ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಾಕು ನಾಯಿ ವೈಟ್ ಹೌಸ್ ಕೆಲಸಗಾರನಿಗೆ ಕಚ್ಚಿದ್ದು ಈಗ ಅಂತರಾಷ್ಟ್ರೀಯ ಸುದ್ದಿ!
ನಮ್ಮೂರಲ್ಲಿ ಪಕ್ಕದ ಮನೆಯ ನಾಯಿ ಕಚ್ಚೋದು ಸಾಮಾನ್ಯ. ಅದೇನು ದೊಡ್ಡ ಸುದ್ದಿ ಅಲ್ಲ. ಈಗ ಅಮೇರಿಕದ ಅಧ್ಯಕ್ಷ ಜೋ ಬೈಡನ್ ಅವರ ನಾಯಿ, ಅವರನ್ನು ಕಾಯುವ ಸೀಕ್ರೆಟ್ ಸರ್ವೀಸ್ ಏಜೆಂಟ್ ಒಬ್ಬನನ್ನು ಕಚ್ಚಿದ್ದು ದೊಡ್ಡ ಸುದ್ದಿ ಆಗಿದೆ.
ಭಾರತದ ಹಳ್ಳಿಯಲ್ಲಿಯೋ ಅಥವಾ ದೊಡ್ಡ ನಗರಗಳಲ್ಲಿ ಸಾಕಿದ ನಾಯಿ ಅಕ್ಕ ಪಕ್ಕದ ಮನೆಯವರನ್ನೋ ಅಥವಾ ಕೇರಿಯಲ್ಲಿರುವ ಯಾರನ್ನೋ ಕಚ್ಚುವುದು ಸಾಮಾನ್ಯ. ನಾವು ಅಂದು ಕೊಳ್ಳುವುದೇನೆಂದರೆ ಈ ರೀತಿಯ ಘಟನೆ ಭಾರತದಲ್ಲಿ ಮಾತ್ರ ಆಗುತ್ತೆ. ಸಾಕಿದವರಿಗೆ ನಾಗರಿಕ ಜ್ಞಾನ ಇರಲ್ಲ. ನಾಯಿ ಸಾಕೋಕೆ ಬರುತ್ತೆ. ಆದರೆ ಬೇರೆಯವರಿಗೆ ಹೊರೆ ಆಗದ ರೀತಿಯಲ್ಲಿ ನೋಡಿಕೊಳ್ಳೋಕೆ ಆಗಲ್ಲ ಎಂದು ದೂರುತ್ತೇವೆ. ಅಲ್ಲವೇ? ಇದನ್ನು ಯಾರೂ ಸುದ್ದಿ ಮಾಡೋಕ್ಕೆ ಹೋಗಲ್ಲ. ಇಲ್ಲಿ ನೋಡಿ ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಸಾಕಿದ ನಾಯಿ ಇಬ್ಬರಿಗೆ ಕಚ್ಚಿದ್ದು ಇದು ಈಗ ಅಂತರಾಷ್ಟ್ರೀಯ ಸುದ್ದಿ ಆಗಿದೆ.
ಆ ನಾಯಿ ಹೆಸರು ಮೇಜರ್. ಅದು ನಮ್ಮ ನಿಮ್ಮಂತಲ್ಲ. ಈಗ ಅದು ಅಮೆರಿಕದ ಅಧ್ಯಕ್ಷರು ವಾಸಿಸುವ ವೈಟ್ ಹೌಸ್ನಲ್ಲಿ ಸಕಲ ಭೋಗವನ್ನು ಅನುಭವಿಸುತ್ತ ಇದೆ. ತಿನ್ನಲು ಬರವಿಲ್ಲ. ಮೂರು ವರ್ಷದ ಜರ್ಮನ್ ಶೆಫರ್ಡ್, ಮಾರ್ಚ್ 10 ರಂದು ಒಬ್ಬರಿಗೆ ಕಚ್ಚಿದೆ. ಆ ಘಟನೆ ನಡೆದು 20 ದಿನಗಳ ಅಂತರದಲ್ಲಿ ವೈಟ್ ಹೌಸ್ನ ದಕ್ಷಿಣ ಭಾಗದ ಹಸಿರು ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಉದ್ಯಾನವನ ಸೇವೆಯ ಉದ್ಯೋಗಿಯೊಬ್ಬನನ್ನು ಕಚ್ಚಿದೆ. ಕೂಡಲೇ ಆತನನ್ನು ವೈಟ್ ಹೌಸ್ನ ದವಾಖಾನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
2018 ರಲ್ಲಿ ಬೈಡನ್ ಅವರು ದತ್ತು ತೆಗೆದುಕೊಂಡಿರುವ ಎರಡು ಜರ್ಮನ್ ಶೆಫರ್ಡ್ ನಾಯಿಗಳಲ್ಲಿ ಒಂದಾದ, ಮೇಜರ್ಗೆ ಸ್ವಲ್ಪ ಆಕ್ರಮಣಕಾರಿ ಪ್ರವೃತ್ತಿ ಇದೆ ಎಂದು ಗುರುತಿಸಲಾಗಿದೆ. ಈ ತಿಂಗಳು 10ನೇ ತಾರೀಕಿನಂದು ಹೆಸರು ಹೇಳಲಿಚ್ಛಿಸದ ಓರ್ವ ವ್ಯಕ್ತಿಗೆ ಕಚ್ಚಿದ್ದು ವ್ಯಾಪಕವಾಗಿ ವರದಿಯಾಗಿತ್ತು.
ಚಾಂಪ್ ಮತ್ತು ಮೇಜರ್ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವು. ಎರಡೂ ನಾಯಿಗಳನ್ನು ಬೈಡನ್ ದತ್ತು ತೆಗೆದುಕೊಂಡಿದ್ದಾರೆ. ನಮ್ಮೂರಿನ ಥರ ಅಲ್ಲ. ಅಲ್ಲಿ ನಾಯಿ ಸಾಕಬೇಕು ಅಂದರೆ ಸ್ಥಳೀಯ ಸಂಸ್ಥೆಗೆ ಮಾಹಿತಿ ನೀಡಿ ಒಂದು ಪತ್ರ ತೆಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ, ನಾಯಿ ಸಾಕುವವನು ಅದರ ದೇಖರೇಖಿ ನೋಡಿಕೊಳ್ಳುವುದರ ಜೊತೆಗೆ ಅದು ಬೇರೆ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವುದು ನಾಯಿಯ ಮಾಲಿಕನ ಕರ್ತವ್ಯವಾಗಿರುತ್ತದೆ.
ಚಾಂಪ್ ಮತ್ತು ಮೇಜರ್ ವೈಟ್ ಹೌಸ್ಗೆ ಇತ್ತೀಚೆಗೆ ಬಂದಿವೆ. ಅವಕ್ಕೆ ಇಲ್ಲಿಯ ವಾತಾವರಣ ಇನ್ನೂ ಹೊಸದು. ಹಾಗೂ ಇಲ್ಲಿಯ ಜನ ಕೂಡ ಹೊಸಬರು. ಮೇಜರ್ ಹೊಸಬರನ್ನು ಕಂಡಾಗ ಸ್ವಲ್ಪ ಎಗರಾಡುತ್ತಾನೆ. ಹೊಸಬರನ್ನು ಕಂಡಾಗ ಆ ನಾಯಿ ಮೈಮೇಲೆ ಬರುತ್ತೆ ಎಂದು ವೈಟ್ ಹೌಸ್ ಮಾಧ್ಯಮ ಸಲಹೆಗಾರ ಹೇಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಅಂದಹಾಗೆ ಬಹುಶಃ ಇಂತಹ ರಗಳೆಗಳ ಗೊಡವೆಯೇ ಬೇಡ ಎಂದು ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಾಲಾವಧಿಯಲ್ಲಿ ನಡುಬೀದಿ ನಾರಾಯಣ ಯಾನೆ ಶ್ವಾನಗಳನ್ನು ಶ್ವೇತಭವನದೊಳಕ್ಕೆ ಬಿಟ್ಟುಕೊಂಡಿರಲಿಲ್ಲ. ಅದಕ್ಕೂ ಮುನ್ನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರ ಪುತ್ರಿಯರಿಗೆ ನಾಯಿಗಳು ಅಂದ್ರೆ ಅಚ್ಚುಮೆಚ್ಚು. ಹಾಗಾಗಿ ಅವರು ಶ್ವೇತಭವನದಲ್ಲಿ ಮೂರ್ನಾಲ್ಕು ನಾಯಿಗಳನ್ನು ಸಾಕಿದ್ದರು! ಅದೇ ಜೋ ಬೈಡನ್ ತಾವು ಅಧಿಕಾರಕ್ಕೆ ಬರುವುದು ಪಕ್ಕಾ ಆಗುತ್ತಿದ್ದಂತೆ ಮೊದಲು ಯಾವ ನಾಯಿಯನ್ನು ವೈಟ್ಹೌಸ್ನೊಳಕ್ಕೆ ಕರೆದುಕೊಂಡು ಹೋಗಬೇಕು ಎಂಬುದನ್ನು ನಿರ್ಧರಿಸಿದ್ದರು. ಆದರೆ ಈಗ ನೋಡಿದರೆ ಹೀಗಾಗಿದೆ..
Published On - 2:55 pm, Wed, 31 March 21