ಏಪ್ರಿಲ್​ 10ನ್ನು ಮಹತ್ವದ ದಿನವೆಂದು ಆಚರಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷರಿಂದ ಕರೆ; ಇಮ್ರಾನ್​ ಖಾನ್​ ಹುದ್ದೆ ಕಳೆದುಕೊಂಡಿದ್ದಕ್ಕೆ ಭರ್ಜರಿ ಖುಷಿ

| Updated By: Lakshmi Hegde

Updated on: Apr 10, 2022 | 8:32 AM

ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಿಲಾವಾಲ್​  ಜರ್ದಾರಿ, ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಏನೆಲ್ಲ ಮಹತ್ವದ ಘಟನೆಗಳು ನಡೆದವು ಎಂಬುದನ್ನು ನೆನಪಿಸಿಕೊಂಡರು. 1973ರ ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಸಂವಿಧಾನ ಜಾರಿಬಂತು ಎಂದೂ ಹೇಳಿದರು.

ಏಪ್ರಿಲ್​ 10ನ್ನು ಮಹತ್ವದ ದಿನವೆಂದು ಆಚರಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷರಿಂದ ಕರೆ; ಇಮ್ರಾನ್​ ಖಾನ್​ ಹುದ್ದೆ ಕಳೆದುಕೊಂಡಿದ್ದಕ್ಕೆ ಭರ್ಜರಿ ಖುಷಿ
ಪಿಪಿಪಿ ಪಕ್ಷದ ಅಧ್ಯಕ್ಷ
Follow us on

ಇಮ್ರಾನ್ ಖಾನ್​ ಪಾಕಿಸ್ತಾನದ ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತು ಪಡಿಸಲು ವಿಫಲರಾದರು. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದಾಗಿನಿಂದಲೂ ಅದರಿಂದ ಪಾರಾಗಲು ಇಮ್ರಾನ್ ಖಾನ್ ವಿವಿಧ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅದ್ಯಾವುದೂ ಕೆಲಸ ಮಾಡಲಿಲ್ಲ. ನಿನ್ನೆ ರಾತ್ರಿ ಇಮ್ರಾನ್​ ಖಾನ್​ ಬಹುಮತ ಸಾಬೀತುಪಡಿಸಬೇಕಿತ್ತು. ಆದರೆ ಅದು ಸಾಧ್ಯವಾಗದೆ ಅವರೀಗ ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ. ಹಾಗೇ, ಇಮ್ರಾನ್​ ಖಾನ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದನ್ನು ಪಾಕಿಸ್ತಾನ​ ಪೀಪಲ್ಸ್​ ಪಾರ್ಟಿ (PPP) ಅಧ್ಯಕ್ಷ ಬಿಲಾವಾಲ್​​ ಬುಟ್ಟೋ ಜರ್ದಾರಿ ಸ್ವಾಗತಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿಯೇ 2022ರ ಏಪ್ರಿಲ್​ 10 ಅತ್ಯಂತ ಮಹತ್ವದ ದಿನವಾಗಿದ್ದು, ರಾಷ್ಟ್ರೀಯ ಸಂಸತ್ತಿನ ಪ್ರತಿಯೊಬ್ಬ ಸದಸ್ಯನೂ ಈ ದಿನವನ್ನು ವಿಶೇಷವೆಂದು ಆಚರಣೆ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ.

ಇಮ್ರಾನ್ ಖಾನ್​ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯವನ್ನು ಅಲ್ಲಿನ ಡೆಪ್ಯೂಟಿ ಸ್ಪೀಕರ್​ ಆಗಿದ್ದ ಖಾಸಿಂ ಸೂರಿ ವಜಾಗೊಳಿಸಿದ್ದರು. ಹೀಗಾಗಿ ಬೀಸುವ ದೊಣ್ಣೆಯಿಂದ ಇಮ್ರಾನ್ ಖಾನ್​ ಪಾರಾಗಿದ್ದೇನೆ ಎಂದೇ ಭಾವಿಸಿದ್ದರು. ಆದರೆ ಸುಪ್ರೀಂಕೋರ್ಟ್​ ಶಾಕ್​ ಕೊಟ್ಟಿತ್ತು. ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದು ಉಪಸಭಾಪತಿಯ ತಪ್ಪು ನಿರ್ಧಾರ. ಏಪ್ರಿಲ್​ 9ರಂದು ಇಮ್ರಾನ್ ಖಾನ್​ ಬಹುಮತ ಸಾಬೀತುಪಡಿಸಬೇಕು ಎಂದು ತೀರ್ಪು ನೀಡಿತ್ತು. ಆದರೆ ನಿನ್ನೆ ಬೆಳಗ್ಗೆಯಿಂದಲೂ ಹೈಡ್ರಾಮಾ ಮಾಡಿದ್ದೇ ಬಂತು, ಬಿಟ್ಟರೆ ಇಮ್ರಾನ್​ ಖಾನ್ ಸಂಸತ್ತು ಪ್ರವೇಶಿಸಲೇ ಇಲ್ಲ. ಅಂತೂ ಮಧ್ಯರಾತ್ರಿ ಹೊತ್ತಿಗೆ ಬಹುಮತ ಸಾಬೀತು ಪಡಿಸಲು ಸಿದ್ಧರಾದರು. ಆದರೆ ಒಟ್ಟಾರೆ 342 ಸದಸ್ಯ ಬಲವಿರುವ ಪಾಕಿಸ್ತಾನ ಸಂಸತ್ತಿನಲ್ಲಿ 174 ಮಂದಿ ಅವಿಶ್ವಾಸ ನಿರ್ಣಯದ ಪರ ಮತ ಹಾಕಿದರು. ಇದರಲ್ಲಿ ಇಮ್ರಾನ್ ಖಾನ್​ ಪಕ್ಷದ ಬಹುತೇಕ ಸದಸ್ಯರು ಹೊರನಡೆದಿದ್ದರು.

ಬಳಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಿಲಾವಾಲ್​  ಜರ್ದಾರಿ, ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಏನೆಲ್ಲ ಮಹತ್ವದ ಘಟನೆಗಳು ನಡೆದವು ಎಂಬುದನ್ನು ನೆನಪಿಸಿಕೊಂಡರು. 1973ರ ಏಪ್ರಿಲ್​ 10ರಂದು ಪಾಕಿಸ್ತಾನದಲ್ಲಿ ಸಂವಿಧಾನ ಜಾರಿಬಂತು.  ಹಾಗೇ, 1986ರ ಏಪ್ರಿಲ್​ 10ರಂದು ಬೆನಜೀರ್​ ಬುಟ್ಟೋ ತಮಗೆ ತಾವೇ ವಿಧಿಸಿಕೊಂಡಿದ್ದ ಗಡೀಪಾರು ಶಿಕ್ಷೆಯನ್ನು ಕೊನೆಗೊಳಿಸಿಕೊಂಡು, ಅಂದಿನ ಅಧ್ಯಕ್ಷರಾಗಿದ್ದ ಮೊಹಮ್ಮದ್​ ಜಿಯಾ ಉಲ್​ ಹಕ್​ ವಿರುದ್ಧ ಹೋರಾಟ ಮಾಡಲು, ಮತ್ತೆ ಲಾಹೋರ್​ಗೆ ಬಂದರು. ಇನ್ನು 2022ರ ಏಪ್ರಿಲ್​ 10ರಂದು ಇಮ್ರಾನ್ ಖಾನ್​ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯುವಂತಾಯಿತು. ಇಮ್ರಾನ್ ಖಾನ್​, ತಾವು ಪಾಕಿಸ್ತಾನಕ್ಕೆ ಹೊಸ ಸ್ವರೂಪ ಕೊಡುತ್ತೇನೆ, ಇಲ್ಲಿ ಭ್ರಷ್ಟಾಚಾರ ಮುಕ್ತ ಮಾಡಲಾಗುವುದು ಎಂದು ಹೇಳಿಕೊಂಡಿದ್ದರು. ಆದರೆ ಈಗ ಏನಾಯಿತು? ಹಳೇ ಪಾಕಿಸ್ತಾನಕ್ಕೆ (ಪುರಾನಾ ಪಾಕಿಸ್ತಾನ) ಸ್ವಾಗತ ಕೋರುವ ಸಮಯ ಬಂದಿದೆ ಎಂದು ಜರ್ದಾರಿ ಹೇಳಿದರು.

ಇದನ್ನೂ ಓದಿ: Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್​ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು