
ವೈರಸ್ ರೋಗ ಮಂಕಿಪಾಕ್ಸ್ ಇದೀಗ ಮಕ್ಕಳಿಗೂ ವಕ್ಕರಿಸಲು ಪ್ರಾರಂಭಿಸಿದ್ದು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಅಂಬೆಗಾಲಿಡುವ ಮಗುವಿನಲ್ಲಿ ಮಂಕಿಪಾಕ್ಸ್ (Monkeypox) ಕಾಣಿಸಿಕೊಂಡಿದೆ ಎಂದು ಆರೋಗ್ಯ ಅಧಿಕಾರಿಗಳು ಶುಕ್ರವಾರ ಬಹಿರಂಗಪಡಿಸಿದ್ದಾರೆ. ಸೋಂಕು ತಗುಲಿದ ಶಿಶು ಯುಎಸ್ ನಿವಾಸಿಯಲ್ಲ ಎಂದೂ ತಿಳಿಸಿದ್ದಾರೆ. ಸದ್ಯ ಸೋಂಕಿಗೆ ಒಳಗಾದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಆರೋಗ್ಯವಾಗಿದೆ, ಚಿಕಿತ್ಸೆ ಮುಂದುವರಿದಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಹೇಳಿಕೆ ನೀಡಿದೆ.
ವಿವಿಧ ರೀತಿಯ ರೋಗಲಕ್ಷಣಗಳು ಮತ್ತು ಚರ್ಮದ ಜ್ವರವನ್ನು ಉಂಟುಮಾಡುವ ಮಂಕಿಪಾಕ್ಸ್, ಇದು ಸ್ಥಳೀಯವಾಗಿರುವ ಮತ್ತು ಮಧ್ಯ ಆಫ್ರಿಕಾ ದೇಶಗಳ ಹೊರಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪುರಷರಲ್ಲಿ ಕಾಣಿಸಿಕೊಳ್ಳುತ್ತಿದೆ. ರೋಗವು ಮುಖ್ಯವಾಗಿ ನಿಕಟ ಸಂಪರ್ಕದ ಮೂಲಕ ಹರಡುತ್ತದೆ. ರೋಗ ಪತ್ತೆಯಾದ ನಂತರದಿಂದ ಈವರೆಗೆ 60ಕ್ಕೂ ಹೆಚ್ಚು ದೇಶಗಳಲ್ಲಿ 14,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಆಫ್ರಿಕಾದಲ್ಲಿ ಐದು ಸಾವುಗಳು ಸಂಭವಿಸಿವೆ.
ಮಂಕಿಪಾಕ್ಸ್ ಬಗ್ಗೆ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿದ ಸಿಡಿಸಿಯ ಹೆಚ್ಚಿನ ಪರಿಣಾಮದ ರೋಗಕಾರಕಗಳು ಮತ್ತು ರೋಗಶಾಸ್ತ್ರ ವಿಭಾಗದ ಉಪನಿರ್ದೇಶಕ ಡಾ.ಜೆನ್ನಿಫರ್ ಮೆಕ್ಕ್ವಿಸ್ಟನ್, “ಮಂಕಿಪಾಕ್ಸ್ ಮಕ್ಕಳಲ್ಲಿ ಪತ್ತೆಯಾಗಿರುವ ಪ್ರಕರಣಗಳ ಬಗ್ಗೆ ಆಶ್ವರ್ಯವೇನಿಲ್ಲ. ಆದರೆ ಸಲಿಂಗಕಾಮಿ, ಉಭಯಲಿಂಗಿ ಮತ್ತು ಪುರುಷರೊಂದಿಗೆ ಸಂಭೋಗಿಸುವ ಇತರ ಪುರುಷರ ಸಮುದಾಯಗಳ ಹೊರಗೆ ಈ ವೈರಸ್ ಹರಡುತ್ತಿರುವುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ” ಎಂದಿದ್ದಾರೆ.
ಅಲ್ಲದೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೃಢಪಡಿಸಿದ 2,891 ಮಂಕಿಪಾಕ್ಸ್ ಪ್ರಕರಣಗಳಲ್ಲಿ ಶೇ.99 ಪುರುಷರೊಂದಿಗೆ ಸಂಬಂಧ ಹೊಂದಿರುವ ಪುರುಷರನ್ನು ಒಳಗೊಂಡಿವೆ. ಅದಾಗ್ಯೂ ಬೆರಳಣಿಕೆಯಷ್ಟು ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್ ಪುರುಷರು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಶ್ವೇತಭವನದ ಕೋವಿಡ್-19 ಪ್ರತಿಕ್ರಿಯೆ ಸಂಯೋಜಕ ಡಾ.ಆಶಿಶ್ ಝಾ ಮಾತನಾಡಿ, ಸರ್ಕಾರವು 3,00,000 ಡೋಸ್ ಮಂಕಿಪಾಕ್ಸ್ ಲಸಿಕೆಯನ್ನು ತಲುಪಿದೆ ಮತ್ತು ಡೆನ್ಮಾರ್ಕ್‌ನಿಂದ 786,000 ಡೋಸ್‌ಗಳ ರವಾನೆಯನ್ನು ತ್ವರಿತಗೊಳಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನಗರದಲ್ಲಿ ಅರ್ಹ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಅರ್ಹ ಜನಸಂಖ್ಯೆ ಶೇ.70ಕ್ಕಿಂತ ಹೆಚ್ಚು ಜನರಿಗೆ ಮೊದಲ ಲಸಿಕೆ ಡೋಸ್ ಒದಗಿಸಲು ಸಾಕಷ್ಟು ಲಸಿಕೆ ಕೈಯಲ್ಲಿದೆ ಎಂದು ಹೇಳಿದರು.
Published On - 7:59 am, Sat, 23 July 22