ಉಕ್ರೇನ್‌ಗೆ ಹೆಚ್ಚುವರಿ ನೆರವು ಒದಗಿಸುವ ಕುರಿತು ಬೈಡೆನ್ ಮತ್ತು ಝೆಲೆನ್ಸ್ಕಿ ನಡುವೆ ಸುದೀರ್ಘ ಮಾತುಕತೆ: ಶ್ವೇತ ಭವನ
750 ಮಿಲಿಯನ್ ಡಾಲರ್ ಗೂ ಮೀರಿದ ಸೇನಾ ನೆರವನ್ನು ವಾಷಿಂಗ್ಟನ್ ಘೋಷಣೆ ಮಾಡಲಿದೆ ಎಂಬ ಅಮೇರಿಕನ್ ಮಾಧ್ಯಮಗಳ ವರದಿಯ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ಎರಡು ಗಂಟೆ ಅವಧಿಯ ಮಾತುಕತೆ ನಡೆದಿದೆ.

ವಾಷಿಂಗ್ಟನ್: ರಷ್ಯಾದ ಮಿಲಿಟರಿ ಆಕ್ರಮಣದಿಂದ ಜರ್ಝರಿತಗೊಂಡಿರುವ ಉಕ್ರೇನ್ ಗೆ ಹೊಸ ಬಹುಕೋಟಿ ಡಾಲರ್ ನೆರವನ್ನು ಘೋಷಿಸಲು ಪೆಂಟಗನ್ ಅಣಿಯಾಗುತ್ತಿರುವಂತೆಯೇ ಅಧ್ಯಕ್ಷ ಜೋ ಬೈಡೆನ್ ಅವರು ಬುಧವಾರದಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರಿಗೆ ಕರೆ ಮಾಡಿ ತಮ್ಮ ದೇಶ ನೀಡಲಿರುವ ನೆರವಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಬೈಡೆನ್ ಅವರೊಂದಿಗೆ ನಡೆದ ಮಾತುಕತೆಯನ್ನು ಟ್ವೀಟ್ ಮೂಲಕ ದೃಢೀಕರಿಸಿರುವ ಝೆಲೆನ್ಸ್ಕಿ ಅವರು ರಕ್ಷಣೆ ಮತ್ತು ಸಂಭಾವ್ಯ ಹೆಚ್ಚುವರಿ ಸ್ಥೂಲ-ಹಣಕಾಸಿನ ನೆರವಿನ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.
750 ಮಿಲಿಯನ್ ಡಾಲರ್ ಗೂ ಮೀರಿದ ಸೇನಾ ನೆರವನ್ನು ವಾಷಿಂಗ್ಟನ್ ಘೋಷಣೆ ಮಾಡಲಿದೆ ಎಂಬ ಅಮೇರಿಕನ್ ಮಾಧ್ಯಮಗಳ ವರದಿಯ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ಎರಡು ಗಂಟೆ ಅವಧಿಯ ಮಾತುಕತೆ ನಡೆದಿದೆ. ಸದರಿ ವರದಿಗಳ ಬಗ್ಗೆ ಮಾಧ್ಯಮಗಳ ವರದಿಗಾರರು ಹಿರಿಯ ಪೆಂಟಗನ್ ಅಧಿಕಾರಿಯೊಬ್ಬರನ್ನು ಕೇಳಿದಾಗ, ‘ಹೆಚ್ಚುವರಿ ನೆರವಿನ ಘೋಷಣೆಗಾಗಿ ನಿರೀಕ್ಷಿಸುತ್ತಿರಿ, ಅದರ ಬಗ್ಗೆ ನಾವು ಘೋಷಣೆಯ ನಂತರ ಮಾತಾಡಲಿದ್ದೇವೆ,’ ಎಂದು ಹೇಳಿದರು.
‘ಎಷ್ಟು ಪ್ರಮಾಣದಲ್ಲಿ ಸಾಧ್ಯವಾಗುತ್ತದೆಯೋ ಅಷ್ಟು ಮತ್ತು ಸಾಧ್ಯವಾದಷ್ಟು ಬೇಗ ಉಕ್ರೇನ್ ಗೆ ನೆರವು ತಲುಪಿಸುವ ಬಗ್ಗೆ ನಾವು ಪದೇಪದೆ ಹೇಳುತ್ತಿದ್ದೇವೆ. ಭದ್ರತಾ ಸಂಬಂಧಿ ಹೆಚ್ಚಿನ ನೆರವನ್ನು ಒದಗಿಸಲು ಅಧ್ಯಕ್ಷರು ಮುಕ್ತ ಮನಸನ್ನು ಹೊಂದಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಈ ಅಧಿಕಾರಿಯು ವರದಿಗಾರರಿಗೆ ಹೇಳಿದರು. ಯುಎಸ್ ಮಧ್ಯಮಗಳ ವರದಿಯ ಪ್ರಕಾರ ಬೈಡೆನ್ ಕೀವ್ಗೆ ಒದಗಿಸುತ್ತಿರುವ ಹೊಸ ನೆರವಿನಲ್ಲಿ ಭಾರಿ ಸಾಮಗ್ರಿಗಳು ಸೇರಿದ್ದು, ನ್ಯೂಕ್ಲಿಯರ್-ಶಸ್ತ್ರಸಜ್ಜಿತ ರಷ್ಯಾ ಯುದ್ಧವನ್ನು ತೀವ್ರಗೊಳಿಸಬಹುದಾದ ಆತಂಕದಿಂದ ಅವುಗಳನ್ನು ಇದಕ್ಕೂ ಮೊದಲು ಒದಗಿಸುವುದಕ್ಕೆ ಅಮೆರಿಕ ಹಿಂದೇಟು ಹಾಕಿತ್ತು.
ಪೆಂಟಗನ್ ನಲ್ಲಿ ನಂಬರ್ 2 ಆಗಿರುವ ಕ್ಯಾಥ್ಲೀನ್ ಹಿಕ್ಸ್ ಅವರು ಉಕ್ರೇನಿಯನ್ ಸೈನ್ಯವು ಹೆಚ್ಚು ಬಳಸುವ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ವೇಗಗೊಳಿಸಲು ಪ್ರಮುಖ ಅಮೇರಿಕನ್ ರಕ್ಷಣಾ ಗುಂಪುಗಳ ಮುಖ್ಯಸ್ಥರೊಂದಿಗೆ ಬುಧವಾರ ಸಾಯಂಕಾರ ಸಭೆ ನಡೆಸಲಿದ್ದಾರೆ. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ‘ಸಿಇಒಗಳೊಂದಿಗೆ ಈ ನಿರ್ದಿಷ್ಟ ಸಭೆಯನ್ನು ಸೀಮಿತಗೊಳಿಸಲು ಬಯಸಿದ್ದರು. ಈ ಭದ್ರತಾ ನೆರವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವ್ಯವಸ್ಥೆಗಳ ಪ್ರಕಾರ ಮತ್ತು ಉತ್ಪಾದನೆಯ ವಿಷಯದಲ್ಲಿ ಉದ್ಯಮವು ಯಾವ ಗುರಿ ತಲುಪಿದೆ ಎಂಬ ಅರಿವು ನಮಗೆ ಸಿಗಲಿದೆ,’ ಎಂದು ಹಿರಿಯ ಅಧಿಕಾರಿ ಹೇಳಿದರು.
‘ಉಕ್ರೇನ್ ಗೆ ನಾವು ಹೇರಳವಾಗಿ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ ಮತ್ತು ನಾವು ಮಾಡುತ್ತಿರುವುದು ಯುಕ್ತ ಹಾಗೂ ನ್ಯಾಯಸಮ್ಮತವಾಗಿದೆ,’ ಎಂದು ಅಧಿಕಾರಿ ಹೇಳಿದ್ದಾರೆ.
ಶ್ವೇತಭವನದಿಂದ ಕಳೆದ ವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಇದುವರೆಗೆ: 1,400 ಸ್ಟಿಂಗರ್ ವಿಮಾನ-ವಿರೋಧಿ ಉಪಕರಣ, 5,000 ಜಾವೆಲಿನ್-ವಿರೋಧಿ ಟ್ಯಾಂಕ್ ಕ್ಷಿಪಣಿಗಳು, 7,000 ಇತರ ಟ್ಯಾಂಕ್-ವಿರೋಧಿ ಶಸ್ತ್ರಾಸ್ತ್ರಗಳು, ಹಲವು ನೂರು ಸ್ವಿಚ್‌ಬ್ಲೇಡ್ ಡ್ರೋನ್‌ಗಳು, 7,000 ಅಸಾಲ್ಟ್ 50 ರೈಫಲ್‌ಗಳು ಮಿಲಿಯನ್ ಬುಲೆಟ್‌ಗಳು ಮತ್ತು ಇತರ ಉಪಕರಣಗಳ ಶ್ರೇಣಿ- ಮೊದಲಾದವುಗಳನ್ನು ಉಕ್ರೇನ್‌ಗೆ ಸರಬರಾಜು ಮಾಡಿದೆ ಇಲ್ಲವೇ ಸರಬರಾಜು ಮಾಡುವ ಭರವಸೆ ನೀಡಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮಗಳ ಚರ್ಚೆ ಮುಂದುವರಿಕೆ: ಮೋದಿ ಜೊತೆಗಿನ ಮಾತುಕತೆಯಲ್ಲಿ ಬೈಡೆನ್ ಪುನರುಚ್ಚಾರ
ಇದನ್ನೂ ಓದಿ: ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ