ರೋಮ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರೊಂದಿಗೆ ತಳುಕು ಹಾಕಿಕೊಂಡಿರುವ ಸುಮಾರು ರೂ. 5,300 ಕೋಟಿ ಬೆಲೆಯ ಒಂದು ವಿಹಾರನೌಕೆಯನ್ನು (yacht) ವಶಪಡಿಸಿಕೊಳ್ಳುವಂತೆ ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ (Volodymyr Zelensky) ಅವರು ಮಂಗಳವಾರ ಇಟಲಿ ಸರ್ಕಾರವನ್ನು ಆಗ್ರಹಿಸಿದರು. ಇಟಲಿಯ ಸಂಸತ್ತನ್ನು ಉದ್ದೇಶಿಸಿ ಮಾತಾಡಿದ ಜೆಲೆನ್ಸ್ಕಿ, ಪುಟಿನ್ ಮತ್ತು ಅವರ ಐಶ್ವರ್ಯವಂತ ಬೆಂಬಲಿಗರು ಮೋಜು ಮಾಡಲು ಆಗಾಗ್ಗೆ ಇಟಲಿಗೆ ಬರುತ್ತಾರೆ, ಇಟಲಿಯಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಪುಟಿನ್ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು.
‘ನರಹಂತಕರು ನಿಮ್ಮ ದೇಶದಲ್ಲಿ ಮೋಜು ಮಾಡಲು ಅವಕಾಶ ನೀಡಬೇಡಿ, ಅವರ ರಿಯಲ್ ಎಸ್ಟೇಟ್, ಬ್ಯಾಂಕ್ ಖಾತೆ, ಶೆಹರಜಾದ್ ವಿಹಾರನೌಕೆ-ಎಲ್ಲ ದೊಡ್ಡ ದೊಡ್ಡ ಆಸ್ತಿಗಳು ಸೇರಿದಂತೆ ಚಿಕ್ಕಪುಟ್ಟವುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಿ,’ ಎಂದು ಅವರು ಇಟಲಿಯ ಮರಿನಾ ಡಿ ಕರಾರನಲ್ಲಿ ಲಂಗರು ಹಾಕಲಾಗಿರುವ ಸೂಪರ್ ವಿಹಾರನೌಕೆಯನ್ನು ಉಲ್ಲೇಖಿಸಿ ಮಾತಾಡಿದರು.
ಮಿರಮರ ಹೊಳೆಯುವ 6-ಮಹಡಿಯ ಶೆಹರಜಾದ್ ವಿಹಾರನೌಕೆಯಲ್ಲಿ ಎರಡು ಹೆಲಿಪ್ಯಾಡ್ ಗಳಿವೆ ಮತ್ತು ಅದರಲ್ಲಿ ಏಕಕಾಲಕ್ಕೆ 18 ಜನ ಗೆಸ್ಟ್ ಗಳು ಮತ್ತು 40 ಜನ ಸಿಬ್ಬಂದಿಗೆ ಸ್ಥಳಾವಕಾಶವಿದೆ. ಇದರ ಒಡೆಯ ಯಾರು ಅನ್ನೋದು ಇದುವರೆಗೆ ಬಹಿರಂಗಗೊಂಡಿಲ್ಲ ಆದರೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ ಅದು ಪುಟಿನ್ ಇಲ್ಲವೇ ಅವರ ಅಪ್ತರಲ್ಲಿ ಒಬ್ಬರಿಗೆ ಸೇರಿದೆ.
ಪುಟಿನ್ ಅವರನ್ನು ಕಠೋರವಾಗಿ ಟೀಕಿಸುವ ಮತ್ತು ಈಗ ಸೆರೆಯಲ್ಲಿರುವ ಅಲೆಕ್ಸೀ ನಾವಲ್ನೀ ಸ್ಥಾಪಿಸಿರುವ ಸಂಸ್ಥೆಯೊಂದು ಸೋಮವಾರ ಒಂದು ವರದಿಯನ್ನು ಬಿಡುಗಡೆ ಮಾಡಿ, ಸದರಿ ವಿಹಾರದೋಣಿ ಪುಟಿನ್ ಗೆ ಸೇರಿದ್ದು ಅಂತ ಸಾಬೀತು ಮಾಡಲು ತನ್ನಲ್ಲಿ ಪುರಾವೆ ಇದೆ ಎಂದು ಹೇಳಿದೆ.
ವಿಹಾರದೋಣಿಯಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿಯು ರಷ್ಯಾದ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ ನಲ್ಲಿ (ಎಫ್ ಎಸ್ ಒ) ಸೇವೆ ಸಲ್ಲಿಸುತ್ತಿರುವವರಾಗಿದ್ದು, ಇಟಲಿಗೆ ನಿಯಮಿತವಾಗಿ ಬರುವ ರಷ್ಯನ್ ಅಧ್ಯಕ್ಷರಿಗೆ ಇವರು ಭದ್ರತೆ ಒದಗಿಸುತ್ತಾರೆ.
ಶೆಹರಜಾದ್ ವಿಹಾರನೌಕೆ ಪುಟಿನ್ ಗೆ ಸೇರಿದ್ದು ಮತ್ತು ಅದರಲ್ಲಿ ಎಫ್ ಎಸ್ ಒ ನಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯಾಗಿದ್ದಾರೆಯೇ ಎಂದು ರಷ್ಯನ್ ಸರ್ಕಾರವನ್ನು ಕೇಳಿದ ಪ್ರಶ್ನೆಗೆ ಕೂಡಲೇ ಉತ್ತರ ಸಿಗಲಿಲ್ಲ.
ಇಟಲಿ ಪೊಲೀಸ್ ಮೂಲಗಳ ಪ್ರಕಾರ ವಿಹಾರನೌಕೆಯು ಪುಟಿನ್ ಇಲ್ಲವೇ ಅವರ ಆಪ್ತವಲಯದ ಯಾರಾದರೊಬ್ಬರಿಗೆ ಸೇರಿದೆ ಅನ್ನುವ ವಾದದಲ್ಲಿ ವಿಶ್ವಾಸ ವ್ಯಕ್ತಪಡಿಸಿಲ್ಲ. ಅದಾಗ್ಯೂ, ನೌಕೆಯ ಅಸಲಿ ಮಾಲೀಕ ಯಾರು ಅಂತ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
‘ಪುಟಿನ್, ಅವರ ಸ್ನೇಹಿತರು ಮತ್ತು ಸಹಚರರನ್ನು ಗುರಿಯಾಗಿಸಿಕೊಂಡು ಯುರೋಪಿಯನ್ ಯೂನಿಯನ್ ಹೇರಿರುವ ನಿರ್ಬಂಧಗಳ ಮುಂದುವರಿದ ಭಾಗವಾಗಿ ರಷ್ಯಾದ ಉದ್ಯಮಿಗಳು ಇಟಲಿಯಲ್ಲಿ ಹೊಂದಿದ್ದ ಸುಮಾರು ರೂ. 6,700 ಕೋಟಿಯಷ್ಟು ಆಸ್ತಿಯನ್ನು ನಮ್ಮ ಸರ್ಕಾರ ವಶಪಡಿಸಿಕೊಂಡಿದೆ,’ ಎಂದು ಇಟಾಲಿಯ ಪ್ರಧಾನಿ ಮಾರಿಯೋ ಡ್ರಾಗಿ ಮಂಗಳವಾರ ಸಂಸತ್ತಿಗೆ ತಿಳಿಸಿದರು.
ಆದಾಗ್ಯೂ, ಪುಟಿನ್ ಇಟಲಿಯಲ್ಲಿ ಯಾವ ಬಗೆಯ ಆಸ್ತಿ ಹೊಂದಿರಬಹುದು ಅಥವಾ ಎಲ್ಲೆಲ್ಲಿ ಆಸ್ತಿ ಹೊಂದಿದ್ದಾರೆ ಅನ್ನುವ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾದ ಮೇಲೆ ಒತ್ತಡ ಮತ್ತಷ್ಟು ಹೆಚ್ಚಲು ಯುರೋಪಿಯನ್ ಯೂನಿಯನ್ ಆ ದೇಶದ ಮೇಲೆ ತೈಲ ಖರೀದಿಯೂ ಸೇರಿದಂತೆ ಸಂಪೂರ್ಣವಾದ ವಾಣಿಜ್ಯ ನಿರ್ಬಂಧ ಹೇರಬೇಕೆಂದು ಜೆಲೆನ್ಸ್ಕಿ ಇಟಲಿ ಸಂಸತ್ತಿಗೆ ಹೇಳಿದರು.
‘ರಷ್ಯಾದ ಹಡಗುಗಳು ನಿಮ್ಮ ಬಂದರುಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಿರಿ. ಅಗಲೇ ರಷ್ಯಾಗೆ ತಾನು ಆಕ್ರಮಣ ನಡೆಸಿದ್ದಕ್ಕೆ ದುಬಾರಿ ಬೆಲೆ ತೆರಬೇಕಾಗಿದೆ ಅಂತ ಮನವರಿಕೆಯಾಗುತ್ತದೆ,’ ಎಂದು ಅವರು ಹೇಳಿದರು.
ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು