ತಿದ್ದರು, ಆದ್ದರಿಂದ ನಾನು ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅಲ್ಟಾನ್ ಹೇಳಿದ್ದಾರೆ. ಅಲ್ಟಾನ್‌ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಲಿಲ್ಲ. ಅವಶೇಷಗಳ ಕೆಳಗೆ ಬದುಕುಳಿದವರು ಇದ್ದಾರೆಯೇ ಎಂದು ಕೇಳಲು ಎಲ್ಲರೂ ಮೌನವನ್ನು ಪಾಲಿಸಬೇಕಾಗಿತ್ತು.
ಇದನ್ನೂ ಓದಿ: Turkey Earthquake: ಟರ್ಕಿ, ಸಿರಿಯಾ ಭೂಕಂಪ: ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ
AFP ಯೊಂದಿಗೆ 15 ವರ್ಷಗಳು ಸೇರಿದಂತೆ 40 ವರ್ಷಗಳ ಕಾಲ ಫೋಟೊಗ್ರಾಫರ್ ಆಗಿ ಕೆಲಸ ಮಾಡಿದ ಅಲ್ಟಾನ್ ಅವರು ಛಾಯಾಚಿತ್ರವು ಟರ್ಕಿಯ ನೋವನ್ನು ಪ್ರತಿನಿಧಿಸುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಅದರ ಜಾಗತಿಕ ಪ್ರಭಾವ ಅವರನ್ನು ಅಚ್ಚರಿಗೊಳಿಸಿದೆ. ಈ ಫೋಟೊ ಈಗ ವೈರಲ್ ಆಗಿದೆ.ಆಲ್ಟಾನ್ ಗೆ ಹಲವಾರು ಮಂದಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. “ಈ ಚಿತ್ರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹಲವರು ನನಗೆ ಹೇಳಿದರು” ಎಂದು ಅಲ್ಟಾನ್ ಧನ್ಯತಾಭಾವದಿಂದ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Fri, 10 February 23