ಶ್ರೀಲಂಕಾದಲ್ಲಿ ಕಳೆದ 80 ವರ್ಷಗಳ ನಂತರ ಶ್ರೀಲಂಕಾದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಆನೆಗಳು ಅವಳಿ ಮರಿಗಳಿಗೆ ಜನ್ಮ ನೀಡುವುದು ತುಂಬ ಅಪರೂಪ. ಅದರಲ್ಲೂ ಶ್ರೀಲಂಕಾದಲ್ಲಿ ಕಳೆದ 80 ವರ್ಷಗಳಿಂದ ಈಚೆಗೆ ಇಂಥ ವಿಶೇಷ ಹುಟ್ಟು ನಡೆದಿರಲಿಲ್ಲ. ಇದೀಗ ಪಿನ್ನಾವಾಲ ಆನೆ ಬಿಡಾರದಲ್ಲಿರುವ 25ವರ್ಷ ಆನೆ ಸುರಂಗಿ ಅವಳಿ ಗಂಡುಮರಿಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ. ಈ ಆನೆಮರಿಗಳ ತಂದೆ 17 ವರ್ಷದ ಪಾಂಡು ಆನೆ ಕೂಡ ಅದೇ ಆನೆ ಬಿಡಾರದಲ್ಲಿಯೇ ಇದೆ.
ಎರಡೂ ಮರಿಗಳು ಮತ್ತು ತಾಯಿ ಆನೆ ಆರೋಗ್ಯದಿಂದ ಇವೆ. ಮರಿಗಳು ತುಂಬ ಚಿಕ್ಕದಾಗಿದ್ದರೂ, ಆರೋಗ್ಯವಂತವಾಗಿ ಹುಟ್ಟಿವೆ ಎಂದು ಪನ್ನಿವಾಲಾ ಆನೆ ಬಿಡಾರದ ಮುಖ್ಯಸ್ಥೆ ರೇಣುಕಾ ಬಂಡಾರನಾಯ್ಕೆ ಹೇಳಿದ್ದಾರೆ. ಈ ಹಿಂದೆ ಶ್ರೀಲಂಕಾದಲ್ಲಿ 1941ರಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮನೀಡಿತ್ತು. ಅದಾದ ಮೇಲೆ ಈಗಲೇ ಇಂಥ ಪ್ರಕರಣ ವರದಿಯಾಗಿದೆ ಎಂದು ಬಿಬಿಸಿ ಉಲ್ಲೇಖಿಸಿದೆ.
ಅಪರೂಪ ಇದು
ಆನೆಗಳು ಅವಳಿ ಮರಿಗಳಿಗೆ ಜನ್ಮ ನೀಡುವುದು ತುಂಬ ಅಪರೂಪ. ಅಂದರೆ ಶೇ.1ರಷ್ಟು ಮಾತ್ರ ಸಾಧ್ಯತೆ ಇರುತ್ತದೆ. ಅದರಲ್ಲೂ ಆಫ್ರಿಕಾ ಕಾಡಿನಲ್ಲಿ ಕಂಡುಬರುವ ಆನೆಗಳು ಹೀಗೆ ಅವಳಿ ಮಕ್ಕಳಿಗೆ ಜನ್ಮ ನೀಡುವುದು ಹೆಚ್ಚು ಎಂದು ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಎನಿಮಲ್ ಅಬ್ರೋಡ್ ತಿಳಿಸಿದೆ.
ಶ್ರೀಲಂಕಾದ ಈ ಪನ್ನಿವಾಲಾ ಆನೆಗಳ ಅನಾಥಾಲಯ 1975ರಲ್ಲಿ ನಿರ್ಮಿಸಲ್ಪಟ್ಟಿದೆ. ಗಾಯಗೊಂಡ ಆನೆಗಳ ರಕ್ಷಣೆ ಮತ್ತು ಪಾಲಕ ಆನೆಗಳನ್ನು ಕಳೆದುಕೊಂಡು ಅಲೆಮಾರಿಗಳಾದ ಮರಿಗಳನ್ನು ರಕ್ಷಿಸುವ ಸಲುವಾಗಿ ಈ ಆನೆ ಬಿಡಾರ ನಿರ್ಮಿಸಲಾಗಿತ್ತು. ಅಂತೆಯೇ ಕಾಡಿನಿಂದ ತಪ್ಪಿಸಿಕೊಂಡ, ಗಾಯಗೊಂಡ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಇದೀಗ ಈ ಆನೆ ಬಿಡಾರದಲ್ಲಿ 90 ಆನೆಗಳು ಇವೆ. ಈ ಸಾಲಿಗೆ ಈಗ ಎರಡು ಪುಟ್ಟ ಆನೆಮರಿಗಳು ಸೇರಿವೆ.
Published On - 1:04 pm, Thu, 2 September 21