ವಾಷಿಂಗ್ಟನ್: ಅಮೆರಿಕದ ವಿವಿಧೆಡೆ ವರದಿಯಾಗಿರುವ ಎರಡು ಪ್ರತ್ಯೇಕ ಗುಂಡು ಹಾರಾಟ ಪ್ರಕರಣದಲ್ಲಿ ಕನಿಷ್ಠ ಪಕ್ಷ ಮೂವರು ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ನಗರದ ದಿನಸಿ ಅಂಗಡಿಯಲ್ಲಿ ಗುಂಡಿನ ದಾಳಿ ನಡೆದ ಒಂದು ದಿನದ ನಂತರ ಈ ಘಟನೆಗಳು ವರದಿಯಾಗಿವೆ. ಲಾಸ್ ಏಂಜಲೀಸ್ ನಗರದ ಚರ್ಚ್ ಒಂದರಲ್ಲಿ ಮುಂಜಾನೆಯ ಪ್ರಾರ್ಥನಾ ಸೇವೆಗಳು ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿ ಗುಂಡು ಹಾರಿಸಿದ. ಈ ವೇಳೆ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು.
ಸುಮಾರು 60 ವರ್ಷ ವಯಸ್ಸಿನ ಏಷ್ಯನ್ ಮೂಲದ ಪುರುಷನನ್ನು ಈ ಪ್ರಕರಣದ ಮುಖ್ಯ ಆರೋಪಿ ಎಂಬ ಶಂಕೆಯ ಮೇರೆಗೆ ಸ್ಥಳೀಯರು ಹಿಡಿದು, ಕಟ್ಟಿಹಾಕಿದ್ದಾರೆ. ಈತನಿಂದ ಎರಡು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರೂ ಸಹ ಬಹುತೇಕ ಏಷ್ಯನ್ನರು ಮತ್ತು ತೈವಾನ್ ಮೂಲದವರು ಎಂದು ಹೇಳಲಾಗಿದೆ.
ಈ ನಡುವೆ ಟೆಕ್ಸಾಸ್ನ ಹ್ಯಾರಿಸ್ ಕೌಂಟಿಯಲ್ಲಿಯೂ ದಿನಬಳಕೆ ವಸ್ತುಗಳ ಮಾರುಕಟ್ಟೆಯಲ್ಲಿ ಗುಂಡು ಹಾರಾಟ ನಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರು. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಎರಡು ಗುಂಪುಗಳ ನಡುವೆ ನಡೆದ ವಾದ ವಿವಾದಗಳು ವಿಕೋಪಕ್ಕೆ ಹೋಗಿ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಹಲವು ಸುತ್ತುಗಳ ಗುಂಡಿನ ಹಾರಾಟ ನಡೆದಿದೆ. ಎರಡು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ನಡೆದಿದ್ದ ಗುಂಡಿನ ದಾಳಿಯಲ್ಲಿ 18 ವರ್ಷದ ಹುಡುಗನೊಬ್ಬ ನ್ಯೂಯಾರ್ಕ್ನ ದಿನಸಿ ಅಂಗಡಿಯಲ್ಲಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದರು. ಈ ದಾಳಿಯನ್ನು ಅವನು ಲೈವ್ಸ್ಟ್ರೀಮ್ ಮಾಡಿದ್ದ. ನಂತರ ಪೊಲೀಸರು ಅವನನ್ನು ಬಂಧಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 am, Mon, 16 May 22