ಮಾಸ್ಕೋ: ಫೆಬ್ರುವರಿ 24 ರಂದು ರಷ್ಯನ್ ಸೇನೆ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಶುರು ಮಾಡಿದ ಬಳಿಕ ಕೇವಲ ಆಕ್ರಮಣಕ್ಕೊಳಗಾಗಿರುವ ದೇಶವಲ್ಲದೆ, ದಾಳಿಯನ್ನು ನಡೆಸಿ ವೊಲೊದಿಮಿರ್ ಜೆಲೆನ್ಸ್ಕಿಗೆ (Volodymyr Zelenskyy) ತಕ್ಕ ಪಾಠ ಕಲಿಸಿದ್ದೇನೆ ಅಂತ ಬೀಗುತ್ತಿರುವ ವ್ಲಾದಿಮಿರ್ ಪುಟಿನ್ (Vladimir Putin) ಅವರ ರಷ್ಯಾದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಶುಕ್ರವಾರದಂದು ಖುದ್ದು ಪುಟಿನ್ ಅವರೇ ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ರಷ್ಯಾ ಅಸಂಖ್ಯಾತ ಬಾರಿ ಸೈಬರ್ ದಾಳಿಗಳಿಗೊಳಗಾಗಿದೆ ಅಂತ ಹೇಳಿದ್ದಾರೆ ಮತ್ತು ತಮ್ಮ ದೇಶ ತಂತ್ರಜ್ಞಾನದಲ್ಲೂ ಸಾರ್ವಭೌಮತೆ (technological sovereignty) ಸಾಧಿಸುವ ಅಗತ್ಯವಿದೆ ಅಂತ ಕರೆ ನೀಡಿದ್ದಾರೆ.
ಶುಕ್ರವಾರದಂದು ರಷ್ಯಾದ ಭದ್ರತಾ ಕೌನ್ಸಿಲ್ ನೊಂದಿಗೆ ಸಭೆ ನಡೆಸುವ ಸಂದರ್ಭದಲ್ಲಿ ಪುಟಿನ್ ಅವರು, ‘ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ನಾವು ಆಕ್ರಮಣ ಮಾಡಿದ ನಂತರ ಸಂಕೀರ್ಣವಾದವುಗಳೂ ಸೇರಿದಂತೆ ಸೈಬರ್ ಅಕ್ರಮಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ,’ ಎಂದು ಹೇಳಿದರು.
ಈ ದಾಳಿಗಳನ್ನು ಬೇರೆ ಬೇರೆ ದೇಶಗಳು ನಡೆಸುತ್ತಿದ್ದರೂ ಅವುಗಳ ನಡುವೆ ಸಮನ್ವಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಸರ್ಕಾರೀ ಪೋರ್ಟಲ್, ಮಿಡಿಯಾ, ಹಣಕಾಸು ಸಂಸ್ಥೆಗಳು ಸೇರಿದಂತೆ ನಿರ್ಣಾಯಕ ಮತ್ತು ಅತ್ಯಂತ ಮಹತ್ವದ ಮಾಹಿತಿ ಸೌಲಭ್ಯಗಳ ಮೇಲೆ ಸೈಬರ್ ದಾಳಿ ಯೋಜಿತವಾಗಿ ನಡೆಸಲಾಗುತ್ತಿದೆ, ಎಂದು ಅಲ್ಲಿನ ರಾಷ್ಟ್ರೀಯ ಟೆಲಿವಿಷನ್ ಗಳಲ್ಲಿ ಬಿತ್ತರಗೊಂಡ ಹೇಳಿಕೆಯಲ್ಲಿ ಪುಟಿನ್ ತಿಳಿಸಿದ್ದಾರೆ.
‘ವಿದೇಶೀ ಪ್ರೋಗ್ರಾಮ್ ಗಳು, ಕಂಪ್ಯೂಟರ್ ತಂತ್ರಜ್ಞಾನ ಮತ್ತು ಟೆಲಿಸಂಪರ್ಕ ಸಾಧನೆಗಳ ಬಳಕೆಗೆ ಸಂಬಂಧಿಸಿದ ಅಪಾಯಗಳನ್ನು ಅಮೂಲಾಗ್ರವಾಗಿ ಕಡಿಮೆ ಮಾಡುವ ಅವಶ್ಯಕತೆ ನಮಗಿದೆ,’ ಎಂದು ಪುಟಿನ್ ಹೇಳಿದ್ದಾರೆ.
ತಂತ್ರಜ್ಞಾನದ ಸಾರ್ವಭೌಮತ್ವವನ್ನು ಅತ್ಯಂತ ಶೀಘ್ರವಾಗಿ ಬಲಪಡಿಸಬೇಕಾದರೆ ಒಂದು ಅತ್ಯಾಧುನಿಕ ರಷ್ಯನ್ ಎಲೆಕ್ಟ್ರಾನಿಕ್ ಮಾದರಿಯನ್ನು ಸೃಷ್ಟಿಸಬೇಕಾಗಿದೆ, ಎಂದು ಪುಟಿನ್ ಹೇಳಿದ್ದಾರೆ.
ಏತನ್ಮಧ್ಯೆ, ಶುಕ್ರವಾರದಂದು ಬರ್ಲಿನ್ ನಲ್ಲಿ ಜಿ7 ರಾಷ್ಟ್ರಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಜರ್ಮನಿಯ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ ಅವರು, ರಷ್ಯಾದ ಆಕ್ರಮಣದಿಂದ ಜರ್ಝರಿತಗೊಂಡಿರುವ ಉಕ್ರೇನ್ ನ ನಗರಗಳಣನ್ನು ಪುನರ್ ನಿರ್ಮಿಸಲು ರಷ್ಯಾಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಅದರಿಂದ ಜನರೇಟ್ ಆಗುವ ಹಣವನ್ನು ಬಳಸುವುದು ಒಂದು ಸಾಧ್ಯತೆಯಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಅದರೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಂಡಿಲ್ಲ ಎಂದು ಲಿಂಡ್ನರ್ ಸ್ಪಷ್ಟಪಡಿಸಿದರು.
‘ಸಭೆಯಲ್ಲಿ ನಾವು ರಷ್ಯಾದ ವಿರುದ್ಧ ಹೇರಿರುವ ನಿರ್ಬಂಧಗಳನ್ನು ಮುಂದುವರಿಸುವ ಮತ್ತು ಬೇರೆ ದೇಶಗಳಲ್ಲಿರುವ ರಷ್ಯಾದ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದೆವು,’ ಎಂದು ಲಿಂಡ್ನರ್ ಎರಡು ದಿನಗಳ ಕಾಲ ನಡೆದ ಸಭೆ ಮುಕ್ತಾಯಗೊಳಿಸಿದ ಬಳಿಕ ಹೇಳಿದರು.
ರಷ್ಯಾದ ಆಸ್ತಿಗಳನ್ನು ಸೀಜ್ ಮಾಡುವುದನ್ನು ಉಲ್ಲೇಖಿಸಿ ಹೇಳಿದ ಲಿಂಡ್ನರ್, ‘ಅದನ್ನೊಂದು ಸಾಧ್ಯತೆಯಾಗಿ ಪರಿಗಣಿಸಲಾಗುತ್ತಿದೆ, ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ,’ ಎಂದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ