ಭಾರತ ಸೇರಿದಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಈಗ ಕೊರೊನಾ ಲಸಿಕೆಯೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ. ತಯರಾದಾ ಲಸಿಕೆ ಎಲ್ಲವೂ ಶ್ರೀಮಂತ ರಾಷ್ಟ್ರಗಳ ಪಾಲಾಗುತ್ತಿರುವುದು ಏಕೆ? ಕೊರೊನಾ ಸಾಂಕ್ರಮಿಕದ ಈ ಸಂದರ್ಭವನ್ನು ಲಸಿಕಾ ಕಂಪನಿಗಳು ಹಣ ಮಾಡಲು ಬಳಸಿಕೊಳ್ಳುತ್ತಿರುವುದು ಹೇಗೆ ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಜಗತ್ತಿನಲ್ಲಿ ಈಗ ಮಾನವ ಕುಲವನ್ನು ಉಳಿಸಲು ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದೊಂದೇ ಮಾರ್ಗ. ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನ ಈಗಲೇ ಕೊಡಿ, ಇಂದೇ ಲಸಿಕೆ ಕೊಡಿ ಎಂದು ಜಗತ್ತಿನ ರಾಷ್ಟ್ರಗಳು, ಜನರು ಕೂಡ ಒತ್ತಾಯಿಸುತ್ತಿದ್ದಾರೆ. ಆದರೇ, ಜಗತ್ತಿನಲ್ಲಿ ಬೇಡಿಕೆಗೆ ತಕ್ಕಷ್ಟು ಲಸಿಕೆ ಉತ್ಪಾದನೆಯಾಗುತ್ತಿಲ್ಲ. ಉತ್ಪಾದನೆಯಾದರೂ, ಲಸಿಕೆಯು ಶ್ರೀಮಂತ ರಾಷ್ಟ್ರಗಳ ಬಳಿಯೇ ಅಗತ್ಯಕ್ಕಿಂತ ಹೆಚ್ಚಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆಯೇ ಸಿಗುತ್ತಿಲ್ಲ. ಭಾರತವು ಕೂಡ ಇದುವರೆಗೂ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಗಳನ್ನು ಮಾತ್ರ ನಂಬಿಕೊಂಡಿರುವುದರಿಂದ ಹೆಚ್ಚಿನ ಕೊರೊನಾ ವೈರಸ್ ವಿರುದ್ಧದ ಲಸಿಕೆ ಸಿಗುತ್ತಿಲ್ಲ.
ಹೀಗಾಗಿ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಲಸಿಕೆಯ ಭಾರಿ ಕೊರತೆ ಎದುರಾಗಿದೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳಿಗೆ ತಿಂಗಳಿಗೆ 8 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇದೆ. ಇದನ್ನು ಹೆಚ್ಚಿಸುವ ಕೆಲಸವನ್ನು ಎರಡೂ ಕಂಪನಿಗಳು ಮಾಡುತ್ತಿವೆ. ಹೀಗಾಗಿ ದೇಶದಲ್ಲಿ ಲಸಿಕೆಯ ಕೊರತೆ ನೀಗಲು ಇನ್ನೂ ಒಂದೆರೆಡು ತಿಂಗಳು ಬೇಕಾಗಬಹುದು. ಆದರೆ, ಭಾರತದಂಥ ಅಭಿವೃದ್ದಿಶೀಲ ರಾಷ್ಟ್ರ ಹೆಚ್ಚಿನ ಕೊರೊನಾ ಲಸಿಕೆಯನ್ನು ಉತ್ಪಾದಿಸಲು ಕೊರೊನಾ ಲಸಿಕೆಗೆ ಇರುವ ಪೇಟೆಂಟ್ ಕೂಡ ಅಡ್ಡಿಯಾಗಿದೆ.
ಲಸಿಕೆಯ ಪೇಟೆಂಟ್ ವಿನಾಯಿತಿಗೆ ಕೆಲ ರಾಷ್ಟ್ರಗಳ ವಿರೋಧ:
ಭಾರತ ಮಾತ್ರವಲ್ಲದೇ, ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳು ಲಸಿಕೆಯನ್ನು ಉತ್ಪಾದಿಸಲು ಲಸಿಕೆಗಳಿಗೆ ನೀಡಿರುವ ಪೇಟೆಂಟ್ ಅಡ್ಡಿಯಾಗಿದೆ. ಆದರೆ, ಜಗತ್ತಿನಲ್ಲಿ ಮಾನವ ಕುಲವನ್ನು ಉಳಿಸಲು ಲಸಿಕೆಯ ಮೇಲಿನ ಪೇಟೇಂಟ್ ಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡಬೇಕು. ಬಡ, ಮಧ್ಯಮ ಆದಾಯದ ರಾಷ್ಟ್ರಗಳು ಕೂಡ ಈಗಾಗಲೇ ಲಸಿಕೆ ಉತ್ಪಾದಿಸುತ್ತಿರುವ ಕಂಪನಿಗಳಿಂದ ರಾಜಧನ ನೀಡಿ, ಲಸಿಕೆಯ ತಂತ್ರಜ್ಞಾನ ವರ್ಗಾವಣೆ ಪಡೆದು ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ಅವಕಾಶ ನೀಡಬೇಕೆಂದು ಭಾರತ, ದಕ್ಷಿಣ ಆಫ್ರಿಕಾ ಒತ್ತಾಯಿಸುತ್ತಿವೆ.
ಕೊರೊನಾ ಲಸಿಕೆಯ ಪೇಟೆಂಟ್ (ಟ್ರಿಪ್ಸ್ )ಗೆ ತಾತ್ಕಾಲಿಕ ವಿನಾಯಿತಿ ನೀಡುವ ಭಾರತದ ಬೇಡಿಕೆಗೆ ಈಗಾಗಲೇ ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಕೊರೊನಾ ಲಸಿಕೆ ಉತ್ಪಾದಿಸುವ ಆಮೆರಿಕಾದ ಕಂಪನಿಗಳು ಲಸಿಕೆಯ ಪೇಟೇಂಟ್ ಗೆ ತಾತ್ಕಾಲಿಕ ವಿನಾಯಿತಿ ನೀಡುವುದಕ್ಕೆ ವಿರೋಧಿಸುತ್ತಿವೆ. ಜೊತೆಗೆ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ವಿರೋಧಿಸುತ್ತಿವೆ. ಜರ್ಮನ್ ರಾಷ್ಟ್ರದ ವಿರೋಧ ಕೂಡ ಇದೆ.
ಲಸಿಕೆಯ ಪೇಟೇಂಟ್ ನಿಂದ ವಿನಾಯಿತಿ ನೀಡಿದರೆ, ಲಸಿಕಾ ಕಂಪನಿಗಳಿಗೆ ಆದಾಯದ ನಷ್ಟವಾಗುವ ಭೀತಿ ಇದೆ. ಜಗತ್ತಿನಲ್ಲಿ ಈಗ 13 ಕಂಪನಿಗಳು ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನ ಉತ್ಪಾದಿಸುತ್ತಿವೆ. ಮುಂದಿನ ತಿಂಗಳು ನಡೆಯುವ ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಕೊರೊನಾ ಲಸಿಕೆಗೆ ಟ್ರಿಪ್ಸ್ ನಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡುವ ವಿಷಯದ ಬಗ್ಗೆ 164 ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆ, ಸಂಧಾನ ನಡೆಯಲಿದೆ.
ಚಿಕ್ಕ ಸಂದೇಶದ ವಿನಿಮಯದ ಮೂಲಕವೇ ಈ ಸಂಧಾನ ಸದಸ್ಯ ರಾಷ್ಟ್ರಗಳ ನಡುವೆ ನಡೆಯಲಿದೆ. 164 ಸದಸ್ಯ ರಾಷ್ಟ್ರಗಳಲ್ಲಿ ಒಂದೇ ಒಂದು ರಾಷ್ಟ್ರ ವಿರೋಧಿಸಿದರೂ, ಕೊರೊನಾ ಲಸಿಕೆಯ ಪೇಟೇಂಟ್ ಗೆ ವಿನಾಯಿತಿ ಸಿಗಲ್ಲ. ವಿಟೋ ಅಧಿಕಾರ ಚಲಾಯಿಸುವ ಅಧಿಕಾರ ಪ್ರತಿಯೊಂದು ರಾಷ್ಟ್ರಗಳಿಗೂ ಇದೆ. ಹೀಗಾಗಿ ಲಸಿಕೆಯ ಪೇಟೇಂಟ್ ವಿನಾಯಿತಿಗೆ ಯೂರೋಪಿಯನ್ ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಕಳೆದ ಶನಿವಾರ ಯೂರೋಪಿಯನ್ ರಾಷ್ಟ್ರಗಳ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಬಡ ರಾಷ್ಟ್ರಗಳಿಗೆ ಕೊರೊನಾ ಲಸಿಕೆಯೇ ಸಿಗುತ್ತಿಲ್ಲ ಏಕೆ?
ಆದರೇ, ಸದ್ಯ ಜಗತ್ತಿನಲ್ಲಿ 13 ಕಂಪನಿಗಳು ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಸಂಶೋಧನೆ ನಡೆಸಿ ಉತ್ಪಾದಿಸುತ್ತಿವೆ. ಆಮೆರಿಕಾದ ಫೈಜರ್-ಜರ್ಮನಿಯ ಬಯೋಎನ್‌ಟೆಕ್ ಕಂಪನಿ, ಆಮೆರಿಕಾದ ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ರಷ್ಯಾದ ಸ್ಪುಟ್ನಿಕ್, ಇಂಗ್ಲೆಂಡ್ ನ ಆಕ್ಸಫರ್ಡ್ ವಿವಿ-ಅಸ್ಟ್ರಾಜನಿಕ್ ಕಂಪನಿ, ನೋವಾವ್ಯಾಕ್ಸ್, ಚೀನಾದ ಸಿನೋಫಾರ್ಮಾ, ಭಾರತದ ಭಾರತ್ ಬಯೋಟೆಕ್ ಸೇರಿದಂತೆ 13 ಕಂಪನಿಗಳು ಕೊರೊನಾ ಲಸಿಕೆಯ ಉತ್ಪಾದನೆಯಲ್ಲಿ ತೊಡಗಿವೆ. ಆದರೆ, ಈ ಕಂಪನಿಗಳು ಉತ್ಪಾದಿಸುತ್ತಿರುವ ಕೊರೊನಾ ಲಸಿಕೆಯು ಹೆಚ್ಚಾಗಿ ಶ್ರೀಮಂತ ರಾಷ್ಟ್ರಗಳ ಪಾಲಾಗುತ್ತಿದೆ.
ಶ್ರೀಮಂತ ರಾಷ್ಟ್ರಗಳು ಇದುವರೆಗೂ ಉತ್ಪಾದನೆಯಾದ ಲಸಿಕೆಯಲ್ಲಿ ಶೇ.87 ರಷ್ಟು ಲಸಿಕೆಯನ್ನು ಪಡೆದುಕೊಂಡಿವೆ . ಡೋಸ್ ಗಳ ಲೆಕ್ಕದಲ್ಲಿ ಹೇಳುವುದಾದರೇ, 70 ಕೋಟಿ ಡೋಸ್ ಲಸಿಕೆಯು ಶ್ರೀಮಂತ ರಾಷ್ಟ್ರಗಳ ಪಾಲಾಗಿದೆ. ಆದರೇ, ಜಗತ್ತಿನ ಬಡ ರಾಷ್ಟ್ರಗಳಿಗೆ ಶೇ.0.2 ರಷ್ಟು ಲಸಿಕೆ ಮಾತ್ರ ಸಿಕ್ಕಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ನಾಲ್ವರಲ್ಲಿ ಒಬ್ಬರಿಗೆ ಲಸಿಕೆ ಸಿಕ್ಕಿದೆ. ಆದರೇ, ಬಡ ರಾಷ್ಟ್ರಗಳಲ್ಲಿ 500 ಮಂದಿಯಲ್ಲಿ ಒಬ್ಬರಿಗೆ ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆ ಸಿಕ್ಕಿದೆ.
ಲಸಿಕೆಯನ್ನು ಉತ್ಪಾದಿಸುತ್ತಿರುವುದು ಶ್ರೀಮಂತ ರಾಷ್ಟ್ರಗಳು. ಆಮೆರಿಕಾ, ಇಂಗ್ಲೆಂಡ್, ಜರ್ಮನಿ, ಇಸ್ರೇಲ್, ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಕಳೆದ ವರ್ಷವೇ ಲಸಿಕೆಯ ಖರೀದಿಗೆ ಹಣ ನೀಡಿ ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದವು. ಲಸಿಕೆಯ ಸಂಶೋಧನೆ ನಡೆಯುತ್ತಿದ್ದಾಗಲೇ, ಲಸಿಕಾ ಕಂಪನಿಗಳ ಸಂಶೋಧನೆಗೆ ಕೋಟಿಗಟ್ಟಲೇ ಹಣ ನೀಡಿದ್ದವು. ಹೀಗಾಗಿ ಲಸಿಕೆಯ ಸಂಶೋಧನೆ ಯಶಸ್ವಿಯಾದ ಮೇಲೆ ಹಣ ಹೂಡಿದ್ದ ಮತ್ತು ಲಸಿಕೆಯ ಖರೀದಿ ಒಪ್ಪಂದ ಮಾಡಿಕೊಂಡಿದ್ದ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಒತ್ತಡಕ್ಕೆ ಲಸಿಕಾ ಕಂಪನಿಗಳು ಒಳಗಾಗಿದ್ದವು. ಹೀಗಾಗಿ ಆಮೆರಿಕಾ, ಇಂಗ್ಲೆಂಡ್, ಜರ್ಮನ್ ನಂಥ ರಾಷ್ಟ್ರಗಳು ವೇಗವಾಗಿ ತಮ್ಮ ನಾಗರಿಕರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲು ಯಶಸ್ವಿಯಾಗಿವೆ.
ಆದರೇ ಜಗತ್ತಿನ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಬಳಿ ಮುಂಚಿತವಾಗಿ ಲಸಿಕೆ ಮೇಲೆ ಹೂಡಿಕೆ ಮಾಡಲು ಹಣವೂ ಇಲ್ಲ. ಪರಿಣಾಮ ಈಗ ಕೊರೊನಾ ಲಸಿಕೆಯೇ ಸಿಗುತ್ತಿಲ್ಲ. ಇದಕ್ಕೆ ಫೈಜರ್ ಕಂಪನಿ ಲಸಿಕೆಯ ಹಂಚಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಫೈಜರ್ ಕಂಪನಿಯು ಇದುವರೆಗೂ 43 ಕೋಟಿ ಡೋಸ್ ಲಸಿಕೆಯನ್ನು 91 ದೇಶಗಳಿಗೆ ನೀಡಿದೆ. ಆದರೆ, ಬಡ ರಾಷ್ಟ್ರಗಳಿಗೆ ಫೈಜರ್ ಕಂಪನಿಯು ಹೆಚ್ಚಾಗಿ ಲಸಿಕೆಯನ್ನೇ ನೀಡಿಲ್ಲ. ಬಡರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಕೋವ್ಯಾಕ್ಸ್ ಗೆ ನಾಲ್ಕು ಕೋಟಿ ಡೋಸ್ ಲಸಿಕೆಯನ್ನು ಪೂರೈಸುವ ಬದ್ದತೆಯನ್ನು ಮಾತ್ರ ಫೈಜರ್ ಹೊಂದಿದೆ. ಇದು ಫೈಜರ್ ಕಂಪನಿಯು ಈ ವರ್ಷ ಉತ್ಪಾದಿಸುವ 250 ಕೋಟಿ ಡೋಸ್ ಲಸಿಕೆಯ ಶೇ. 2 ಕ್ಕಿಂತ ಕಡಿಮೆ. ಇದೇ ರೀತಿ ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಮತ್ತು ಅಸ್ಟ್ರಾಜನಿಕ್ ಕಂಪನಿಯ ಲಸಿಕೆಗಳು ಕೂಡ ಶ್ರೀಮಂತ ರಾಷ್ಟ್ರಗಳ ಪಾಲಾಗುತ್ತಿವೆ.
ಆಮೆರಿಕಾದ ಬಳಿ ಅತ್ಯಧಿಕ ಅಂದ್ರೆ ವಿಶ್ವದ ಕೊರೊನಾ ಲಸಿಕೆಯ ಶೇ. 23 ರಷ್ಟು ಲಸಿಕೆ ಇದೆ!
ಬ್ಲೂಮ್ ಬರ್ಗ್ ವ್ಯಾಕ್ಸಿನ್ ಟ್ರ್ಯಾಕರ್ ಪ್ರಕಾರ, ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗಿಂತ 25 ಪಟ್ಟು ಹೆಚ್ಚಿನ ವೇಗದಲ್ಲಿ ಕೊರೊನಾ ಲಸಿಕೆಯನ್ನು ತಮ್ಮ ನಾಗರಿಕರಿಗೆ ನೀಡುತ್ತಿವೆ. ಆಮೆರಿಕಾವು ವಿಶ್ವದ ಜನಸಂಖ್ಯೆಯಲ್ಲಿ ಶೇ. 4.3 ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿದೆ. ಆದರೆ, ಆಮೆರಿಕಾದ ಬಳಿ ವಿಶ್ವದ ಕೊರೊನಾ ಲಸಿಕೆಯ ಶೇ.22.9 ರಷ್ಟು ಕೊರೊನಾ ಲಸಿಕೆ ಇದೆ. ಇದೇ ರೀತಿ ಚೀನಾ ದೇಶವು ವಿಶ್ವದ ಜನಸಂಖ್ಯೆಯಲ್ಲಿ ಶೇ.18.2 ರಷ್ಟು ಜನಸಂಖ್ಯೆ ಹೊಂದಿದೆ. ಆದರೇ, ಚೀನಾದ ಬಳಿ ವಿಶ್ವದ ಕೊರೊನಾ ಲಸಿಕೆಯ ಶೇ. 21.9 ರಷ್ಟು ಲಸಿಕೆಯ ಸ್ಟಾಕ್ ಇದೆ. ಇನ್ನು, ಭಾರತವು ವಿಶ್ವದ ಜನಸಂಖ್ಯೆಯಲ್ಲಿ ಶೇ.17 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೇ, ಭಾರತದ ಬಳಿ ಇರೋದು ವಿಶ್ವದ ಲಸಿಕೆಯ ಶೇ. 13.8 ರಷ್ಟು ಮಾತ್ರ. ಬಹುತೇಕ ಲಸಿಕೆಯು ವಿಶ್ವದ ಶೇ. 16 ರಷ್ಟು ಜನಸಂಖ್ಯೆಯ ರಾಷ್ಟ್ರಗಳಿಗೆ ಲಭ್ಯವಾಗುತ್ತಿದೆ.
ವಾಷಿಂಗಟನ್ ಪೋಸ್ಟ್ ಪ್ರಕಾರ, ವಿಶ್ವದ 92 ಬಡ ರಾಷ್ಟ್ರಗಳು ತಮ್ಮ ಜನಸಂಖ್ಯೆಯ ಶೇ.60 ರಷ್ಟು ಜನರಿಗೆ ಮುಂದಿನ 3 ವರ್ಷ ಸಮಯ ತೆಗೆದುಕೊಂಡರೂ, ಲಸಿಕೆ ನೀಡಲು ಸಾಧ್ಯವಾಗಲ್ಲ. ಭಾರತದಲ್ಲಿ ಮೇ 10ರ ಸೋಮವಾರ ಬೆಳಿಗ್ಗೆ ಕೇಂದ್ರದ ಆರೋಗ್ಯ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ 17 ಕೋಟಿ ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಆದರೆ, ಮೊದಲ ಮತ್ತು ಎರಡನೇ ಡೋಸ್ ಎರಡನ್ನೂ ಪಡೆದಿರುವವರ ಸಂಖ್ಯೆ ಮೂರು ಕೋಟಿಯನ್ನು ದಾಟಿದೆ. ಅಂದರೆ ಭಾರತದಲ್ಲಿ ಇದುವರೆಗೂ ಶೇ. 3 ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
ಲಸಿಕೆ ಸಿಗದೆ ಪರದಾಡುತ್ತಿರುವ ಭಾರತೀಯರು
ದೇಶದಲ್ಲಿ ಈಗ ಎರಡನೇ ಡೋಸ್ ಲಸಿಕೆಯನ್ನು ಪಡೆಯಲು ಜನರು ಪರದಾಡುತ್ತಿದ್ದಾರೆ. 18ರಿಂದ 44 ವರ್ಷ ವಯೋಮಾನದವರು 60 ಕೋಟಿ ಜನರಿದ್ದಾರೆ. ಈ ವರ್ಗಕ್ಕೆ ಎರಡು ಡೋಸ್ ಲಸಿಕೆ ನೀಡಲು 120 ಕೋಟಿ ಡೋಸ್ ಲಸಿಕೆ ಬೇಕು. ಹೀಗಾಗಿ ಕೇಂದ್ರ ಸರ್ಕಾರವು ಲಭ್ಯವಿರುವ ಲಸಿಕೆಯ ಪೈಕಿ ಶೇ. 30 ರಷ್ಟನ್ನು ಮಾತ್ರ ಮೊದಲ ಡೋಸ್ ಲಸಿಕೆಗೆ ಬಳಸಿಕೊಳ್ಳಿ. ಶೇ.70 ರಷ್ಟು ಲಸಿಕೆಯನ್ನು ಎರಡನೇ ಡೋಸ್ ಲಸಿಕೆ ನೀಡಲು ಬಳಸಿ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಈ ನಿರ್ದೇಶನವನ್ನು ಈಗ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳು ಪಾಲಿಸುತ್ತಿವೆ. ಮೊದಲ ಡೋಸ್ ಲಸಿಕೆ ಪಡೆದವರಿಗೆ ಕೊರೊನಾದಿಂದ ಪೂರ್ಣ ರಕ್ಷಣೆ ಸಿಗಲಿ ಎಂಬ ಉದ್ದೇಶದಿಂದ 2ನೇ ಡೋಸ್ ಅನ್ನು ವಿಳಂಬ ಮಾಡದೇ ನೀಡಲು ಈಗ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಈಗ 18-44 ವರ್ಷ ವಯೋಮಾನದವರಿಗೆ ಮೊದಲ ಡೋಸ್ ಸುಲಭವಾಗಿ ಸಿಗುತ್ತಿಲ್ಲ. ಕೋವಿನ್ ಪೋರ್ಟಲ್ ನಲ್ಲಿ ಲಸಿಕೆಯನ್ನು ಪಡೆಯಲು ಅಪಾಯಿಂಟ್ ಮೆಂಟ್ ಸಿಗುತ್ತಿಲ್ಲ.
ಲಸಿಕಾ ಕಂಪನಿಗಳಿಗೆ ಭಾರಿ ಲಾಭ
ಕೊರೊನಾ ಸಾಂಕ್ರಮಿಕದ ಕಾಲದಲ್ಲಿ ಮಾನವೀಯತೆ, ಮಾನವ ಕುಲವನ್ನು ಮೊದಲು ಸಾವಿನಿಂದ ಪಾರು ಮಾಡಲು ಜಗತ್ತಿನ ಶ್ರೀಮಂತ ರಾಷ್ಟ್ರಗಳು ಹಾಗೂ ಲಸಿಕಾ ಕಂಪನಿಗಳು ಆದ್ಯತೆ ನೀಡಬೇಕಾಗಿತ್ತು. ಆದರೆ, ಕೊರೊನಾದ ಸಾಂಕ್ರಮಿಕದ ಸಂದರ್ಭದಲ್ಲೂ ಹಣವೇ ಕೆಲ ರಾಷ್ಟ್ರ ಹಾಗೂ ಲಸಿಕಾ ಕಂಪನಿಗಳಿಗೆ ಮುಖ್ಯವಾಗಿದೆ. ಕೊರೊನಾ ಲಸಿಕೆ ತಯಾರಿಸುತ್ತಿರುವ ಕಂಪನಿಗಳು ಭಾರಿ ಲಾಭ ಗಳಿಸುತ್ತಿವೆ. ಫೈಜರ್ ಕಂಪನಿಯು ಈ ವರ್ಷದ ಮೊದಲ ಮೂರು ತಿಂಗಳಲ್ಲಿ 3.5 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಒಂದು ಬಿಲಿಯನ್ ಡಾಲರ್ ಅನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 7,500 ಕೋಟಿ ರೂಪಾಯಿ ಆಗುತ್ತೆ. 3.5 ಬಿಲಿಯನ್ ಡಾಲರ್ ಅಂದ್ರೆ, ಭಾರತದ ರೂಪಾಯಿ ಲೆಕ್ಕದಲ್ಲಿ 26,250 ಕೋಟಿ ರೂಪಾಯಿ ಲಾಭ ಗಳಿಸಿದೆ.
ಫೈಜರ್ ಕಂಪನಿಗೆ ಈ ವರ್ಷದಲ್ಲಿ 26 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಇದೆ. ಇನ್ನು ಆಮೆರಿಕಾದ ಮಾಡೆರ್ನಾ ಕಂಪನಿಗೆ ಮೊದಲ ತ್ರೈಮಾಸಿಕದಲ್ಲಿ 1.73 ಬಿಲಿಯನ್ ಡಾಲರ್ ಆದಾಯ ಬಂದಿದೆ. ಮಾಡೆರ್ನಾ ಕಂಪನಿಗೆ ಈ ವರ್ಷ 19.2 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಇದೆ. ಇನ್ನು ಅಸ್ಟ್ರಾಜನಿಕ್ ಕಂಪನಿಗೆ ಈ ವರ್ಷ 20 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಇದೆ. 20 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 1.5 ಲಕ್ಷ ಕೋಟಿ ರೂಪಾಯಿ ಆಗುತ್ತೆ.
ಒಟ್ಟಿನಲ್ಲಿ ಕೊರೊನಾದಿಂದ ವಿಶ್ವವನ್ನು ರಕ್ಷಿಸಲು ಕಂಪನಿಗಳು ಲಸಿಕೆಯ ಸಂಶೋಧನೆ ನಡೆಸಿ, ಅದರಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಆರ್ಥಿಕ ಲಾಭವನ್ನು ಕಂಪನಿಗಳು ಪಡೆದುಕೊಳ್ಳಲಿ. ಇದಕ್ಕೆ ಯಾರದ್ದೇ ಅಭ್ಯಂತರವಿಲ್ಲ. ಆದರೇ, ಮಾನವೀಯತೆ, ಮಾನವ ಕುಲದ ಉಳಿವಿಗಾಗಿ ಭಾರತದಂಥ ಅಭಿವೃದ್ದಿಶೀಲ ರಾಷ್ಟ್ರಗಳು ಹಾಗೂ ಬಡ ರಾಷ್ಟ್ರಗಳಿಗೂ ಕಡಿಮೆ ದರದಲ್ಲಿ ಲಸಿಕೆ ನೀಡಿದರೇ ಒಳ್ಳೆಯದು.
ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9
(Waive of patent on coronavirus vaccination only can save the world from covid 19 onslaught)