ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ರೊಮೇನಿಯಾ ಸರ್ಕಾರಕ್ಕೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಸಿಲುಕಿ, ಅಲ್ಲಿಂದ ಗಡಿ ದಾಟಿ ರೊಮೇನಿಯಾಕ್ಕೆ ಕಾಲಿಟ್ಟ ಭಾರತದ ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆ ಮಾಡಿಕೊಟ್ಟು, ಅವರನ್ನು ತುಂಬ ಚೆನ್ನಾಗಿ ಕಾಳಜಿ ಮಾಡಿದ್ದಕ್ಕೆ ಧನ್ಯವಾದಗಳು. ಅವರದ್ದೇ ದೇಶದ ಮಕ್ಕಳು ಎಂಬಂತೆ ರೊಮೇನಿಯಾ ಸರ್ಕಾರ ನೋಡಿಕೊಂಡಿದ್ದು ನಿಜಕ್ಕೂ ಖುಷಿಯಾಗಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಫೆ.24ರಂದು ಯುದ್ಧಸಾರಿದೆ. ಆಗಿನಿಂದಲೂ ಭಾರತ ಸರ್ಕಾರ ಆಪರೇಶನ್ ಗಂಗಾ ಎಂಬ ಹೆಸರಿನಲ್ಲಿ ಅಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುತ್ತಿದೆ. ಉಕ್ರೇನ್ ವಾಯುಮಾರ್ಗಗಳು ಬಂದ್ ಆಗಿರುವ ಕಾರಣ, ಅಲ್ಲಿರುವ ವಿದ್ಯಾರ್ಥಿಗಳು ಹಂಗೇರಿ, ರೊಮೇನಿಯಾ, ಪೋಲ್ಯಾಂಡ್ ಮತ್ತಿತರ ದೇಶಗಳ ಗಡಿ ಭಾಗಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಬರಬೇಕಾಗಿದೆ. ಹೀಗೆ ಈ ದೇಶಗಳಿಂದ ಭಾರತದವನ್ನು ಕರೆತರಲು ವಾಯುಸೇನೆ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಏರ್ ಇಂಡಿಯಾ ಸೇರಿ ಇನ್ನೂ ಹಲವು ಕಮರ್ಷಿಯಲ್ ವಿಮಾನಗಳೂ ಅಲ್ಲಿ ಹೋಗುತ್ತಿವೆ.
ಆಪರೇಶನ್ ಗಂಗಾ ತ್ವರಿತವಾಗಿ ನಡೆಯಲು ಫೆ.28ರಂದು ಕೇಂದ್ರಸರ್ಕಾರ ನಾಲ್ವರು ಸಚಿವರನ್ನು ಉಕ್ರೇನ್ನ ನಾಲ್ಕು ಗಡಿ ರಾಷ್ಟ್ರಗಳಿಗೆ ಕಳಿಸಿದೆ. ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ಜನರಲ್ ವಿ.ಕೆ.ಸಿಂಗ್ ಆಪರೇಶನ್ ಗಂಗಾದ ಉಸ್ತುವಾರಿ ವಹಿಸಿಕೊಂಡಿದ್ದು, ಅದರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾಕ್ಕೆ ತೆರಳಿದ್ದಾರೆ. ಹೀಗೆ ರೊಮೇನಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಮಾಡಲಾದ ವ್ಯವಸ್ಥೆ, ಅವರಲ್ಲಿ ಊಟ ಮಾಡುತ್ತಿರುವುದು, ತಾವು ವಿದ್ಯಾರ್ಥಿಗಳೊಟ್ಟಿಗೆ ಮಾತುಕತೆ ನಡೆಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ನಮ್ಮ ದೇಶದ ಮಕ್ಕಳನ್ನು ಅವರ ಮಕ್ಕಳಂತೆ ನೋಡಿಕೊಂಡ ರೊಮೇನಿಯಾಕ್ಕೆ ಕೃತಜ್ಞತೆಗಳು. ಒಬ್ಬ ಅಮೆರಿಕ ಶೆಫ್ ಇಲ್ಲಿ ಭಾರತೀಯ ಆಹಾರಗಳನ್ನು ತಯಾರಿಸುತ್ತಿದ್ದರೆ, ವಿದ್ಯಾರ್ಥಿಗಳಿರುವ ಶೆಲ್ಟರ್ನ್ನು ಕಾಯುತ್ತಿರುವ ಪೊಲೀಸ್ ಅಧಿಕಾರಿಗಳವರೆಗೆ ಎಲ್ಲರಿಗೂ ಧನ್ಯವಾದ. ಪ್ರತಿಯೊಬ್ಬ ಮನುಷ್ಯನೂ ಕಷ್ಟದಲ್ಲಿರುವ ಇನ್ನೊಬ್ಬರಿಗೆ ಸಹಾಯ ಮಾಡಲೇಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿದ್ದೇ ಆದಲ್ಲಿ, ಯಾವುದೂ ಅಸಾಧ್ಯವಲ್ಲ ಎಂದು ಹೇಳಿಕೊಂಡಿದ್ದಾರೆ.
ಉಕ್ರೇನ್ನಲ್ಲಿ ಯುದ್ಧ ತೀವ್ರಗೊಂಡಷ್ಟೂ ಇತ್ತ ಆಪರೇಷನ್ ಗಂಗಾ ಕಾರ್ಯಾಚರಣೆಯೂ ಭರದಿಂದ ಸಾಗುತ್ತಿದೆ. ಇದುವರೆಗೆ ಒಟ್ಟು 63 ವಿಮಾನಗಳಲ್ಲಿ 13,300 ಭಾರತೀಯ ವಿದ್ಯಾರ್ಥಿಗಳು ಆಪರೇಶನ್ ಗಂಗಾ ಮೂಲಕ ವಾಪಸ್ ಭಾರತಕ್ಕೆ ಬಂದಿದ್ದಾರೆ. ಇನ್ನೂ ಸಾವಿರಾರು ಜನರು ಉಕ್ರೇನ್ನಲ್ಲಿಯೇ ಇದ್ದು, ಅವರನ್ನೆಲ್ಲ ಭಾರತಕ್ಕೆ ಕರೆತರುವ ಕೆಲಸ ಅವಿರತವಾಗಿ ನಡೆಯುತ್ತಿದೆ.
Overcome by gratitude towards Romania for caring for our children as their own.From an American chef teaching himself to cook Indian food to police officers manning shelters 24*7,nothing is impossible when humans decide to stand up for their mates in testing times.More power to u pic.twitter.com/GHSThkovt4
— Jyotiraditya M. Scindia (@JM_Scindia) March 6, 2022
ಇದನ್ನೂ ಓದಿ: ‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’: ರಿಷಬ್ ಶೆಟ್ಟಿ ಖಡಕ್ ನಿರ್ಧಾರ