ಕಲಬುರಗಿ ರೈತರಿಗೆ ಕೈಕೊಟ್ಟ ಬಿತ್ತನೆ ಬೀಜ; ಲಕ್ಷಾಂತರ ರೂಪಾಯಿ ನಷ್ಟ!

ಜಿಲ್ಲೆಯ ಸೇಡಂ ತಾಲೂಕಿನ ನೀಲಹಳ್ಳಿ, ಮಳಖೇಡ, ಚಿತ್ತಾಪುರ ತಾಲೂಕಿನ ನಾಲವಾರ, ಕಡಬೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ವರ್ತಕರ ಬಣ್ಣದ ಮಾತುಗಳನ್ನು ನಂಬಿ ಮೋಸ ಹೋಗಿದ್ದಾರೆ.

ಕಲಬುರಗಿ ರೈತರಿಗೆ ಕೈಕೊಟ್ಟ ಬಿತ್ತನೆ ಬೀಜ; ಲಕ್ಷಾಂತರ ರೂಪಾಯಿ ನಷ್ಟ!
ಹೆಸರು ಬೆಳೆ

ಕಲಬುರಗಿ: ಈಗಾಗಲೇ ಅನ್ನದಾತರು ಹತ್ತಾರು ಕಾರಣಗಳಿಂದ ಸಂಕಷ್ಟದಲ್ಲಿದ್ದಾರೆ. ಅನೇಕರು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೇ, ಬಿತ್ತಿದರು ಬೆಳೆ ಬಾರದೇ ಲಕ್ಷಾಂತರ ರೂಪಾಯಿ ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಪ್ರತಿಯೊಬ್ಬರು ಬರಬೇಕು. ಆದರೆ ಜಿಲ್ಲೆಯಲ್ಲಿ ಕೆಲ ವರ್ತಕರು ತಮ್ಮ ಲಾಭದ ಆಸೆಗಾಗಿ ಕಳಪೆ ಬಿತ್ತನೆ ಬೀಜ ನೀಡಿದ್ದರಿಂದ ಅನೇಕ ರೈತರು ಬೆಳೆ ಬಾರದೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಸೇಡಂ ತಾಲೂಕಿನ ನೀಲಹಳ್ಳಿ, ಮಳಖೇಡ, ಚಿತ್ತಾಪುರ ತಾಲೂಕಿನ ನಾಲವಾರ, ಕಡಬೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ವರ್ತಕರ ಬಣ್ಣದ ಮಾತುಗಳನ್ನು ನಂಬಿ ಮೋಸ ಹೋಗಿದ್ದಾರೆ. ಬಿತ್ತಿದ ಹೆಸರು, ಬೆಳೆ ಬಂದರು ಕೂಡಾ ಅದರಲ್ಲಿ ಕಾಯಿ ಆಗದೇ ಇದ್ದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮುಂಗಾರು ಸಮಯದಲ್ಲಿ ಜಿಲ್ಲೆಯಲ್ಲಿ ಅನೇಕ ರೈತರು ಕೆಲ ವರ್ತಕರು ನೀಡಿದ್ದ ಹೆಸರು ಕಾಳನ್ನು ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಸಾಮಾನ್ಯವಾಗಿ ಹೆಸರು ನಲವತ್ತೈದು ದಿನದಲ್ಲಿ ಹೂ ಬಿಟ್ಟು ಕಾಯಿಯಾಗುತ್ತದೆ. ಆದರೆ ಜಿಲ್ಲೆಯ ಕೆಲ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ ಹೆಸರು ಮೊಳಕೆ ಒಡೆದು, ಉತ್ತಮ ಬೆಳೆ ಬಂದಿದೆ. ಆದರೆ ಬಿತ್ತನೆ ಮಾಡಿ ಎರಡು ತಿಂಗಳಾದರು ಕಾಯಿಗಳಾಗದೇ ಹೆಸರು ಬೆಳೆ ಗೊಡ್ಡಾಗಿ ನಿಂತಿದೆ.

ಬೆಳೆ ನೋಡಿ ಸಂತಸ ಪಟ್ಟಿದ್ದ ರೈತರಿಗೆ ಶಾಕ್!
ಪ್ರಾರಂಭದಲ್ಲಿ ಮೊಣಕಾಲುದ್ದ ಬೆಳೆದ ಬೆಳೆಯನ್ನು ನೋಡಿ ರೈತರು ಸಂತಸ ಪಟ್ಟಿದ್ದರು. ಬೆಳೆ ಉತ್ತಮ ಬಂದಿದ್ದರಿಂದ ಕಾಯಿಗಳು ಕೂಡಾ ಚೆನ್ನಾಗಿ ಬರುತ್ತವೆ. ಈ ಬಾರಿ ಭರ್ಜರಿ ಹೆಸರು ಬೆಳೆ ಬರುತ್ತದೆ ಅಂತ ಅಂದುಕೊಡಿದ್ದರು. ಬಿತ್ತನೆ ಬೀಜ ನೀಡಿದ್ದವರು ಕೂಡಾ ಪ್ರತಿ ಎಕರಗೆ ಎಂಟರಿಂದ ಹತ್ತು ಕ್ವಿಂಟಾಲ್ ಹೆಸರು ಬರುತ್ತದೆ ಅಂತ ಹೇಳಿದ್ದರು. ಹೀಗಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ತಾವು ಬಿತ್ತಿದ ಹೆಸರು ಬೆಳೆಯಲ್ಲಿ ಎರಡು ತಿಂಗಳಾದರು ಹೂವುಗಳ ಕಾಣಲಿಲ್ಲ. ಕಾಯಿಯೂ ಇಲ್ಲ. ಇದು ರೈತರ ಆತಂಕವನ್ನು ಹೆಚ್ಚಿಸಿದೆ.

ಎರಡು ತಿಂಗಳಾದರೂ ಹೂ ಬಿಡದೆ, ಗಿಡದಲ್ಲಿ ಕಾಯಿಗಳು ಆಗದೇ ಇದ್ದಿದ್ದರಿಂದ ಅನೇಕರ ಬಳಿ ವಿಚಾರಿಸಿದಾಗ, ಬಹುತೇಕ ರೈತರು ಜಮೀನಿನಲ್ಲಿ ಬೆಳೆದ ಬೆಳೆಯಲ್ಲಿ ಇದೇ ಸ್ಥಿತಿ ಕಂಡುಬಂದಿತ್ತು. ಆಗ ಬಿತ್ತಿದ ಬೀಜವೇ ಸರಿಯಿಲ್ಲ ಅಂತ ಗೊತ್ತಾಯಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ ಖರೀದಿಸಿ, ಗೊಬ್ಬರ ಹಾಕಿ ಬೆಳೆ ಬೆಳದಿದ್ದ ರೈತರಿಗೆ ಇದೀಗ ದಿಕ್ಕೆ ತೋಚದಂತಾಗಿದೆ.

ಬಿತ್ತನೆ ಬೀಜದ ಅಭಾವದಿಂದ ರೈತರು ಸಂಕಷ್ಟ
ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಬೀಜದ ಅಭಾವ ಉಂಟಾಗಿತ್ತು. ಜಿಲ್ಲೆಯಲ್ಲಿ ರೈತರು ಮುಂಗಾರು ಬೆಳೆಯಾಗಿ ಹೆಸರು ಮತ್ತು ಉದ್ದನ್ನು ಬಿತ್ತನೆ ಮಾಡುತ್ತಾರೆ. ಸಕಾಲದಲ್ಲಿ ಮಳೆಯಾದರೂ ಬಿತ್ತನೆ ಬೀಜ ಸಿಗದೇ ಇದ್ದಿದ್ದರಿಂದ ರೈತರು ಬೀಜಕ್ಕಾಗಿ ಪರದಾಡಿದ್ದರು. ಆ ಸಂದರ್ಭದಲ್ಲಿ ಗುಜರಾತ್ ಮೂಲದ ವ್ಯಾಪಾರಿಗಳು ಹಳ್ಳಿ ಹಳ್ಳಿಗೆ ಹೋಗಿ ತಮ್ಮ ಬಳಿಯಿರುವ ಬಿತ್ತನೆ ಬೀಜ ಬಿತ್ತಿದರೆ ಉತ್ತಮ ಬೆಳೆ ಬರುತ್ತದೆ ಅಂತ ಹೇಳಿದ್ದರಂತೆ. ಹೀಗಾಗಿ ಅನೇಕರು ಹಿಂದು ಮುಂದು ನೋಡದೆ ಪ್ರತಿ ಕ್ವಿಂಟಾಲ್ ಹೆಸರಿಗೆ ಹತ್ತು ಸಾವಿರ ನೀಡಿ, ಅದೇ ಹೆಸರನ್ನು ಬಿತ್ತನೆ ಮಾಡಿದ್ದರು. ಮತ್ತೊಂದೆಡೆ ಚಿತ್ತಾಪುರ ತಾಲೂಕಿನ ಅನೇಕ ರೈತರು, ಕಲಬುರಗಿ ನಗದಲ್ಲಿರುವ ಮೂಕಾಂಬಿಕಾ ಟ್ರೇಡರ್ಸ್ ಅನ್ನೋ ಅಂಗಡಿಯಲ್ಲಿ ಹೆಸರು ಖರೀದಿ ಮಾಡಿದ್ದಾರೆ. ರೈತರು ಕೇಳಿದಾಗ ಬಿತ್ತನೆ ಬೀಜ ಇದೆ. ಉತ್ತಮ ಇಳುವರಿ ಬರುತ್ತದೆ ಅಂತ ಅಂಗಡಿ ಮಾಲೀಕ, ರೈತರಿಗೆ ಬಿತ್ತನೆ ಬೀಜ ನೀಡಿದ್ದಾರೆ. ಆದರೆ ಬಿತ್ತಿದ ಬೀಜ, ಕಾಯಿ ಆಗದೇ ಇದ್ದಾಗ ರೈತರು ವ್ಯಾಪಾರಸ್ಥರ ಬಳಿ ಕೇಳಿದರೆ ನಾನು ಬಿತ್ತನೆ ಬೀಜ ಅಂತ ನೀಡಿಲ್ಲ. ಸಾಮಾನ್ಯವಾಗಿ ಹೆಸರು ಅಂತ ನೀಡಿದ್ದೇನೆ ಅಂತ ಉಲ್ಟಾ ಹೊಡದಿದ್ದಾನಂತೆ.

ಲಕ್ಷಾಂತರ ರೂಪಾಯಿ ಆಧಾಯ ಕಳೆದುಕೊಂಡು ರೈತರು
ಬಿತ್ತನೆ ಬೀಜ, ಗೊಬ್ಬರ, ಆಳಿನ ಖರ್ಚು ಸೇರಿದಂತೆ ಪ್ರತಿ ಎಕರೆಗೆ ಬಿತ್ತನೆ ಮಾಡಲು ಇಪ್ಪತ್ತು ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಮತ್ತೊಂದಡೆ ಉತ್ತಮ ಬೆಳೆ ಬಂದಿದ್ದರೆ ರೈತರಿಗೆ ತಮ್ಮ ಖರ್ಚು ವೆಚ್ಚ ತಗದು ಇಪ್ಪತ್ತರಿಂದ ಮೂವತ್ತು ಸಾವಿರ ಆದಾಯ ಬರುತ್ತಿತ್ತು. ಇದೀಗ ಅದು ಇಲ್ಲದಂತಾಗಿದೆ. ಅಂದರೆ ರೈತರು ಪ್ರತಿ ಎಕರೆಯಿಂದ ಇದೀಗ ಐವತ್ತು ಸಾವಿರಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ಸದ್ಯ ರೈತರು, ತಮಗೆ ಆಗಿರುವ ಮೋಸದ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೃಷಿ ಇಲಾಖೆ, ಮತ್ತು ಜಿಲ್ಲಾಡಳಿತ ಕಳಪೆ ಬಿತ್ತನೆ ಬೀಜ ನೀಡಿರುವ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ರೈತರಿಗೆ ಪರಿಹಾರ ಕೊಡಿಸುವ ಕೆಲಸವನ್ನು ಮಾಡಬೇಕಿದೆ.

ಸಕಾಲದಲ್ಲಿ ಹೆಸರು ಬಿತ್ತನೆ ಬೀಜ ಸಿಗದೇ ಇದ್ದಿದ್ದರಿಂದ ಕೆಲ ವರ್ತಕರ ಬಳಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದವು. ಉತ್ತಮ ಬೆಳೆ ಕೂಡಾ ಬಂದಿತ್ತು. ಆದರೆ ಅದರಲ್ಲಿ ಕಾಯಿಗಳೇ ಆಗಿಲ್ಲ. ಹೀಗಾಗಿ ನಮಗೆ ಸಾವಿರಾರು ರೂಪಾಯಿ ಲಾಸ್ ಆಗಿದೆ. ರೈತರ ಜೊತೆ ಚೆಲ್ಲಾಟವಾಡಿರುವ ವರ್ತಕರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ರೈತರಿಗೆ ನೆರವು ನೀಡಬೇಕು. ಇಲ್ಲದಿದ್ದರೆ ಮೊದಲೇ ಸಂಕಷ್ಟದಲ್ಲಿರುವ ರೈತರ ಬದಕು ಮತ್ತಷ್ಟು ಶೋಚನೀಯವಾಗಲಿದೆ ಅಂತ ರೈತ ಶರಣು ಎಂಬುವವರು ಹೇಳಿದ್ದಾರೆ.

ಜಿಲ್ಲೆಯ ಕೆಲವೆಡೆ ಬಿತ್ತಿರುವ ಹೆಸರು, ಕಾಯಿಯಾಗಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ನಾನು ಕೂಡಾ ಅನೇಕ ರೈತರ ಜಮೀನಿಗೆ ಹೋಗಿ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಂಠಿ ಕೃಷಿ ನಿರ್ದೇಶಕ ರಿತೇಂದ್ರನಾಥ್ ಸೂಗುರ್ ತಿಳಿಸಿದ್ದಾರೆ.

ವರದಿ- ಸಂಜಯ್ ಚಿಕ್ಕಮಠ

ಇದನ್ನೂ ಓದಿ

ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ

ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ

(Mung Bean Farmers are at a loss from poor quality sowing seed in Kalaburagi)

Click on your DTH Provider to Add TV9 Kannada