ಅಮೆರಿಕಾ ಭಾರತದ ಆಯ್ಕೆಯ ಪಾಲುದಾರ; ಜೋ ಬೈಡೆನ್ ಹೇಳಿಕೆ ಬೆನ್ನಲ್ಲೇ ಅಮೆರಿಕದಿಂದ ಡ್ಯಾಮೇಜ್ ಕಂಟ್ರೋಲ್

| Updated By: ಸುಷ್ಮಾ ಚಕ್ರೆ

Updated on: Mar 23, 2022 | 1:31 PM

ರಷ್ಯಾ ಮತ್ತು ಭಾರತದ ನಡುವೆ ಐತಿಹಾಸಿಕ ಸಂಬಂಧವಿದೆ. ಹೀಗಾಗಿ ರಷ್ಯಾದ ಬಗ್ಗೆ ಭಾರತದ ನಿಲುವು ಅಮೆರಿಕಾ ಮತ್ತು ಭಾರತದ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅಮೆರಿಕಾದ ವಕ್ತಾರ ಹೇಳಿದ್ದಾರೆ.

ಅಮೆರಿಕಾ ಭಾರತದ ಆಯ್ಕೆಯ ಪಾಲುದಾರ; ಜೋ ಬೈಡೆನ್ ಹೇಳಿಕೆ ಬೆನ್ನಲ್ಲೇ ಅಮೆರಿಕದಿಂದ ಡ್ಯಾಮೇಜ್ ಕಂಟ್ರೋಲ್
ಜೋ ಬೈಡೆನ್
Follow us on

ನವದೆಹಲಿ: ಕ್ವಾಡ್ ಸದಸ್ಯ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ದೇಶಗಳಂತೆ ರಷ್ಯಾದ ವಿರುದ್ಧ ಭಾರತ ಗಟ್ಟಿಯಾಗಿ ವಿರೋಧದ ಧ್ವನಿ ಎತ್ತುತ್ತಿಲ್ಲ. ಉಕ್ರೇನ್ (Ukraine) ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದ ನಡೆಯನ್ನು ವಿರೋಧಿಸಲು ಭಾರತ ಹೆದರುತ್ತಿದೆ. ಈ ವಿಷಯದಲ್ಲಿ ಭಾರತದ ನಿಲುವು ಬಹಳ ಗೊಂದಲದಿಂದ ಕೂಡಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಭಾರತದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಭಾರತದ ವಿರುದ್ಧ ಟೀಕಿಸುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಾ ಇದೀಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ. ಭಾರತ ಮತ್ತು ಅಮೆರಿಕಾ ಎರಡೂ ದೇಶಗಳು ಮುಕ್ತವಾದ ಇಂಡೋ-ಪೆಸಿಫಿಕ್ ದೃಷ್ಟಿಕೋನವನ್ನು ಹಂಚಿಕೊಳ್ಳುವುದರಿಂದ ಭಾರತವು ಅಮೆರಿಕಾದ ಅತ್ಯಗತ್ಯ ಪಾಲುದಾರ ರಾಷ್ಟ್ರವಾಗಿದೆ ಎಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ಭಾರತಕ್ಕೆ ಅಮೆರಿಕಾ ಆಯ್ಕೆಯ ಪಾಲುದಾರನಾಗಿದೆ. ಹಾಗೇ, ರಷ್ಯಾ (Russia) ಮತ್ತು ಭಾರತದ ನಡುವೆ ಐತಿಹಾಸಿಕ ಸಂಬಂಧವಿದೆ. ಹೀಗಾಗಿ ರಷ್ಯಾದ ಬಗ್ಗೆ ಭಾರತದ ನಿಲುವು ಅಮೆರಿಕಾ (United States) ಮತ್ತು ಭಾರತದ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ರಷ್ಯಾದೊಂದಿಗೆ ಭಾರತದ ಐತಿಹಾಸಿಕ ಸಂಬಂಧದ ಹೊರತಾಗಿಯೂ, ಅಮರಿಕಾ ಭಾರತಕ್ಕೆ “ಆಯ್ಕೆಯ ಪಾಲುದಾರ” ಮತ್ತು ರಕ್ಷಣಾ ವಲಯ, ಭದ್ರತೆ ಸೇರಿದಂತೆ ವಾಷಿಂಗ್ಟನ್‌ನೊಂದಿಗಿನ ಸಂಬಂಧಗಳು ವಿಕಸನಗೊಳ್ಳುತ್ತಲೇ ಇರುತ್ತವೆ ಎಂದು ಅವರು ಹೇಳಿದ್ದಾರೆ.

ಕ್ವಾಡ್ ಪಾಲುದಾರರು ರಷ್ಯಾದ ಬಗ್ಗೆ ಭಾರತದ ನಿಲುವನ್ನು ಹೇಗೆ ನೋಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ನೆಡ್ ಪ್ರೈಸ್ “ಇದು ಇತಿಹಾಸದ ಪ್ರಶ್ನೆ. ನಾವು ಈಗ ಎಲ್ಲಿದ್ದೇವೆ…? ಭಾರತವು ಸಹಜವಾಗಿ ರಷ್ಯಾದೊಂದಿಗೆ ಐತಿಹಾಸಿಕ ರಕ್ಷಣಾ ಮತ್ತು ಭದ್ರತಾ ಸಂಬಂಧವನ್ನು ಹೊಂದಿದೆ. ಇದು ದ್ವಿಪಕ್ಷೀಯ ಸಂಬಂಧವಾಗಿದ್ದು, ಕಳೆದ 25 ವರ್ಷಗಳಲ್ಲಿ ಹೆಚ್ಚು ಆಳವಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ವಿಚಾರದಲ್ಲಿನ ಭಾರತದ ನಿಲುವನ್ನು ಜೋ ಬೈಡೆನ್ ಟೀಕಿಸಿದ್ದರು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಭಾರತ ಭವಿಷ್ಯದ ದೃಷ್ಟಿಯಿಂದ ತನ್ನ ತಟಸ್ಥ ನಿಲುವು ಸರಿಯಾಗಿಯೇ ಇದೆ ಎಂದು ಹೇಳಿದೆ.


ನಾವು ಈಗ ಭಾರತದ ಪಾಲುದಾರರಾಗಿದ್ದೇವೆ ಎಂಬುದು ಸತ್ಯ. ಐತಿಹಾಸಿಕ ಸಂಬಂಧಗಳ ಹೊರತಾಗಿಯೂ, ಪ್ರಪಂಚದಾದ್ಯಂತ ನಮ್ಮ ಅನೇಕ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಂತೆ ನಾವು ಈಗ ಭಾರತಕ್ಕೆ ಆಯ್ಕೆಯ ಪಾಲುದಾರರಾಗಿದ್ದೇವೆ ಎಂದು ಪ್ರೈಸ್ ಹೇಳಿದ್ದಾರೆ. ಭಾರತದ ಆಸ್ಟ್ರೇಲಿಯಾದ ಹೈಕಮಿಷನರ್ ಬ್ಯಾರಿ ಓ’ಫಾರೆಲ್ ಇತ್ತೀಚೆಗೆ ಕ್ವಾಡ್-ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ಪಾಲುದಾರ ರಾಷ್ಟ್ರಗಳು ರಷ್ಯಾದ ಬಗ್ಗೆ ಭಾರತದ ನಿಲುವನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಒಪ್ಪಿಕೊಳ್ಳುತ್ತವೆ. ಇದು ಕ್ವಾಡ್ ದೇಶಗಳ ನಡುವಿನ ಸಹಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಂದು ದೇಶವೂ ದ್ವಿಪಕ್ಷೀಯ ಸಂಬಂಧವನ್ನು ಹೊಂದಿದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾಮೆಂಟ್‌ಗಳಿಂದ ಸ್ಪಷ್ಟವಾಗಿದೆ ಎಂದು ಪ್ರೈಸ್ ಹೇಳಿದ್ದಾರೆ.

ಉಕ್ರೇನ್​ನ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ರಷ್ಯಾ ದಾಳಿ ಆರಂಭಿಸಿ ಸುಮಾರು ಒಂದು ತಿಂಗಳಾಗುತ್ತಿದೆ. ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳು ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ‘ಕ್ವಾಡ್ ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಜಪಾನ್ ಮತ್ತು ಆಸ್ಟ್ರೇಲಿಯಾಗಳು ರಷ್ಯಾದ​ ದಾಳಿಯನ್ನು ಕಟುವಾಗಿ ಖಂಡಿಸಿವೆ. ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಬೈಡೆನ್ ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ರಷ್ಯಾದ ವಿರುದ್ಧ ಭಾರತದ ನಿಲುವು ಅಲುಗಾಡುತ್ತಿದೆ ಎಂದು ಟೀಕಿಸಿದ್ದರು.

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅಮೆರಿಕ ಭಾರತವನ್ನು ಆಗ್ರಹಿಸಿತ್ತು. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಘೋಷಿಸಿದ್ದವು. ಆದರೆ ಭಾರತ ಮಾತ್ರ ಇಂತಹ ಯಾವುದೇ ನಿರ್ಧಾರವನ್ನೂ ಘೋಷಿಸಿರಲಿಲ್ಲ. ಜಪಾನ್ ಪ್ರಧಾನಿ ಕಿಶಿದಾ ಅವರೊಂದಿಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಹಿಂಸಾಚಾರ ತಕ್ಷಣ ನಿಲ್ಲಬೇಕು’ ಎಂದು ಹೇಳಿದ್ದರು. ಆದರೆ ರಷ್ಯಾ ವಿರುದ್ಧ ಮತ ಚಲಾಯಿಸಬೇಕಾದ ಪರಿಸ್ಥಿತಿ ಎದುರಾದಾಗ ಭಾರತ ತಟಸ್ಥ ನೀತಿಯನ್ನು ಅನುಸರಿಸಿತ್ತು.

ಬುಷ್ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನಡುವೆ 2005ರಲ್ಲಿ ನಡೆದ ಭಾರತ-ಅಮೆರಿಕಾ ನಾಗರಿಕ ಪರಮಾಣು ಒಪ್ಪಂದವು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯಕ್ಕೆ ಮುದ್ರೆಯೊತ್ತಿತು. 1962ರ ಚೀನಾ ಯುದ್ಧದಲ್ಲಿ ಸೋಲಿನ ನಂತರ ಅಮೆರಿಕಾ ಭಾರತದ ಸಹಾಯಕ್ಕೆ ಬಂದಿದ್ದರೂ, ಪಾಕಿಸ್ತಾನದೊಂದಿಗಿನ ಮಿಲಿಟರಿ ಮೈತ್ರಿಕೂಟದ ಸದಸ್ಯರಾಗಿ, ಸೆಂಟ್ರಲ್ ಟ್ರೀಟಿ ಆರ್ಗನೈಸೇಶನ್ (CENTO) ವಾಷಿಂಗ್ಟನ್ ಭಾರತದ ಕಡೆಗೆ ಒಲವು ತೋರಿತು.

ಬಳಿಕ, ಪಾಕಿಸ್ತಾನಕ್ಕೆ ಅಮೆರಿಕಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವಾಗ, ಭಾರತವು ಸೋವಿಯತ್ ಒಕ್ಕೂಟದ ಕಡೆಗೆ ತಿರುಗಿತು. 1971ರಲ್ಲಿ ಪರಸ್ಪರ ಕಾರ್ಯತಂತ್ರದ ಸಹಕಾರವನ್ನು ಸಂಯೋಜಿಸುವ ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಿತು. ಅಲ್ಲಿಂದೀಚೆಗೆ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳು ಬೆಳೆದಿದ್ದರೂ, ಭಾರತವು ತನ್ನ ರಕ್ಷಣಾ ಅಗತ್ಯಗಳ ಬಹುಪಾಲು ಭಾಗಕ್ಕಾಗಿ ರಷ್ಯಾದ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ರಷ್ಯಾದ ವಿರೋಧ ಕಟ್ಟಿಕೊಳ್ಳುವುದು ಭಾರತಕ್ಕೆ ಅಸಾಧ್ಯವಾಗಿದೆ.

ಇದನ್ನೂ ಓದಿ: ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಲು ಭಾರತಕ್ಕೆ ಭಯ: ಜೋ ಬೈಡೆನ್

Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು