ಪ್ರಾಣಿ ಹಾಗೂ ಮನುಷ್ಯನ ನಡುವೆ ಬುದ್ಧಿಶಕ್ತಿಯ ವಿಚಾರದಲ್ಲಿ, ಜೀವನ ಕ್ರಮದಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಒಂದು ಬಾಂಧವ್ಯ ಏರ್ಪಟ್ಟಾಗ ಭೇದಭಾವಗಳೆಲ್ಲಾ ಕ್ಷುಲ್ಲಕವಾಗಿ ಪ್ರೀತಿಯೊಂದೇ ಎದ್ದು ಕಾಣುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಸಾಧಾರಣವಾಗಿ ನಾಯಿ, ಹಸು ಅಥವಾ ಇನ್ನಿತರ ಸಾಕುಪ್ರಾಣಿಗಳು ತನ್ನ ಮಾಲೀಕರಿಗೆ ಭಾವಪೂರ್ಣ ವಿದಾಯ ಸಲ್ಲಿಸುವ ದೃಶ್ಯಾವಳಿಗಳನ್ನು ನಾವು ನೋಡಿರುತ್ತೇವೆ. ಆದರೆ, ದೈತ್ಯ ಆನೆಯೊಂದು ಹೀಗೆ ಭಾವುಕವಾಗಿ ಮೆಲ್ಲನೆ ಹೆಜ್ಜೆಗಳನ್ನಿಟ್ಟು ಬಂದು ಮಾವುತನಿಗೆ ಅಂತಿಮವಾಗಿ ಸೊಂಡಿಲೆತ್ತಿ ವಿದಾಯ ಸಲ್ಲಿಸುವುದು ತೀರಾ ಅಪರೂಪವೆನ್ನಬಹುದಾದ ಘಟನೆ.
ಕೇರಳದಲ್ಲಿ ಈ ಘಟನೆ ನಡೆದಿದ್ದು ಮನೆಯ ಪ್ರಾಂಗಣದಲ್ಲಿರಿಸಲಾದ ಮಾವುತನ ಶವವನ್ನು ನೋಡಲು ಆನೆ ಭಾರವಾದ ಹೆಜ್ಜೆಗಳನ್ನಿಕ್ಕುತ್ತಾ ಆಗಮಿಸಿದೆ. ಸುತ್ತಲೂ ಹತ್ತಾರು ಜನ ನೆರೆದಿದ್ದರೂ ಅದರ ಚಿತ್ತ ಹರಿದಿದ್ದು ಮಾತ್ರ ಉಸಿರು ನಿಲ್ಲಿಸಿದ್ದ ತನ್ನ ಮಾವುತನೆಡೆಗೆ. ಶೋಕತಪ್ತ ವಾತಾವರಣದಲ್ಲಿ ಆಗಮಿಸಿದ ಆನೆ ಎಲ್ಲರಲ್ಲೂ ದುಃಖದ ಕಟ್ಟೆ ಒಡೆಯುವಂತೆ ವರ್ತಿಸಿದೆ. ಅತ್ಯಂತ ಮೌನವಾಗಿ ಶವದ ಎದುರು ನಿಂತು ಆ ದೃಶ್ಯವನ್ನು ಕಣ್ತುಂಬಿಕೊಂಡು ಸೊಂಡಿಲೆತ್ತಿ ಬೀಳ್ಕೊಡಿಗೆ ಸೂಚಿಸಿದೆ.
ಬರೀ ಮೌನವನ್ನೇ ತುಂಬಿಕೊಂಡ ಈ ವಿದಾಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿದೆ. ನೆಚ್ಚಿನ ಆನೆ ಹತ್ತಿರ ಬಂದು ಭಾವುಕವಾಗಿದ್ದನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊನೆಗೆ ಶವದ ಪಕ್ಕದಲ್ಲಿ ನಿಂತವರೊಬ್ಬರು ಆನೆಯ ಬಳಿ ಬಂದು ಸೊಂಡಿಲು ನೇವರಿಸಿ ಅದನ್ನು ಸಂತೈಸುವಂತೆ ಮಾಡಿದ್ದಾರೆ. ಅರೆ ನಿಮಿಷ ಮಾವುತನತ್ತ ಸೊಂಡಿಲು ಬೀಸಿ ಕೊನೆಯ ಸ್ಪರ್ಶಕ್ಕಾಗಿ ಹಾತೊರೆದಂತೆ ಮಾಡಿದ ಆನೆ, ಕಡೆಯಲ್ಲಿ ಅಂತಿಮ ನಮನ ಸಲ್ಲಿಸಿ ಶವವನ್ನೇ ದಿಟ್ಟಿಸುತ್ತಾ ಮೆಲ್ಲಮೆಲ್ಲನೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರ್ಗಮಿಸಿರುವ ದೃಶ್ಯವನ್ನು ನೋಡಿದರೆ ಅರಿವಿಲ್ಲದಂತೆಯೇ ಕಣ್ಣಂಚಲ್ಲಿ ನೀರು ಜಿನುಗಿಬಿಡುತ್ತದೆ.
Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್