US Winter Storm: ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ; -48 ಡಿಗ್ರಿಗೆ ಕುಸಿದ ಉಷ್ಣಾಂಶ, ವಿದ್ಯುತ್ ಕಡಿತದಿಂದ ಬದುಕು ಅಸ್ತವ್ಯಸ್ತ
America Bomb Cyclone: ಕೆಲವೆಡೆ ಉಷ್ಣಾಂಶ ಪ್ರಮಾಣವು - 48 ಡಿಗ್ರಿ ಸೆಲ್ಷಿಯಸ್ನಷ್ಟು ಕುಸಿದಿದೆ. ಕುದಿಯುತ್ತಿರುವ ನೀರು ಸಹ ಒಲೆಯಿಂದ ಕೆಳಗೆ ಇಳಿಸಿದ ತಕ್ಷಣ ಮಂಜುಗಡ್ಡೆಯಾಗುತ್ತಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ (America) ಶುಕ್ರವಾರ (ಡಿ 23) ಬೀಸಿದ ಮಾರಣಾಂತಿಕ ಶೀತಗಾಳಿಯಿಂದ (Winter Storms) ಸುಮಾರು 15 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವು ಹೆದ್ದಾರಿಗಳನ್ನು ಮುಚ್ಚಲಾಗಿದ್ದು, ಸಾವಿರಾರು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಅಮೆರಿಕದಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯವಾರದಲ್ಲಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಂಭ್ರಮ ಮನೆಮಾಡುವುದು ವಾಡಿಕೆ. ಕ್ರಿಸ್ಮಸ್ ಟ್ರಿಪ್ಗಾಗಿ ವಿಮಾನಗಳಲ್ಲಿ ಸೀಟುಗಳನ್ನು ಕಾದಿರಿಸಿದ್ದವರು ಸಂಚಾರ ವ್ಯತ್ಯಯದಿಂದ ನಿರಾಸೆ ಅನುಭವಿಸಬೇಕಾಗಿದೆ.
ಭಾರೀ ಹಿಮಪಾತ, ವೇಗದ ಬಿರುಗಾಳಿಯಿಂದಾಗಿ ವಿಮಾನ ಸಂಚಾರ ದುಸ್ತರವಾಯಿತು. ಕುದಿಯುತ್ತಿರುವ ನೀರು ಸಹ ಒಲೆಯಿಂದ ಕೆಳಗೆ ಇಳಿಸಿದ ತಕ್ಷಣ ಮಂಜುಗಡ್ಡೆಯಾಗುತ್ತಿತ್ತು. ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ಇದೆಯಾದರೂ, ದಕ್ಷಿಣ ಭಾಗದಲ್ಲಿ ಪರಿಸ್ಥಿತಿ ವಿಷಮಿಸಿದೆ. ಅಮೆರಿಕದ ಸುಮಾರು 24 ಕೋಟಿ ಜನರು ಅಂದರೆ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ಇದೀಗ ಶೀತಗಾಳಿಯಿಂದ ಸಂತ್ರಸ್ತರಾಗಿದ್ದಾರೆ. ಕೆಲವೆಡೆ ಉಷ್ಣಾಂಶ ಪ್ರಮಾಣವು – 48 ಡಿಗ್ರಿ ಸೆಲ್ಷಿಯಸ್ನಷ್ಟು ಕುಸಿದಿದೆ.
ಶತಮಾನದ ಭೀಕರ ವಿದ್ಯಮಾನ
ಈ ಶೀತಬೀರುಗಾಳಿಯನ್ನು ‘ಬಾಂಬ್ ಸೈಕ್ಲೋನ್’ ಎಂದು ಕರೆಯಲಾಗುತ್ತಿದೆ. ಅಮೆರಿಕದ ನ್ಯೂಯಾರ್ಕ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಏಕಾಏಕಿ ಜೋರಾಗಿ ಗಾಳಿ ಬೀಳಿ, ಉಷ್ಣಾಂಶ ತೀವ್ರವಾಗಿ ಕುಸಿಯಿತು. ರಸ್ತೆಗಳು ಹಿಮದಿಂದ ಮುಚ್ಚಿಹೋದವು. ಒಮ್ಮೆಲೆ ಹಿಮ ಸುರಿದ ಕಾರಣ ಜನರು ಶೀತಮಾರುತಗಳಿಗೆ ತಕ್ಕಷ್ಟು ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಿರುಗಾಳಿಯಿಂದಾಗಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಮನೆ, ಹೊಟೆಲ್ ಮತ್ತು ಸಮುದಾಯ ಕೇಂದ್ರಗಳಲ್ಲಿರುವ ಹೀಟರ್ಗಳೂ ಕೆಲಸ ಮಾಡುವುದು ನಿಲ್ಲಿಸಿದ್ದರೆ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು.
ಹಠಾತ್ ಬಿರುಗಾಳಿಯಿಂದಾಗಿ ದೇಶದ ವಿವಿಧೆಡೆ 4,600 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣಕ್ಕೆ ಇವರು ವಿಮಾನ ನಿಲ್ದಾಣಗಳಿಂದ ಹೊರಡುವುದು ಕಷ್ಟ ಎಂದು ಹೇಳಲಾಗಿದೆ. ಈ ಶೀತ ಬಿರುಗಾಳಿಯು ಸುಮಾರು 2,000 ಮೈಲಿಯಷ್ಟು (3,218 ಕಿಮೀ) ವ್ಯಾಪ್ತಿ ಹೊಂದಿತ್ತು. ಮುಂದಿನ ಸೂಚನೆಯವರೆಗೆ ಕಾರುಗಳನ್ನು ರಸ್ತೆಗೆ ಇಳಿಸಬಾರದು. ದೇಶದ ಮಧ್ಯ ಮತ್ತು ಪೂರ್ವಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮಿಸಬಹುದು ಎಂದು ಅಮೆರಿಕ ಸರ್ಕಾರವು ಸಾರ್ವಜನಿಕರಿಗೆ ಸೂಚನೆ ನೀಡಿದೆ.
RT @AFP: The extreme cold weather hitting North America in the run-up to Christmas holidays is due to a phenomenon called a “bomb cyclone” https://t.co/AIX0pCXgN3 #AFPGraphics pic.twitter.com/A3OnbG1eaM
— AFP Graphics RT (@AFPGraphicsRT) December 23, 2022
ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 am, Sat, 24 December 22