ಎಟಿಎಂ ಕಾರ್ಡ್ ನೀಡುವುದಾಗಿ ಹೇಳಿ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ; ರೈತನ ಖಾತೆಯಿಂದ ಕೆಲವೇ ಸೆಕೆಂಡಿನಲ್ಲಿ 1 ಲಕ್ಷ ಮಂಗಮಾಯ!
ಕೃಷ್ಣೇಗೌಡ ತನ್ನ ಮೊಬೈಲ್ಗೆ ಬಂದ ಒಟಿಪಿಯನ್ನು ಆತನಿಗೆ ಹೇಳಿದ ತಕ್ಷಣ ಖಾತೆಯಿಂದ 99,998 ರೂಪಾಯಿ ಹಣ ಡ್ರಾ ಆಗಿದೆ. ಹಣ ಪಡೆದ ವ್ಯಕ್ತಿ ನಾಳೆ ಬೆಳಗ್ಗೆ 10 ಗಂಟೆಗೆ ಬ್ಯಾಂಕಿಗೆ ಬಂದು ಹೊಸ ಎಟಿಎಂ ಕಾರ್ಡ್ ಪಡೆದುಕೊಂಡು ಹೋಗಿ ಸರ್ ಅಂತಾ ಕರೆ ಕಟ್ ಮಾಡಿದ್ದಾನೆ.
ಚಿಕ್ಕಮಗಳೂರು: ‘ನಾನು ಜಾವಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿರುವುದು, ನೀವು ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ನಲ್ಲಿ ಖಾತೆಯನ್ನ ಹೊಂದಿದ್ದೀರಿ. ಈಗ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ಗೆ ಮರ್ಜ್ ಆಗಿರುವುದರಿಂದ ನಿಮ್ಮ ಎಟಿಎಂ ಕಾರ್ಡ್ ವರ್ಕ್ ಆಗುವುದಿಲ್ಲ. ನಿಮಗೆ ಕೆನರಾ ಬ್ಯಾಂಕ್ ಎಟಿಎಂ ನೀಡಬೇಕಾಗಿರುವುದರಿಂದ ನಿಮ್ಮ ಮೊಬೈಲ್ಗೆ ಬರುವ ಒಟಿಪಿಯನ್ನ ಹೇಳಿ’ ಅಂತ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬ ರೈತನಿಗೆ ಪಂಗನಾಮ ಹಾಕಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯ ಕೃಷ್ಣೇಗೌಡ ಎಂಬುವವರು ಕರೆ ನಿಜವೆಂದು ನಂಬಿ ಸುಮಾರು 1 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಕೃಷ್ಣೇಗೌಡ ತನ್ನ ಮೊಬೈಲ್ಗೆ ಬಂದ ಒಟಿಪಿಯನ್ನು ಆತನಿಗೆ ಹೇಳಿದ ತಕ್ಷಣ ಖಾತೆಯಿಂದ 99,998 ರೂಪಾಯಿ ಹಣ ಡ್ರಾ ಆಗಿದೆ. ಹಣ ಪಡೆದ ವ್ಯಕ್ತಿ ನಾಳೆ ಬೆಳಗ್ಗೆ 10 ಗಂಟೆಗೆ ಬ್ಯಾಂಕಿಗೆ ಬಂದು ಹೊಸ ಎಟಿಎಂ ಕಾರ್ಡ್ ಪಡೆದುಕೊಂಡು ಹೋಗಿ ಸರ್ ಅಂತಾ ಕರೆ ಕಟ್ ಮಾಡಿದ್ದಾನೆ.
ಮುಗ್ಧ ರೈತನಿಗೆ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಯಮಾರಿಸಿದ ಭೂಪ! ಮುಗ್ಧ ಜನರನ್ನ ಹೇಗೆಲ್ಲಾ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ರೈತ ಕೃಷ್ಣೇಗೌಡ ಬ್ಯಾಂಕ್ ಮ್ಯಾನೇಜರ್ ಎಂದ ಕೂಡಲೇ ನಂಬಿ ಬರೋಬ್ಬರಿ 1 ಲಕ್ಷ ಹಣವನ್ನ ಕಳೆದುಕೊಂಡಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಾ ಇರುವಾಗ ಕೃಷ್ಣೇಗೌಡರ ಮೊಬೈಲ್ಗೆ ಕರೆ ಬಂದಿದೆ. ತಾನು ಜಾವಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ನ ಮ್ಯಾನೇಜರ್ ಎಂದು ಕನ್ನಡದಲ್ಲೇ ಪರಿಚಯಿಸಿಕೊಂಡಿದ್ದಾನೆ. ಹೊಸ ಎಟಿಎಂ ಕಾರ್ಡ್ ನೀಡುವುದಾಗಿ ಸಲೀಸಾಗಿ ನಂಬಿಸಿ 2 ಬಾರಿ 49.999 ರೂಪಾಯಿಯನ್ನ ಅವರ ಖಾತೆಯಿಂದ ಎಗರಿಸಿದ್ದಾನೆ. ಕರೆ ಕಟ್ ಆದ ಮೇಲೆ ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಕೃಷ್ಣೇಗೌಡರು ಆತಂಕಗೊಂಡಿದ್ದಾರೆ. ಕೂಡಲೇ ಬ್ಯಾಂಕ್ಗೆ ಹೋಗಿ ಖಾತೆಯನ್ನ ಫ್ರೀಜ್ ಮಾಡಿಸಿದ್ದಾರೆ.
ಮತ್ತೆ ಮೋಸಕ್ಕೆ ಯತ್ನ ಈ ಘಟನೆ ನಡೆದಿದ್ದು ಆಗಸ್ಟ್ 31ಕ್ಕೆ. ಕೃಷ್ಣೇಗೌಡರಿಗೆ ಕರೆ ಮಾಡಿದ್ದ ವ್ಯಕ್ತಿ 1 ಲಕ್ಷ ರೂ. ಹಣವನ್ನ ಎಗರಿಸಿದ್ದ. ಆದರೆ ಕೂಡ ಕೃಷ್ಣೇಗೌಡರ ಖಾತೆಯಲ್ಲಿ ಹಣ ಇರೋದನ್ನು ಗಮನಿಸಿದ್ದ ಆತ ಮರುದಿನ ಬೆಳಗ್ಗೆ ಅಂದರೆ ನಿನ್ನೆ ಬೆಳಗ್ಗೆ 9 ಗಂಟೆಗೆ ಪುನಃ ಕರೆ ಮಾಡಿ ಈ ದಿನ ಬೆಳಗ್ಗೆ 10 ಗಂಟೆಗೆ ಬ್ಯಾಂಕ್ಗೆ ಬಂದು ಎಟಿಎಂ ಪಡೆದುಕೊಂಡು ಹೋಗಿ ಅಂತಾ ಹೇಳಿದ. ಈಗ ಮತ್ತೊಂದು ಒಟಿಪಿ ಬರುತ್ತದೆ. ಅದನ್ನ ನನಗೆ ಹೇಳಿ ಅಂತಾ ಕೃಷ್ಣೇಗೌಡರಿಗೆ ಮತ್ತೆ ಯಮಾರಿಸಲು ಮುಂದಾಗಿದ್ದ. ಆದರೆ ಅದಾಗಲೇ ಮೋಸ ಹೋಗಿದ್ದ ಕೃಷ್ಣೇಗೌಡರು ಮತ್ತೆ ಅದಕ್ಕೆ ಅವಕಾಶ ಕೊಡಲಿಲ್ಲ.
ಈ ಬಗ್ಗೆ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಈ ಬಗ್ಗೆ ಟಿವಿ9 ಡಿಜಿಟಲ್ ತಂಡ ಕೃಷ್ಣೇಗೌಡರನ್ನ ಮಾತನಾಡಿಸಿದಾಗ, ಕರೆ ಮಾಡಿದ ವ್ಯಕ್ತಿ ಬ್ಯಾಂಕ್ ಮ್ಯಾನೇಜರ್ ಅಂತಾ ಹೇಳಿದ್ದರಿಂದ ನಾನು ಆತನನ್ನ ನಂಬಿ ಮೋಸ ಹೋದೆ. ಆತ ಸ್ವಚ್ಛ ಕನ್ನಡದಲ್ಲೇ ಮಾತನಾಡಿದ್ದು ಕೂಡ ನನಗೆ ಆ ಕ್ಷಣದಲ್ಲಿ ಮೋಸ ಹೋಗಲು ಕಾರಣವಾಯ್ತು ಅನ್ನಿಸುತ್ತೆ. ನನಗೆ ಆಗಿರುವ ಮೋಸ ಬೇರೆ ಯಾರಿಗೂ ಆಗಬಾರದು. ಹೀಗಾಗಿಯೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈ ವ್ಯಕ್ತಿ ನಮ್ಮ ರಾಜ್ಯದವನೇ ಅನಿಸುತ್ತೆ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಅಂತಾ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ
‘ಒಂದೇ ದೇಹಕ್ಕೆ ಎರಡು ತಲೆ, ನಾಲ್ಕು ಕಣ್ಣಿನ ಎಮ್ಮೆ ಕರುವಿನ ಜನನ‘; ಅಪರೂಪದ ಫೋಟೋ ವೈರಲ್
ಬೆಂಗಳೂರಿನಲ್ಲಿ ನಕಲಿ ವೀಸಾ ತಯಾರಿಸುತ್ತಿದ್ದ ಕೇರಳ ಮೂಲದ ಆರೋಪಿ ಸೆರೆ
(A person called a farmer and cheated that he would issue an ATM card at Chikmagalur)