ವಾಷಿಂಗ್ಟನ್: ತೈವಾನ್ ವಿರುದ್ಧ ಇನ್ನು ಎರಡು ವರ್ಷ ಚೀನಾ ಮಿಲಿಟರಿ ಕಾರ್ಯಾಚರಣೆ ನಡೆಸಲಾರದು ಎಂದು ಅಮೆರಿಕ ಸೇನೆಯ ಉನ್ನತ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಚೀನಾ ದಾಳಿ ಮಾಡಿದರೆ ತೈವಾನ್ ಅನ್ನು ರಕ್ಷಿಸುವ ಸಾಮರ್ಥ್ಯ ಅಮೆರಿಕ ಸೇನೆಗೆ ಇದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಎಂದು ಅಮೆರಿಕ ಸಶಸ್ತ್ರ ಪಡೆಗಳ ಮುಖ್ಯಸ್ಥ ಜಾಯಿಂಟ್ ಚೀಫ್ಸ್ ಚೇರ್ಮನ್ ಮಾರ್ಕ್ ಮಿಲೆ ಬುಧವಾರ ಹೇಳಿದ್ದಾರೆ.
ತೈವಾನ್ ವಿಚಾರದಲ್ಲಿ ಅಮೆರಿಕ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಚೀನಾದ ದುಸ್ಸಾಹಸಗಳನ್ನು ತಡೆಯಲು ಯಾವ ಹಂತದಲ್ಲಿ ಮಧ್ಯಪ್ರವೇಶಿಸಬೇಕು ಎನ್ನುವುದನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದರು.
ವಿಶ್ವದ ಯಾವುದೇ ಭಾಗದಲ್ಲಿ ಎಂಥದ್ದೇ ಕಾರ್ಯಾಚರಣೆ ಬೇಕಾದರೂ ನಡೆಸುವ ಸಾಮರ್ಥ್ಯ ನಮಗಿದೆ. ತೈವಾನ್ ಅಸ್ತಿತ್ವವನ್ನು ಪ್ರಶ್ನಿಸುವ ಚೀನಾ ಸದ್ಯದಲ್ಲಿ ಯಾವುದೇ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಿದರು. ಆದರೆ ತೈವಾನ್ ಸ್ವಾಧೀನಪಡಿಸಿಕೊಳ್ಳುವ ಸಿದ್ಧತೆಗಳನ್ನು ಚೀನಾ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಚೀನಾದ ನಾಯಕತ್ವಕ್ಕೆ ಇಂಥ ಅಗತ್ಯ ಬಿದ್ದಾಗ ಅದು ತನ್ನ ನಿರ್ಧಾರವನ್ನು ಸುಲಭವಾಗಿ ಕಾರ್ಯರೂಪಕ್ಕೆ ತರಬಲ್ಲದು ಎಂದು ಹೇಳಿದರು.
ಚೀನಾ ಮತ್ತು ತೈವಾನ್ ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಎರಡೂ ದೇಶಗಳ ಜನರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. ನಮಗೆ ಶಾಂತಿಯುತ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ನಮಗಿದೆ ಎಂದು ಹೇಳಿದರು.
ಇದನ್ನೂ ಓದಿ: ತೈವಾನ್ ಈಶಾನ್ಯ ಭಾಗದಲ್ಲಿ 6.5ತೀವ್ರತೆಯ ಭೂಕಂಪ; 10 ಸೆಕೆಂಡ್ಗಳ ಕಾಲ ನಡುಗಿದ ಭೂಮಿ
ಇದನ್ನೂ ಓದಿ: ನಮ್ಮ ಆಗಸದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಬಗ್ಗೆ ಎಚ್ಚರದಿಂದ ಇರಬೇಕಿದೆ ಎಂದ ತೈವಾನ್
Published On - 11:09 pm, Wed, 3 November 21