
ವಾಷಿಂಗ್ಟನ್, ಜುಲೈ 08: ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ಸರಕು ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆಯು ಬುಧವಾರ ಮುಂಜಾನೆ ಇರಾನ್ ವಿರುದ್ಧ ಅತ್ಯಂತ ಪ್ರಬಲ ಮತ್ತು ಭೀಕರ ವಾಯುದಾಳಿ ಆರಂಭಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿದ್ದ ಮಧ್ಯಂತರ ಶಾಂತಿ ಒಪ್ಪಂದವು ಸಂಪೂರ್ಣವಾಗಿ ಹಳಿತಪ್ಪುವ ಭೀತಿ ಎದುರಾಗಿದೆ.
ಅಮೆರಿಕದ CENTCOM ಹೇಳಿದ್ದೇನು?
ಅಮೆರಿಕದ ಮಿಲಿಟರಿ ಕಮಾಂಡ್ (CENTCOM) ಈ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ.ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರಿರುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಇದಕ್ಕೆ ಇರಾನ್ ಭಾರಿ ಬೆಲೆ ತೆರುವಂತೆ ಮಾಡಲು ಅಮೆರಿಕ ಸೇನೆಯು ಪ್ರಬಲ ದಾಳಿಗಳನ್ನು ಆರಂಭಿಸಿದೆ. ಇರಾನ್‌ನ ಈ ಆಕ್ರಮಣವು ಅನಗತ್ಯ, ಅಪಾಯಕಾರಿ ಮತ್ತು ಉಭಯ ದೇಶಗಳ ನಡುವಿನ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ.
ಇರಾನ್‌ನ ಯಾವೆಲ್ಲಾ ತಾಣಗಳ ಮೇಲೆ ದಾಳಿ?
ಅಮೆರಿಕದ ಯುದ್ಧ ವಿಮಾನಗಳು ದಕ್ಷಿಣ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಕೇಂದ್ರಗಳು, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ತಾಣಗಳು ಹಾಗೂ ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ಮಳೆಗರೆದಿದೆ. ಇರಾನ್‌ನ ಸಿರಿಕ್, ಕೆಶ್ಮ್ ದ್ವೀಪ ಮತ್ತು ಪ್ರಮುಖ ಬಂದರು ನಗರವಾದ ‘ಬಂದರ್ ಅಬ್ಬಾಸ್’ನಲ್ಲಿ ಭಾರಿ ಸ್ಫೋಟಗಳು ಸಂಭವಿಸಿದ್ದು, ಹಲವು ಮೀನುಗಾರಿಕೆ ಹಾಗೂ ವಾಣಿಜ್ಯ ಹಡಗುಕಟ್ಟೆಗಳು ಬೆಂಕಿಗಾಹುತಿಯಾಗಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಮತ್ತಷ್ಟು ಓದಿ: ಎಲ್‌ಎನ್‌ಜಿ ಪೂರೈಕೆ ಪುನಾರಂಭಗೊಂಡ ಬೆನ್ನಲ್ಲೇ ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಭಾರತ
ಶಾಂತಿ ಒಪ್ಪಂದ ಹಳಿತಪ್ಪಿಸುತ್ತದೆಯೇ ಈ ಘಟನೆ?
ಫೆಬ್ರವರಿ 28 ರಂದು ಆರಂಭವಾಗಿದ್ದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಕಳೆದ ಜೂನ್ ತಿಂಗಳಿನಲ್ಲಿ ಕದನ ವಿರಾಮ ಹಾಗೂ 60 ದಿನಗಳ ಮಾತುಕತೆಯ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿತ್ತು. ಆದರೆ ಈ ಹೊಸ ದಾಳಿಗಳು ಶಾಂತಿ ಪ್ರಕ್ರಿಯೆಗೆ ಚರಮಗೀತೆ ಹಾಡುವ ಸಾಧ್ಯತೆಯಿದೆ.
ಒಪ್ಪಂದ ಮುರಿಯಲು 3 ಪ್ರಮುಖ ಕಾರಣಗಳು
ಇರಾನ್‌ನ ತೈಲ ಪರವಾನಗಿ ರದ್ದು: ಮೂರು ಹಡಗುಗಳ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಮೆರಿಕ ಸರ್ಕಾರವು ಇರಾನ್‌ಗೆ ನೀಡಿದ್ದ ಅಂತಾರಾಷ್ಟ್ರೀಯ ತೈಲ ಮಾರಾಟದ ವಿಶೇಷ ಪರವಾನಗಿಯನ್ನು (Oil License) ತಕ್ಷಣದಿಂದಲೇ ರದ್ದುಗೊಳಿಸಿದೆ. ಇದು ಇರಾನ್‌ಗೆ ಆರ್ಥಿಕವಾಗಿ ಬಿದ್ದ ದೊಡ್ಡ ಹೊಡೆತವಾಗಿದ್ದು, ಒಪ್ಪಂದ ಮುರಿದುಬೀಳಲು ಮುಖ್ಯ ಕಾರಣವಾಗಬಹುದು.
ಜಲಸಂಧಿಯ ನಿಯಂತ್ರಣದ ಜಗಳ: ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳು ಸಂಚರಿಸಲು ಒಮಾನ್ ದೇಶದ ಕರಾವಳಿಯ ಮಾರ್ಗವನ್ನು ಬಳಸಬೇಕು ಎಂದು ಅಮೆರಿಕ ಬಯಸುತ್ತದೆ. ಆದರೆ ಈ ಜಲಮಾರ್ಗ ತನ್ನ ಹತೋಟಿಯಲ್ಲೇ ಇರಬೇಕು ಮತ್ತು ಅಲ್ಲಿ ಹಾದುಹೋಗುವ ಹಡಗುಗಳಿಂದ ತಾನು ಶುಲ್ಕ ವಸೂಲಿ ಮಾಡಬೇಕು ಎಂದು ಇರಾನ್ ಹಠ ಹಿಡಿದಿದೆ. ಇದೇ ವಿವಾದ ಈಗ ಯುದ್ಧಕ್ಕೆ ಕಾರಣವಾಗಿದೆ.
U.S. Central Command forces have begun launching a series of powerful strikes against Iran to impose heavy costs for targeting and attacking commercial shipping crewed by innocent civilians in an international waterway. The U.S. strikes are in response to Iranian attacks on three…
— U.S. Central Command (@CENTCOM) July 7, 2026
ಕತಾರ್ ಮತ್ತು ಸೌದಿ ಆಕ್ರೋಶ: ಇರಾನ್ ದಾಳಿ ನಡೆಸಿರುವ ಮೂರು ಹಡಗುಗಳಲ್ಲಿ ಕತಾರ್‌ನ ಎಲ್‌ಎನ್‌ಜಿ (LNG) ಗ್ಯಾಸ್ ಟ್ಯಾಂಕರ್ ಹಾಗೂ ಸೌದಿ ಅರೇಬಿಯಾದ ತೈಲ ಟ್ಯಾಂಕರ್ ಕೂಡ ಸೇರಿವೆ. ಹೀಗಾಗಿ ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಾಗಿ ಇರಾನ್ ಸಂಪೂರ್ಣ ಕಾನೂನು ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ (NATO) ಶೃಂಗಸಭೆಗಾಗಿ ಟರ್ಕಿಯಲ್ಲಿದ್ದಾಗಲೇ ಅಮೆರಿಕ ಈ ಭೀಕರ ವಾಯುದಾಳಿ ನಡೆಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಮೂಡಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಯುದ್ಧ ಸೃಷ್ಟಿಯಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು (WTI Crude) ತಕ್ಷಣವೇ ಶೇ. 2.5 ಕ್ಕಿಂತ ಹೆಚ್ಚು ಏರಿಕೆಯಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ