ಮಾಸ್ಕೊ: ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳ ನ್ಯಾಟೊ ಸೇರ್ಪಡೆ ಪ್ರಸ್ತಾವವನ್ನು ರಷ್ಯಾ ಸೋಮವಾರ ತೀವ್ರವಾಗಿ ಖಂಡಿಸಿದೆ. ದೀರ್ಘಾವಧಿಯಲ್ಲಿ ತೀವ್ರ ಸಂಕಷ್ಟಗಳನ್ನು ತಂದೊಡ್ಡುವ ಈ ತಪ್ಪಿನಿಂದ ಜಗತ್ತಿನಲ್ಲಿ ಶಾಂತಿ ಕದಡಬಹುದು ಎಂದು ಎಚ್ಚರಿಸಿದೆ. ವಿಶ್ವದ ವಿವಿಧ ದೇಶಗಳಲ್ಲಿ ಮಿಲಿಟರಿ ಸಂಘರ್ಷ ಹೆಚ್ಚಾಗಬಹುದು. ಈ ನಡೆಯಿಂದ ಏನಾಗಬಹುದು ಎಂದು ಅಂದಾಜಿಸಲು ಸಾಧ್ಯವಾಗದವರ ಬಗ್ಗೆ ಕನಿಕರ ವ್ಯಕ್ತಪಡಿಸಬೇಕಾಗಿದೆ ಎಂದು ರಷ್ಯಾ ಆಡಳಿತ ವ್ಯಂಗ್ಯವಾಡಿದೆ. ನ್ಯಾಟೊಗೆ ಸೇರುವುದರಿಂದ ಈ ಎರಡೂ ದೇಶಗಳ ಭದ್ರತೆ ಸುಧಾರಿಸುವುದಿಲ್ಲ. ಬದಲಾಗಿ ರಷ್ಯಾಕ್ಕೆ ಪ್ರತೀಕಾರದ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಾಗಲಿದೆ. ನಾವು ಸುಮ್ಮನಿರುತ್ತೇವೆ ಎಂಬ ಯಾವುದೇ ಭ್ರಮೆಯನ್ನು ಅವರು ಇರಿಸಿಕೊಳ್ಳಬಾರದು ಎಂದು ಎಚ್ಚರಿಸಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ಭೀತಿಗೊಳಗಾಗಿರುವ ಸ್ವೀಡನ್ ಮತ್ತು ಫಿನ್ಲೆಂಡ್ ತಮ್ಮ ನಿಲುವು ಬದಲಿಸಿವೆ. ನ್ಯಾಟೊ ಅಥವಾ ರಷ್ಯಾ ಪರವಾಗಿ ನಿಲ್ಲುವುದಿಲ್ಲ ಎನ್ನುವ ತಮ್ಮ ಆಲಿಪ್ತ ನಿಲುವಿನಿಂದ ದೂರ ಸರಿದು ಇದೀಗ ರಷ್ಯಾ ವಿರುದ್ಧ ನ್ಯಾಟೊ ಸದಸ್ಯತ್ವ ಪಡೆಯಲು ಮುಂದಾಗಿವೆ.
ಫಿನ್ಲೆಂಡ್ ಜೊತೆಗೆ ರಷ್ಯಾ 1,300 ಕಿಮೀಯಷ್ಟು ಉದ್ದದ ಗಡಿಯನ್ನು ಹೊಂದಿದೆ. ಫಿನ್ಲೆಂಡ್ ರಷ್ಯಾಕ್ಕೆ ಸೇರ್ಪಡೆಯಾದರೆ ಅದು ರಷ್ಯಾದ ರಕ್ಷಣೆಗೆ ಧಕ್ಕೆ ಎಂದು ಹೇಳಿದೆ. ಫಿನ್ಲೆಂಡ್ ಅಧ್ಯಕ್ಷ ಸೌಲಿ ನಿನಿಸ್ಟೊ ಈ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿ ನ್ಯಾಟೊ ಸದಸ್ಯಕ್ಕೆ ಮನವಿ ಮಾಡುವ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈವರೆಗಿನ ಆಲಿಪ್ತ ನೀತಿಯಿಂದ ಹೊರಗೆ ಬರುವ ಫಿನ್ಲೆಂಡ್ ನಿರ್ಧಾರವನ್ನು ‘ದೊಡ್ಡ ತಪ್ಪು’ ಎಂದು ಪುಟಿನ್ ವ್ಯಾಖ್ಯಾನಿಸಿದ್ದಾರೆ.
ನ್ಯಾಟೊಗೆ ಸೇರುವ ತನ್ನ ಇಂಗಿತವನ್ನು ಫಿನ್ಲೆಂಡ್ ಭಾನುವಾರ ಸ್ಪಷ್ಟವಾಗಿ ಹೇಳಿತು. ಸ್ವೀಡನ್ ನ್ಯಾಟೊ ಸೇರ್ಪಡೆಯನ್ನು ಅಲ್ಲಿನ ಆಡಳಿತ ಪಕ್ಷವು ಈಗಾಗಲೇ ಒಪ್ಪಿಕೊಂಡಿದೆ. ಎರಡೂ ದೇಶಗಳು ಜಂಟಿಯಾಗಿ ನ್ಯಾಟೊ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುತ್ತಿವೆ. ನ್ಯಾಟೊ ಸದಸ್ಯ ದೇಶಗಳ ಸಂಸತ್ತುಗಳು ಈ ಅರ್ಜಿಗೆ ಅನುಮೋದನೆ ನೀಡಿದರೆ ಈ ಎರಡೂ ದೇಶಗಳಿಗೆ ಸದಸ್ಯತ್ವ ಸಿಗುತ್ತದೆ. ನ್ಯಾಟೊದ ಯಾವುದೇ ಸದಸ್ಯ ದೇಶದ ಮೇಲೆ ಮತ್ತೊಂದು ದೇಶ ದಾಳಿ ನಡೆಸಿದರೆ, ಉಳಿದೆಲ್ಲ ದೇಶಗಳು ದಾಳಿ ಮಾಡಿದ ದೇಶವನ್ನು ಶತ್ರುವನ್ನು ಪರಿಗಣಿಸುವ ಅಂಶ ಈ ಒಪ್ಪಂದದಲ್ಲಿದೆ. ನ್ಯಾಟೊ ಸದಸ್ಯತ್ವ ದೇಶಗಳ ಮೇಲೆ ರಷ್ಯಾ ದಾಳಿ ನಡೆಸಲು ಹಿಂಜರಿಯುತ್ತದೆ.
ತಾಜಾ ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ