ನೊಬೆಲ್ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಯಾರು?
ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಅವರಿಗೆ ಇಂದು (ಅಕ್ಟೋಬರ್ 10) ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಕವಯಿತ್ರಿಯಾಗಿದ್ದ ಹಾನ್ ಕಾಂಗ್ ಬಳಿಕ ಕಾದಂಬರಿಗಾರ್ತಿಯಾದರು. ಹಲವು ಕಥಾ ಸಂಕಲಗಳನ್ನು ಹೊರತಂದಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಬಹಳ ಹೆಸರು ಮಾಡುತ್ತಿದ್ದಾರೆ.
ನವದೆಹಲಿ: ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ದಕ್ಷಿಣ ಕೊರಿಯಾದ ಸಾಹಿತಿ ಹಾನ್ ಕಾಂಗ್ ಸಾಹಿತ್ಯಿಕ ಹಿನ್ನೆಲೆಯಿರುವ ಕುಟುಂಬದಲ್ಲೇ ಹುಟ್ಟಿದವರು. ನೊಬೆಲ್ ಗೌರವವನ್ನು ಪಡೆದ ಕೊರಿಯಾದ ಮೊದಲ ಲೇಖಕಿ ಮತ್ತು 18ನೇ ಮಹಿಳೆಯಾಗಿದ್ದಾರೆ. 2016ರಲ್ಲಿ ಅವರು ತಮ್ಮ ಕಾದಂಬರಿ ದಿ ವೆಜಿಟೇರಿಯನ್‌ಗಾಗಿ ಮ್ಯಾನ್ ಬೂಕರ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಆ ಪ್ರಶಸ್ತಿಯನ್ನು ಗೆದ್ದ ಮೊದಲ ಕೊರಿಯನ್ ಎಂಬ ಹೆಗ್ಗಳಿಕೆ ಅವರದ್ದು.
1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜುದಲ್ಲಿ ಜನಿಸಿದ ಹಾನ್ ಕಾಂಗ್ ಅವರ ತಂದೆ ಹೆಸರಾಂತ ಕಾದಂಬರಿಕಾರರು. ಹಾನ್ ಕಾಂಗ್ 1993ರಲ್ಲಿ ಮುನ್ಹಕ್-ಗ್ವಾ-ಸಾಹೋ (ಸಾಹಿತ್ಯ ಮತ್ತು ಸಮಾಜ) ಚಳಿಗಾಲದ ಸಂಚಿಕೆಯಲ್ಲಿ “ವಿಂಟರ್ ಇನ್ ಸಿಯೋಲ್” ಸೇರಿದಂತೆ ಐದು ಕವನಗಳನ್ನು ಪ್ರಕಟಿಸುವ ಮೂಲಕ ಕವಯಿತ್ರಿಯಾಗಿ ತಮ್ಮ ಸಾಹಿತ್ಯಿಕ ಪ್ರವೇಶ ಮಾಡಿದರು. ನಂತರ ಅವರು ಕಾದಂಬರಿಕಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ 1995ರಲ್ಲಿ Yeosu (ಮುಂಜಿ ಪಬ್ಲಿಷಿಂಗ್ ಕಂಪನಿ) ಎಂಬ ಶೀರ್ಷಿಕೆಯ ತನ್ನ ಮೊದಲ ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದರು. ಅವರು ಆರ್ಟ್ಸ್ ಕೌನ್ಸಿಲ್ ಕೊರಿಯಾದ ಬೆಂಬಲದೊಂದಿಗೆ 1998ರಲ್ಲಿ 3 ತಿಂಗಳ ಕಾಲ ಅಯೋವಾ ವಿಶ್ವವಿದ್ಯಾನಿಲಯ ಅಂತಾರಾಷ್ಟ್ರೀಯ ಬರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದನ್ನೂ ಓದಿ: ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್ಗೆ ನೊಬೆಲ್ ಪ್ರಶಸ್ತಿ
ಈ ಬಹುಮಾನವನ್ನು 53 ವರ್ಷದ ಹಾನ್ ಕಾಂಗ್‌ಗೆ ಸ್ವೀಡಿಷ್ ಅಕಾಡೆಮಿ ನೀಡಿತು. ಅವರ ಇತ್ತೀಚಿನ ಕಾದಂಬರಿ ‘ಐ ಡೋ ನಾಟ್ ಬಿಡ್ ಫೇರ್‌ವೆಲ್’ಗೆ 2023ರಲ್ಲಿ ಫ್ರಾನ್ಸ್‌ನಲ್ಲಿ ಮೆಡಿಸಿಸ್ ಪ್ರಶಸ್ತಿ ಮತ್ತು 2024ರಲ್ಲಿ ಎಮಿಲ್ ಗೈಮೆಟ್ ಪ್ರಶಸ್ತಿಯನ್ನು ನೀಡಲಾಯಿತು.
ಹಾನ್ ಕಾಂಗ್ 2016ರಲ್ಲಿ ‘ದಿ ವೆಜಿಟೇರಿಯನ್’ಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದರು. ಮಾಂಸಾಹಾರವನ್ನು ತಿನ್ನುವುದನ್ನು ನಿಲ್ಲಿಸುವ ಮಹಿಳೆಯ ನಿರ್ಧಾರವು ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುವ ಕತೆಯುಳ್ಳ ಕಾದಂಬರಿ ಇದಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ