ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ಜನತೆ ಮತ್ತು ಸಂಸ್ಕೃತಿ ವಿರುದ್ಧ ಯುದ್ಧ ಸಾರಿವೆ: ಸೆರ್ಗೇಯಿ ಲವ್ರೋವ್, ರಷ್ಯಾ ವಿದೇಶಾಂಗ ಸಚಿವ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 28, 2022 | 8:20 AM

ಉಕ್ರೇನ್ ವಿರುದ್ದ ರಷ್ಯಾ ಮಿಲಿಟರಿ ಕಾರ್ಯಾಚರಣೆ ಮಂದುವರಿಸಿರುವಂತೆಯೇ, ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೇಯಿ ಲವ್ರೋವ್ ಅವರು ಶುಕ್ರವಾರ ಮಾಸ್ಕೋನಲ್ಲಿ ಹೇಳಿಕೆಯೊಂದನ್ನು ನೀಡಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ, ಅದರ ಜನತೆ ಮತ್ತು ಸಂಸ್ಕೃತಿ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ನಡೆಸುತ್ತಿವೆ ಅಂತ ಹೇಳಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ಜನತೆ ಮತ್ತು ಸಂಸ್ಕೃತಿ ವಿರುದ್ಧ ಯುದ್ಧ ಸಾರಿವೆ: ಸೆರ್ಗೇಯಿ ಲವ್ರೋವ್, ರಷ್ಯಾ ವಿದೇಶಾಂಗ ಸಚಿವ
ಸೆರ್ಗೇಯಿ ಲವ್ರೋವ್, ರಷ್ಯಾ ವಿದೇಶಾಂಗ ಸಚಿವ
Follow us on

ಮಾಸ್ಕೋ: ಪಾಪದ ಉಕ್ರೇನ್ (Ukraine) ಮೇಲೆ ಆಕ್ರಮಣ ನಡೆಸಿ ಇಡೀ ವಿಶ್ವ ಸಮುದಾಯದ ಟೀಕೆಗೆ ಗುರಿಯಾಗಿರುವ ರಷ್ಯಾ ಮಾತ್ರ ತನ್ನಿಂದ ಪ್ರಮಾದವಿದೆ ಅಂತ ಅಂಗೀಕರಿಸುತ್ತಿಲ್ಲ. ತಾನು ಮಾಡಿದ್ದು ಸರಿ ಬೇರೆ ದೇಶಗಳು ಮಾಡಿದ್ದು ತಪ್ಪು ಅನ್ನುವ ರಷ್ಯಾದ (Russia) ಧೋರಣೆ ಹಾಸ್ಯಾಸ್ಪದವಾಗಿದೆ. ಇದನ್ನ ಯಾಕೆ ಹೇಳಬೇಕಾಗಿದೆಯೆಂದರೆ ಉಕ್ರೇನ್ ವಿರುದ್ದ ರಷ್ಯಾ ಮಿಲಿಟರಿ ಕಾರ್ಯಾಚರಣೆ (military operations) ಮಂದುವರಿಸಿರುವಂತೆಯೇ, ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೇಯಿ ಲವ್ರೋವ್ ಅವರು ಶುಕ್ರವಾರ ಮಾಸ್ಕೋನಲ್ಲಿ ಹೇಳಿಕೆಯೊಂದನ್ನು ನೀಡಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ, ಅದರ ಜನತೆ ಮತ್ತು ಸಂಸ್ಕೃತಿ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ನಡೆಸುತ್ತಿವೆ ಅಂತ ಹೇಳಿದ್ದಾರೆ.

‘ಪಶ್ಚಿಮ ರಾಷ್ಟ್ರಗಳ ನಮ್ಮ ಮತ್ತು ರಷ್ಯನ್ ವಿಶ್ವದ ವಿರುದ್ಧ ಯುದ್ಧ ಘೋಷಿಸಿವೆ. ರಷ್ಯಾ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಆಯಾಮದ ಜೊತೆ ಇರುವ ಸಂಬಂಧವನ್ನು ರದ್ದು ಮಾಡುತ್ತಿರುವ ಪಶ್ಚಿಮ ರಾಷ್ಟ್ರಗಳ ಸಂಸ್ಕೃತಿ ಅತಾರ್ಕಿಕ ಹಂತವನ್ನು ತಲುಪಿದೆ,’ ಎಂದು ಸಚಿವಾಲಯದ ಸಭೆಯೊಂದರಲ್ಲಿ ಲವ್ರೋವ್ ಹೇಳಿದ್ದಾರೆ.

ರಷ್ಯನ್ ಸಾಹಿತಿಗಳು, ಸಂಗೀತಕಾರರು ಮತ್ತು ಸಾಂಸ್ಕೃತಿಕ ಜಗತ್ತಿಗೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಪಶ್ಚಿಮ ರಾಷ್ಟ್ರಗಳು ನಿಷೇಧ ಹೇರುತ್ತಿವೆ ಅಂತ ಅವರು ಅರೋಪಿಸಿದ್ದಾರೆ.

‘ಈ ಸ್ಥಿತಿ ಬಹಳ ಸಮಯದವರೆಗೆ ಮುಂದುವರಿಯಲಿದೆ, ಅದರೊಂದಿಗೆ ನಾವು ಏಗಲೇಬೇಕು ಅಂತ ನಾನು ಅನುಮಾನವಿಲ್ಲದೆ ಹೇಳಬಲ್ಲೆ,’ ಎಂದು ಲವ್ರೋವ್ ಹೇಳಿದ್ದಾರೆ.

‘ನಮ್ಮ ದೇಶದ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನವಾಗಿ ವಾಷಿಂಗ್ಟನ್ ತನ್ನ ಉಪಗ್ರಹಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಿದೆ, ಮೂರು ಪಟ್ಟು ಹೆಚ್ಚಿಸುತ್ತಿದೆ, ನಾಲ್ಕು ಪಟ್ಟು ಹೆಚ್ಚಿಸುತ್ತಿದೆ,’ ಎಂದು ಲವ್ರೋವ್ ಹೇಳಿದ್ದಾರೆ.

‘ನಮ್ಮ ವಿರುದ್ಧ ಸುಳ್ಳುಗಳ ಅಭಿಯಾನ ನಡೆಸುತ್ತಾ, ಜಾಗತಿಕ ಮಾಧ್ಯಮಗಳಲ್ಲಿ ನಮ್ಮ ಮುಖಕ್ಕೆ ಮಸಿ ಬಳಿಯುತ್ತಾ, ಏಕಪಕ್ಷೀಯ ನಿರ್ಬಂಧಗಳನ್ನು ಹೇರುತ್ತಾ-ಸಾಧ್ಯವಿರುವ ಎಲ್ಲ ಅಸ್ತ್ರಗಳನ್ನು ಅವರು ನಮ್ಮ ವಿರುದ್ಧ ಬಳಸುತ್ತಿದ್ದಾರೆ,’ ಎಂದು ಲವ್ರೋವ್ ಹೇಳಿದ್ದಾರೆ.

‘ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರಷ್ಯಾದ ಬಗ್ಗೆ ಭಯ ಅನ್ನೋದು ಒಂದು ಅಭೂತಪೂರ್ವ ನೈಸರ್ಗಿಕ ಪ್ರಕ್ರಿಯೆಯಾಗಿ ಗೋಚರವಾಗುತ್ತಿದೆ ಮತ್ತು ನಾವು ವಿಷಾದಪಡುವ ವಿಷಯವೇನೆಂದರೆ ಸರ್ಕಾರಿ ವಲಯಗಳಿಂದ ಈ ಪ್ರಕ್ರಿಯೆಗೆ ಉತ್ತೇಜನ ಸಿಗುತ್ತಿದೆ,’ ಎಂದು ಲವ್ರೋವ್ ಹೇಳಿದ್ದಾರೆ.

ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳ ರಾಜಧಾನಿಗಳು ಮಾಸ್ಕೋ ಮೇಲೆ ಹಿಂದೆಂದೂ ಕಾಣದ ನಿರ್ಬಂಧಗಳನ್ನು ವಿಧಿಸಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.