ಕಳೆದ ಕೆಲ ದಿನಗಳಿಂದ ಜಾಗತಿಕ ಮಟ್ಟದಲ್ಲಿ ಕಾಡಾನೆಗಳಿಗೆ ಸಂಬಂಧಿಸಿದ ಸುದ್ದಿಯೊಂದು ಭಾರೀ ಮಹತ್ವ ಗಿಟ್ಟಿಸಿಕೊಂಡಿದೆ. ಕೇವಲ ಒಂದೇ ಒಂದು ಫೋಟೋ ಆನೆಗಳನ್ನು ಸುಪ್ರಸಿದ್ಧಗೊಳಿಸಿದೆ. ಆದರೆ, ಫೋಟೋದ ಹಿಂದಿನ ಸತ್ಯ ತಿಳಿಯದೇ ಕೇವಲ ಚಿತ್ರವನ್ನು ಮಾತ್ರ ಗಮನಿಸಿದವರು ಅಯ್ಯೋ ಪಾಪ ಎಂದು ಮರುಗಿದ ಪ್ರಸಂಗವೂ ನಡೆದಿದೆ. ಅಂದಹಾಗೆ, ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದು ಇಲ್ಲಿ ನಾವು ಹಾಕಿರುವ ಆನೆಗಳ ಸಮೂಹ ಚಿತ್ರಕ್ಕೆ! ಹೌದು, ಈ ಫೋಟೋವನ್ನು ಮೊದಲ ಬಾರಿಗೆ ನೋಡಿದ ಯಾರೇ ಆದರೂ ಕೆಲ ದಿನಗಳ ಹಿಂದೆ ಕಾಡೊಂದರಲ್ಲಿ ಸಿಡಿಲು ಬಡಿದು ಸಾಲು ಸಾಲು ಆನೆಗಳು ಸತ್ತ ದುರ್ಘಟನೆ ಮತ್ತೆ ಮರುಕಳಿಸಿತೇನೋ ಎಂದು ದಿಗಿಲುಕೊಳ್ಳುವ ಸಾಧ್ಯತೆ ಇದೆ. ಕಾಡೊಂದರ ಮಧ್ಯೆ ಇರುವ ಪುಟಾಣಿ ಬಯಲಲ್ಲಿ ಆನೆಯ ಗುಂಪೊಂದು ಸಾಲಾಗಿ ಮಲಗಿರುವುದನ್ನು ನೋಡಿದರೆ ಯಾರೋ ಇವುಗಳನ್ನೆಲ್ಲಾ ಕೊಂದು ಹಾಕಿರಬೇಕು ಎಂದೆನಿಸದೇ ಇರದು. ಆದರೆ, ಈ ಫೋಟೋ ವಿಶ್ವವ್ಯಾಪಿ ಸಂಚಲನ ಮೂಡಿಸುವುದಕ್ಕೂ ಇದೇ ಕಾರಣವಾಗಿದೆ.
ಆನೆಗಳ ಗುಂಪು ಹೀಗೆ ಅಡ್ಡಡ್ಡ ಮಲಗಿ ಮೈಮರೆತು ನಿದ್ರಿಸಿರುವ ಘಟನೆ ಚೀನಾದಲ್ಲಿ ನಡೆದಿದೆ. ಬೃಹತ್ ವಲಸೆಯಲ್ಲಿದ್ದ ಆನೆಗಳು ಆಯಾಸಗೊಂಡು ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಮಲಗಿರುವುದು ಇಡೀ ಜಗತ್ತಿನ ಕಣ್ಣರಳಿಸುವಂತೆ ಮಾಡಿದೆ. ಜಾಗತಿಕ ಮಾಧ್ಯಮಗಳ ವಿಮರ್ಶೆ ಪ್ರಕಾರ ಈ ಗಜಪಡೆ ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ಅಂದರೆ ಸುಮಾರು 15 ತಿಂಗಳಿಂದ ಒಂದೆಡೆ ನೆಲೆ ನಿಲ್ಲದೆ ನಿರಂತರ ಪ್ರಯಾಣದಲ್ಲಿ ತೊಡಗಿದ್ದು, 500 ಕಿಲೋ ಮೀಟರ್ ಕ್ರಮಿಸಿವೆ ಎನ್ನಲಾಗಿದೆ. ನೈರುತ್ಯ ಯುನಾನ್ ಪ್ರಾಂತ್ಯದಿಂದ ಕನ್ಮಿಂಗ್ ಭಾಗದ ಹೊರವಲಯದ ತನಕ ಈಗಾಗಲೇ ಪ್ರಯಾಣ ಬೆಳೆಸಿರುವ ಆನೆಗಳು ಹೀಗೆ ಸುದೀರ್ಘ ವಿಶ್ರಾಂತಿ ಪಡೆಯಲು ಮಲಗಿವೆ ಎನ್ನುವುದು ವನ್ಯಜೀವಿ ತಜ್ಞರ ಮಾತು.
ಒಟ್ಟು 15 ಏಶಿಯನ್ ಆನೆಗಳಿರುವ (ಏಶಿಯಾಟಿಕ್ ಎಲಿಫಂಟ್, ಬದುಕುಳಿದಿರುವ ಜೀನಸ್ ಎಲಿಫಸ್ ತಳಿ ಎಂದೆನ್ನಲಾಗಿದೆ) ಗುಂಪು ಸುಮಾರು 500 ಕಿಲೋ ಮೀಟರ್ ಕ್ರಮಿಸಿದ ನಂತರ ಕಾಡಿನ ಮಧ್ಯಭಾಗದಲ್ಲಿ ಮೈ ಹರವಿ ಮಲಗಿರುವ ಚಿತ್ರ ಹಾಗೂ ಕೆಲ ವಿಡಿಯೋಗಳನ್ನು ಚೀನಾ ಬಿಡುಗಡೆ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆಯಾಗುತ್ತಿದ್ದಂತೆಯೇ ಚೀನಾದ ಮಹಾಗೋಡೆಯನ್ನೂ ದಾಟಿ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ. ಈ ಆನೆಗಳ ಗುಂಪಿಗೆ ಅಲೆಮಾರಿ ಆನೆಗಳು ಎಂಬ ನಾಮಕಾರಣವನ್ನೇ ಮಾಡಲಾಗಿದ್ದು, ಹೀಗೆ ಗಜಪಡೆಯೊಂದು ಸತತ 15 ತಿಂಗಳ ಅವಧಿಯಲ್ಲಿ 500 ಕಿಲೋ ಮೀಟರ್ ಕ್ರಮಿಸಿದ್ದು ಮೊಟ್ಟಮೊದಲ ಬಾರಿಗೆ ವರದಿಯಾಗಿದೆ.
ಅತ್ಯಂತ ಕುತೂಹಲಕಾರಿ ಹಾಗೂ ಗಮನ ಸೆಳೆವ ಸಂಗತಿಯೆಂದರೆ ಈ ಅಲೆಮಾರಿ ಗಜಪಡೆಯ ಕಾವಲಿಗೆಂದೇ ಚೀನಾ ಸರ್ಕಾರ 500 ಸಿಬ್ಬಂದಿ ಹಾಗೂ 14 ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಿದ ವಿಚಾರ ಬೆಳಕಿಗೆ ಬಂದಿದೆ. ಇವುಗಳು ಜಿಯಾಂಗ್ ಪಟ್ಟಣದ ಬಳಿಯ ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಮಲಗಿ ವಿಶ್ರಾಂತಿ ಪಡೆದಿರುವುದು ಕೂಡಾ ಇದೇ ಡ್ರೋನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇವು ಕಾಡಿನಲ್ಲಿ ಹೀಗೆ ಮರಿಗಳನ್ನು ನಡುವಲ್ಲಿ ಮಲಗಿಸಿಕೊಂಡು ಕುಂಭಕರ್ಣ ನಿದ್ರೆ ಹೋಗಿರುವ ದೃಶ್ಯ ಎಷ್ಟು ಮನೋಹರವಾಗಿದೆಯೋ ಇವುಗಳ ಪ್ರವಾಸ ಕಥನವೂ ಅಷ್ಟೇ ಮಜವಾಗಿದೆ.
ಈ ಗುಂಪಿನ 15 ಆನೆಗಳ ಪೈಕಿ 3 ಮರಿ ಆನೆಗಳೂ ಇದ್ದಿದ್ದರಿಂದ ಇವು ಬಹು ಎಚ್ಚರಿಕೆಯಿಂದ ಪ್ರಯಾಣ ಬೆಳೆಸಿವೆ. ಗುಂಪಿನ ನಾಯಕ ಒಂದೇ ಮಿಕ್ಕೆಲ್ಲಾ ಆನೆಗಳಿಗಿಂತ 4 ಕಿಲೋ ಮೀಟರ್ ಮುಂದೆ ನಿಂತು ಯಾವ ದಾರಿಯಲ್ಲಿ ಸಾಗಬೇಕು, ಎಲ್ಲೆಲ್ಲಿ ತಿರುಗಬೇಕು ಎಂದು ಗೂಗಲ್ ಮ್ಯಾಪ್ ರೀತಿಯಲ್ಲಿ ಮಾರ್ಗದರ್ಶನ ನೀಡಿದೆ. ಇಷ್ಟಾದರೂ ಈ ಆನೆಗಳು ತಮ್ಮ ಸುದೀರ್ಘ ಪ್ರಯಾಣವನ್ನು ಕೇವಲ ಕಾಡಿನ ದಾರಿಯಲ್ಲಿ ಮಾತ್ರ ಮಾಡಿಲ್ಲ. ದಟ್ಟ ಅರಣ್ಯ ಪ್ರದೇಶದಿಂದ ಗುಡ್ಡಗಾಡುಗಳನ್ನು ದಾಟಿ ಹಳ್ಳಿ, ಪಟ್ಟಣಗಳನ್ನು ಕ್ರಮಿಸಿ ಆನೆ ನಡೆದದ್ದೇ ದಾರಿ ಎನ್ನುವುದನ್ನು ಸಾಬೀತುಪಡಿಸಿವೆ.
ಗುಂಪಿನಲ್ಲಿದ್ದ ಆನೆಗಳು ತಮ್ಮ ಮರಿಗಳ ರಕ್ಷಣೆಗೆ ಎಷ್ಟು ಮಹತ್ವ ನೀಡಿದ್ದವೋ ಚೀನಾ ಸರ್ಕಾರ ಕೂಡಾ ಇವುಗಳ ಇಡೀ ಗುಂಪಿಗೆ ಒಂದಿನಿತೂ ಹಾನಿಯಾಗಬಾರದು, ಅವುಗಳ ಪ್ರಯಾಣಕ್ಕೆ ಅಡ್ಡಿಯಾಗಬಾರದು ಎಂದು ಮುಂಜಾಗ್ರತೆ ವಹಿಸಿ ಎಲ್ಲರ ಗಮನ ಸೆಳೆದಿದೆ. ಇವುಗಳಿಗೆ ರಸ್ತೆ ದಾಟುವಾಗ ರಕ್ಷಣೆ ನೀಡಿದ್ದರಿಂದ ಹಿಡಿದು ಯಾವ ಗದ್ದೆಗೆ ನುಗ್ಗಿ ಧವಸ, ಧಾನ್ಯಗಳನ್ನು ತಿಂದರೂ ತುಟಿಕ್ ಪಿಟಿಕ್ ಎನ್ನದೇ ಅವಕಾಶ ಕಲ್ಪಿಸಿಕೊಡಲಾಗಿದೆ. ಬಹುಶಃ ಆನೆಗಳಿಗೂ ಸರ್ಕಾರ ತಮ್ಮ ಪರವಾಗಿದೆ ಎನ್ನುವುದು ಗೊತ್ತಾಯಿತೋ ಏನೋ ಸಿಕ್ಕಿದ್ದೇ ಅವಕಾಶ ಎಂದು ಮಿಲಿಯನ್ ಡಾಲರ್ ಮೌಲ್ಯದ ಆಹಾರ ಧಾನ್ಯಗಳನ್ನು ತಿಂದು ತೇಗಿ, ಕಬ್ಬು ಜಗಿದು, ಆಲ್ಕೊಹಾಲ್ ಕುಡಿದು ಮತ್ತೇರಿಸಿಕೊಂಡು ಗಮ್ಮತ್ತಾಗಿ ಅಡ್ಡಾಡಿವೆ.
ಚೀನಾದ ಜನರೂ ಈ ಆನೆಗಳ ಉಪಟಳವನ್ನು ಸಾವಧಾನದಿಂದಲೇ ಸಹಿಸಿಕೊಂಡಿದ್ದಾರೆ. ಕೆಲ ಕಡೆ ಕಟ್ಟಡಗಳನ್ನು ಗುಮ್ಮಿ ದಾಂಧಲೆ ಮಾಡಿರುವ ಗಜಪಡೆ, ವೃದ್ಧಾಶೃಮವೊಂದರ ಕಿಟಕಿಯೊಳಗೆ ಸೊಂಡಿಲನ್ನು ತೋರಿಸಿ ಒಳಗಿದ್ದ ವೃದ್ಧ ವ್ಯಕ್ತಿ ಹೆದರಿ ಮಂಚದಡಿ ಅವಿತಿಟ್ಟುಕೊಳ್ಳುವಂತೆ ಕಿತಾಪತಿ ಮಾಡಿವೆ. ಅತ್ಯಂತ ಹೆಚ್ಚು ಜನವಸತಿ ಇರುವ ತುನ್ಮಿಂಗ್ ನಗರಕ್ಕೂ ಭೇಟಿ ನೀಡಿದ ಈ ಆನೆಗಳು ಯಾವುದೋ ಒಂದು ಜಾಗದಲ್ಲಿ ಹೀಗೇ ದಡಬಡನೆ ಹೋಗುವಾಗ ಮರಿ ಆನೆಯೊಂದು ಗಟಾರಕ್ಕೆ ಬಿದ್ದಿದೆ. ಆಮೇಲೆ, ತಾಯಿ ಆನೆ ಸೊಂಡಿಲಿನ ಬಲವನ್ನೆಲ್ಲಾ ಉಪಯೋಗಿಸಿ ಮರಿಯನ್ನು ಎತ್ತಿ ಮುಂದೆ ಸಾಗಿದೆ. ಈ ಅಪರೂಪದ ದೃಶ್ಯಾವಳಿಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನೆಗಳ ಸಂಚಾರವನ್ನು ಜನ ಕಣ್ತುಂಬಿಕೊಂಡು ಆನಂದಿಸಿದ್ದಾರೆ.
ಸಾಲದ್ದಕ್ಕೆ ಈ ಗಜಪಡೆಗಳಿಗೆ ಭಾರೀ ಸ್ವಾಗತ ಕೋರಲೆಂಬಂತೆ ಜನರು ದಾರಿಯುದ್ದಕ್ಕೂ ಮೆಕ್ಕೆಜೋಳ, ಬಾಳೆಹಣ್ಣು, ಅನಾನಸ್ ಇಟ್ಟು ಖುಷಿಪಟ್ಟಿದ್ದಾರೆ. ಇನ್ನು ಕೆಲವೆಡೆ ಆಲ್ಕೋಹಾಲ್ ಬ್ಯಾರೆಲ್ಗೇ ಸೊಂಡಿಲದ್ದಿರುವ ಆನೆಗಳು ಗೊಟಗೊಟನೆ ಸಾರಾಯಿ ಕುಡಿದು ಮತ್ತೇರಿಸಿಕೊಂಡಿವೆ. ಗುಂಪಿನ ಹಿರಿಯರನ್ನೇ ಅನುಸರಿಸಿದ ಮರಿಯಾನೆ ತಾನು ಯಾರಿಗೆ ಕಡಿಮೆ ಎಂದು ಕಂಠಮಟ್ಟ ಕುಡಿದ ಪರಿಣಾಮ ಥೇಟ್ ಕುಡುಕರಂತೆಯೇ ಹೋದಲ್ಲುದ್ದಕ್ಕೂ ತೂರಾಡಿ, ಒಂದೆಡೆ ದಾರಿಯನ್ನೂ ತಪ್ಪಿಸಿಕೊಂಡು ಅಮಲು ಇಳಿದ ಮಾರನೇ ದಿನ ಗುಂಪನ್ನು ಹುಡುಕಿಕೊಂಡು ಹೋಗಿದೆ. ಆರಂಭದಲ್ಲಿ ಈ ಗಜಪಡೆಯನ್ನು ಅವುಗಳು ಹೊರಟ ನೈರುತ್ಯ ದಿಕ್ಕಿನೆಡೆಗೆ ತಿರುಗಿಸುವ ಕೆಲ ಪ್ರಯತ್ನಗಳು ನಡೆದವಾದರೂ ಅದು ವಿಫಲವಾಗಿತ್ತು. ನಂತರ ಹಟ ಸಾಧಿಸಲು ಮುಂದಾಗದ ಚೀನಾ ಸರ್ಕಾರ ಆನೆಗಳನ್ನೇ ಮುಂದೆ ಬಿಟ್ಟು ತಾನು ಕಾವಲು ಕಾಯಲು ನಿರ್ಧರಿಸಿದ್ದು ವಿಶೇಷ. ಗಮನಾರ್ಹ ಸಂಗತಿಯೆಂದರೆ ಈ ಆನೆಗಳ ಮಹಾ ವಲಸೆಯನ್ನು ಬಿತ್ತರಿಸಲೆಂದೇ ಅಲ್ಲಿನ ಸುದ್ದಿವಾಹಿನಿಗಳು ವಿಶೇಷ ಬುಲೆಟಿನ್ ಕೂಡಾ ಮಾಡಿ ಮನಗೆದ್ದಿವೆ.
ಸದ್ಯ 500 ಕಿಲೋ ಮೀಟರ್ ಕ್ರಮಿಸಿರುವ ಈ ಆನೆಗಳು ತಮ್ಮ ಮೂಲ ಸ್ಥಾನ ನೈರುತ್ಯ ಯುನಾನ್ ಪ್ರಾಂತ್ಯದ ಕ್ಷುವಾನ್ಬನ್ನಾದ ಮೆಂಗ್ಯಾಂಜಿ ಸಂರಕ್ಷಿತ ಉದ್ಯಾನವನಕ್ಕೆ ಮರಳಿ ಹೋಗಬಹುದು ಎಂದು ಅಲ್ಲಿನ ಅರಣ್ಯಾಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಏಶಿಯನ್ ಆನೆ ಎಂದು ಗುರುತಿಸಿಕೊಂಡಿರುವ ಈ ತಳಿ ಭಾರತೀಯ ಉಪಖಂಡ ಮತ್ತು ಆಗ್ನೇಯ ಏಶಿಯಾದಲ್ಲಿ ಕಂಡು ಬರುವ ಸಂರಕ್ಷಿತ ಪ್ರಬೇಧಕ್ಕೆ ಸೇರಿದ್ದು, ಕಾಡಿನಲ್ಲಿ ಅಂದಾಜು 50 ಸಾವಿರ ಆನೆಗಳು ಉಳಿದಿವೆಯಂತೆ. 48 ವರ್ಷ ಬಾಳುವ ಈ ಆನೆಗಳಲ್ಲಿ ಗಂಡು ಆನೆ 4,000 ಕೆಜಿ ತೂಗಿದರೆ ಹೆಣ್ಣು ಆನೆ 2,700 ಕೆಜಿ ತೂಗುತ್ತದೆ.
ಹೀಗೆ ಸುದೀರ್ಘ ವಲಸೆ ಕೈಗೊಂಡು ಅಚ್ಚರಿ ಮೂಡಿಸಿರುವ ಈ ಗಜಪಡೆಯ ಉದ್ದೇಶ ನಿಗೂಢವಾಗಿಯೇ ಉಳಿದಿದೆಯಾದರೂ ಕೆಲ ತಜ್ಞರ ಪ್ರಕಾರ ಅನನುಭವಿ ಆನೆಯೇನಾದರೂ ಹಿಂಡಿನ ನೇತೃತ್ವ ವಹಿಸಿ ಹೀಗೆ ಯಡವಟ್ಟಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕೆಲವರ ಊಹೆ ಪ್ರಕಾರ ಇವುಗಳು ತಮ್ಮ ವಾಸಸ್ಥಾನ ಬದಲಿಸಲು ಪ್ರಯತ್ನಿಸುತ್ತಿರಬಹುದು ಎನ್ನಲಾಗುತ್ತಿದ್ದು ಹೊಸ ನೆಲೆ ಕಂಡುಕೊಳ್ಳುವ ಹುಡುಕಾಟಕ್ಕೆ ಇಳಿದಿರಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ. ಅದೇನೇ ಇದ್ದರೂ ಇಷ್ಟೊಂದು ದೂರ ಪ್ರಯಾಣಿಸಿದ ಆನೆಗಳು ಹೀಗೆ ಗುಂಪಾಗಿ ಮಲಗಿ ಇಡೀ ಜಗತ್ತನ್ನೇ ತನ್ನತ್ತ ಸೆಳೆದಿದ್ದು ನಿಜಕ್ಕೂ ಸೋಜಿಗ.
ಇದನ್ನೂ ಓದಿ:
ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ
ಕುಶ ಆನೆ ಇನ್ನು ಸ್ವತಂತ್ರ; ರೇಡಿಯೋ ಕಾಲರ್ ಅಳವಡಿಸಿ ಅರಣ್ಯಕ್ಕೆ ಬಿಟ್ಟ ಇಲಾಖೆ
Published On - 4:11 pm, Sat, 12 June 21