ನವಾಜ್ ಷರೀಫ್ ಮೂರು ವರ್ಷಗಳ ಹಿಂದೆ ಪಾಕಿಸ್ತಾನವನ್ನು ತೊರೆದಿದ್ದೇಕೆ?, ಮುಂದಿನ ನಡೆ ಏನು?

Nawaz Sharif: ನವಾಜ್ ಷರೀಫ್  ಪಕ್ಷದ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ ಎಂದು ಪಿಎಂಎಲ್-ಎನ್ ನಾಯಕರೊಬ್ಬರು ಹೇಳಿದ್ದಾರೆ. ಷರೀಫ್ ಅವರು ನವೆಂಬರ್ 1990 ರಲ್ಲಿ ತಮ್ಮ 51 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಾದರು.

ನವಾಜ್ ಷರೀಫ್ ಮೂರು ವರ್ಷಗಳ ಹಿಂದೆ ಪಾಕಿಸ್ತಾನವನ್ನು ತೊರೆದಿದ್ದೇಕೆ?, ಮುಂದಿನ ನಡೆ ಏನು?
ನವಾಜ್ ಷರೀಫ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 21, 2023 | 5:32 PM

ಇಸ್ಲಾಮಾಬಾದ್ ಅಕ್ಟೋಬರ್ 21: ಕಳೆದ ನಾಲ್ಕು ವರ್ಷಗಳಿಂದ ಗಡೀಪಾರಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರು ಶನಿವಾರ ಇಸ್ಲಾಮಾಬಾದ್‌ಗೆ (Islamabad) ಮರಳಲಿದ್ದಾರೆ. ವರದಿಗಳ ಪ್ರಕಾರ, 73 ವರ್ಷದ ನಾಯಕ ದುಬೈನಿಂದ (ಅಹವೋ ಚಾರ್ಟರ್ಡ್ ವಿಮಾನದ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸಲಿದ್ದಾರೆ.

ನವಾಜ್ ಷರೀಫ್ ಈಗ ಪಾಕಿಸ್ತಾನಕ್ಕೆ ಮರಳಿದ ಉದ್ದೇಶ?

ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮೊದಲು ಇಸ್ಲಾಮಾಬಾದ್‌ಗೆ ಬಂದಿಳಿಯಲಿರುವ ನವಾಜ್ ಷರೀಫ್ ಅವರ ಜತಿ ಉಮ್ರಾ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ನಂತರ ಅವರು ಲಾಹೋರ್‌ನ ಮಿನಾರ್-ಇ-ಪಾಕಿಸ್ತಾನದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಿಎಂಎಲ್-ಎನ್ ಇನ್ನೂ ಜನಪ್ರಿಯ ಪಕ್ಷವಾಗಿದ್ದು, ನವಾಜ್ ಷರೀಫ್ ಪ್ರಮುಖ ನಾಯಕ ಎಂದು ಪಾಕಿಸ್ತಾನದ ಜನರಿಗೆ ತಿಳಿಸುವುದು ರ್ಯಾಲಿಯ ಉದ್ದೇಶವಾಗಿದೆ.

ನವಾಜ್ ಷರೀಫ್ ಅವರ ಮುಂದಿನ ನಡೆ?

ನವಾಜ್ ಷರೀಫ್  ಪಕ್ಷದ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ ಎಂದು ಪಿಎಂಎಲ್-ಎನ್ ನಾಯಕರೊಬ್ಬರು ಹೇಳಿದ್ದಾರೆ. ಷರೀಫ್ ಅವರು ನವೆಂಬರ್ 1990 ರಲ್ಲಿ ತಮ್ಮ 51 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಾದರು. ಸತತ ಮೂರು ಅವಧಿಗೆ (ನವೆಂಬರ್ 6, 1990 ರಿಂದ ಜುಲೈ 18, 1993 ರವರೆಗೆ – ಫೆಬ್ರವರಿ 17, 1997 ರಿಂದ ಅಕ್ಟೋಬರ್ 12, 1999 ರವರೆಗೆ – ಜೂನ್ 5, 2013 ರಿಂದ ಜುಲೈ 28, 2017 ರವರೆಗೆ) ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮೂರು ಅಧಿಕಾರಾವಧಿಯಲ್ಲಿ 9 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಷರೀಫ್ ನೆರೆಯ ಪಾಕ್ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ನವಾಜ್ ಷರೀಫ್ ರಾಜೀನಾಮೆ ನೀಡಿದ್ದು ಏಕೆ?

ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಅವರ ಹೆಸರು ಕೇಳಿಬಂದಿದ್ದರಿಂದ ನವಾಜ್ ಷರೀಫ್ ಅವರು 2017 ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪನಾಮ ಪೇಪರ್ಸ್, 11.5 ಮಿಲಿಯನ್ ಸೋರಿಕೆಯಾದ ದಾಖಲೆಗಳ ಸೆಟ್ ಆಗಿದ್ದು, ಷರೀಫ್ ಕುಟುಂಬ ಮತ್ತು ಸಾವಿರಾರು ಇತರರ ಸಂಪತ್ತಿನ ವಿವರಗಳನ್ನು ಒಳಗೊಂಡಿತ್ತು. ಆದರೆ, ತಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಷರೀಫ್ ಸಮರ್ಥಿಸಿಕೊಂಡಿದ್ದಾರೆ.

ನವಾಜ್ ಷರೀಫ್ ಪಾಕಿಸ್ತಾನ ತೊರೆದಿದ್ದು ಯಾಕೆ?

ಅಲ್-ಅಜೀಜಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ 7 ವರ್ಷಗಳ ಜೈಲು ಶಿಕ್ಷೆಯ ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ ನಂತರ, ಷರೀಫ್ ಅನಾರೋಗ್ಯದ ಚಿಕಿತ್ಸೆಗಾಗಿ ನವೆಂಬರ್ 2019 ರಲ್ಲಿ ಲಂಡನ್‌ಗೆ ತೆರಳಿದರು. ನಂತರ ಇಸ್ಲಾಮಾಬಾದ್‌ನ ಹೈಕೋರ್ಟ್‌ನಿಂದ ನಾಲ್ಕು ವಾರಗಳ ಕಾಲ ಜಾಮೀನು ನೀಡಲಾಯಿತು. ಆದಾಗ್ಯೂ, ಅವರು ಹಿಂತಿರುಗಲಿಲ್ಲ. ಆನಂತರ ಅಲ್-ಅಜಿಜಿಯಾ ಮತ್ತು ಅವೆನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರನ್ನು ಘೋಷಿತ ಅಪರಾಧಿ ಘೋಷಿಸಲಾಯಿತು. ಅಕ್ಟೋಬರ್ 19, 2023 ರಂದು, ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (NAB) ಮಾಜಿ-ಪ್ರಧಾನಿ ಸಲ್ಲಿಸಿದ ಅರ್ಜಿಗಳನ್ನು ವಿರೋಧಿಸುವುದನ್ನು ತಪ್ಪಿಸಿದ ನಂತರ ಎರಡೂ ಪ್ರಕರಣಗಳಲ್ಲಿ ಷರೀಫ್ ಅವರಿಗೆ ಅಕ್ಟೋಬರ್ 24 ರವರೆಗೆ ರಕ್ಷಣಾತ್ಮಕ ಜಾಮೀನು ನೀಡಲಾಯಿತು.

ಇದನ್ನೂ ಓದಿ: ನಾಲ್ಕು ವರ್ಷಗಳ ನಂತರ ಲಂಡನ್​​ನಿಂದ ಸ್ವದೇಶಕ್ಕೆ ಮರಳಿದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್

ಪಾಕಿಸ್ತಾನದಲ್ಲಿ ಯಾವುದೇ ಪ್ರಧಾನಿ ಪೂರ್ಣ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ

ಪಾಕಿಸ್ತಾನದ 75 ವರ್ಷಗಳ ಇತಿಹಾಸದಲ್ಲಿ ನವಾಜ್ ಷರೀಫ್ ಸೇರಿದಂತೆ ಯಾವುದೇ ಪ್ರಧಾನಿ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 1993 ರಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಮತ್ತು ಮಿಲಿಟರಿಯಿಂದ ಷರೀಫ್ ಸರ್ಕಾರವನ್ನು ವಜಾಗೊಳಿಸಲಾಯಿತು. 1999 ರಲ್ಲಿ, ಪರ್ವೇಜ್ ಮುಷರಫ್ ದಂಗೆಯಲ್ಲಿ ಷರೀಫ್ ಸರ್ಕಾರವನ್ನು ಉರುಳಿಸಲಾಯಿತು. 2017 ರಲ್ಲಿ, ಷರೀಫ್ ಅವರು ಸುಪ್ರೀಂಕೋರ್ಟ್‌ನಿಂದ ಸಾರ್ವಜನಿಕ ಹುದ್ದೆಯನ್ನು ಹೊಂದಲು ಅನರ್ಹಗೊಂಡ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ