1.5 ಲಕ್ಷ ರೂ. ಬೆಲೆಯ ಐಫೋನ್​ ಆನ್​​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆ; ಮನೆಗೆ ಬಂದ ಬಾಕ್ಸ್ ತೆರೆದಾಗ ಆಗಿತ್ತು ನಿರಾಸೆ !

| Updated By: Lakshmi Hegde

Updated on: Feb 08, 2022 | 11:19 AM

ಘಟನೆಯ ಬಗ್ಗೆ ಆ್ಯಪಲ್ ಇನ್​ಸೈಡರ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಆ್ಯಪಲ್​ ಕಂಪನಿಯಿಂದ ಇಂಥ ಪ್ರಮಾದ ಆಗಿರಲು ಸಾಧ್ಯವೇ ಇಲ್ಲ. ಇದು ಆನ್​ಲೈನ್​ ಡೆಲಿವರಿ ಸಂಸ್ಥೆಯಿಂದಲೇ ಆಗಿರುವ ತಪ್ಪು ಎಂದಿದೆ.

1.5 ಲಕ್ಷ ರೂ. ಬೆಲೆಯ ಐಫೋನ್​ ಆನ್​​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆ; ಮನೆಗೆ ಬಂದ ಬಾಕ್ಸ್ ತೆರೆದಾಗ ಆಗಿತ್ತು ನಿರಾಸೆ !
ಪ್ರಾತಿನಿಧಿಕ ಚಿತ್ರ
Follow us on

ಇ-ಕಾಮರ್ಸ್​​ ಆನ್​ಲೈನ್​ ವೆಬ್​ಸೈಟ್​ಗಳು ಎಷ್ಟು ಅನುಕೂಲಕರವೋ ಅಷ್ಟೇ ಎಡವಟ್ಟುಗಳಿಗೂ ಕಾರಣವಾಗುತ್ತವೆ. ಆರ್ಡರ್ ಮಾಡಿದ್ದೇ ಒಂದು, ಬಂದಿದ್ದು ಇನ್ನೊಂದು ಎಂಬ ಅನುಭವವನ್ನು ಹಲವು ಗ್ರಾಹಕರು ಈಗಾಗಲೇ ಪಡೆದಿದ್ದಾರೆ. ಅದೆಷ್ಟೋ ಜನರು ಅಮೂಲ್ಯವಾದ ವಸ್ತುಗಳನ್ನು ಆರ್ಡರ್ ಮಾಡಿ, ಆನ್​​ಲೈನ್​ನಲ್ಲೇ ದುಡ್ಡೂ ತುಂಬಿ, ಬಳಿಕ ಅದರ ಬದಲಿಗೆ ಯಾವ್ಯಾವುದೋ ಚಿಕ್ಕಪುಟ್ಟ ವಸ್ತುಗಳನ್ನು ಪಡೆದ ಬಗ್ಗೆಯೂ ವರದಿಯಾಗಿದೆ. ಹಾಗೇ ಇದೀಗ ಲಂಡನ್​ ಮೂಲದ ಮಹಿಳೆಯೊಬ್ಬರು ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಆ್ಯಪಲ್​ ಐಫೋನ್​​ ಆರ್ಡರ್​ ಮಾಡಿದ್ದರು. ಆದರೆ ಮನೆಬಾಗಿಲಿಗೆ ಬಂದ ಬಾಕ್ಸ್ ತೆರೆದಾಗ ಅದರಲ್ಲಿ 1 ರೂಪಾಯಿ ಬೆಲೆಯ ಹ್ಯಾಂಡ್​ ಸೋಪ್​ ಇತ್ತು. ಅದನ್ನು ನೋಡಿ ಮಹಿಳೆ ಶಾಕ್​ ಆಗಿದ್ದಾರೆ

ಮಹಿಳೆಯ ಹೆಸರು ಖೌಲಾ ಲಫಾಯಿಲಿ. ಸ್ಥಳೀಯವಾಗಿ ಇರುವ ಒಂದು ಪ್ರತಿಷ್ಠಿತ ಆನ್​ ಲೈನ್ ಸಂಸ್ಥೆಯಿಂದ ಐಫೋನ್​ 13 ಪ್ರೋ ಮ್ಯಾಕ್ಸ್​ ಆರ್ಡರ್​ ಮಾಡಿ, ಫುಲ್​ ಖುಷಿಯಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದು, ಮನೆ ಬಾಗಿಲಿಗೆ ಬಾಕ್ಸ್​ ಬಂತು. ಅದನ್ನು ತೆರೆದಾಗ ಮಹಿಳೆ ಅಕ್ಷರಶಃ ಶಾಕ್​ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಐಫೋನ್ ಬದಲಿಗೆ 1 ರೂಪಾಯಿಯ ಹ್ಯಾಂಡ್​ ಸೋಪ್​ ಬಾಟಲಿ ಇತ್ತು. ಅಂದರೆ ಅದು ಕೈತೊಳೆಯುವ ಒಂದು ಸೋಪಿನ ಬಾಟಲಿಯಾಗಿತ್ತು. ಸೋಪ್​ ಖಾಲಿಯಾದಂತೆ ಮತ್ತೆ ತುಂಬಿ ಅದರಿಂದ ಕೈ ವಾಶ್​ ಮಾಡಬಹುದು.

ಘಟನೆಯ ಬಗ್ಗೆ ಆ್ಯಪಲ್ ಇನ್​ಸೈಡರ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಆ್ಯಪಲ್​​ ಸಂಸ್ಥೆಯ ಅಪ್​ಡೇಟ್​ಗಳು, ಮತ್ತಿತರ ವಿಷಯಗಳನ್ನು ಪ್ರಕಟಿಸುವ ಮಾಧ್ಯಮವಾಗಿರುವ ಆ್ಯಪಲ್​ ಇನ್​ಸೈಡರ್​, ಆ್ಯಪಲ್​ ಕಂಪನಿಯಿಂದ ಇಂಥ ಪ್ರಮಾದ ಆಗಿರಲು ಸಾಧ್ಯವೇ ಇಲ್ಲ. ಇದು ಆನ್​ಲೈನ್​ ಡೆಲಿವರಿ ಸಂಸ್ಥೆಯಿಂದಲೇ ಆಗಿರುವ ತಪ್ಪು ಎಂದಿದೆ. ಇನ್ನು ಮಹಿಳೆ ಸ್ಕೈಮೊಬೈಲ್​ನಿಂದ ಖರೀದಿಸಿ, ಆರ್ಡರ್ ಹಾಕಿದ್ದರು.  ಮಹಿಳೆ ಪೂರ್ಣ ಪ್ರಮಾಣದ ಹಣವನ್ನು ಪಾವತಿಸಿರಲಿಲ್ಲ. ಆರ್ಡರ್ ಹಾಕಿದ ಮರುದಿನ ಮೊಬೈಲ್​ ಡೆಲಿವರಿ ಆಗುವಂತೆ ಮಹಿಳೆ ಆಯ್ಕೆ ಮಾಡಿಕೊಂಡಿದ್ದರು. ಆದರೆ ಎರಡು ದಿನ ಬಿಟ್ಟು ಅವರಿಗೆ ಮೊಬೈಲ್​ ತಲುಪಿದೆ. ಕಾರಣ ಕೇಳಿದ್ದಕ್ಕೆ, ನಾನು ಟ್ರಾಫಿಕ್​​ನಲ್ಲಿ ಸಿಕ್ಕಿದ್ದೆ, ಹಾಗಾಗಿ ಸರಿಯಾದ ಸಮಯಕ್ಕೆ ನಿಮ್ಮ ವಸ್ತುವನ್ನು ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಡೆಲಿವರಿ ಸಿಬ್ಬಂದಿ ಹೇಳಿದ್ದಾನೆ ಎಂದು ಆ್ಯಪಲ್ ಇನ್​ಸೈಡರ್​ ತನ್ನ ವರದಿಯಲ್ಲಿ ಹೇಳಿದೆ.

ಅಷ್ಟೇ ಅಲ್ಲ, ಈ ಡೆಲಿವರಿ ಸಿಬ್ಬಂದಿ, ಖೌಲಾ ಲಫಾಯಿಲಿ ಮನೆಗೆ ಒಮ್ಮೆ ಭೇಟಿ ಮಾಡಿದ್ದಾನೆ. ಆದರೆ ಅವರ ಮನೆಯ ಮುಚ್ಚಿದ ಬಾಗಿಲ ಫೋಟೋ ತೆಗೆದು, ಗ್ರಾಹಕರು ಮನೆಯಲ್ಲಿಲ್ಲ ಎಂದು ತನ್ನ ಸಂಸ್ಥೆಗೆ ಅಪ್​ಡೇಟ್ ಕೊಟ್ಟಿದ್ದಾನೆ ಎಂಬುದೂ ಬೆಳಕಿಗೆ ಬಂದಿದೆ.  ನಾನು ಎಲ್ಲಿಗೂ ಹೋಗಿರಲಿಲ್ಲ. ಬಾಗಿಲು ಬಡಿದಿದ್ದರೆ ತೆಗೆಯುತ್ತಿದ್ದೆ. ಆದರೆ ಆತ ಬಾಗಿಲು ಬಡಿಯಲಿಲ್ಲ ಎಂದು ಖೌಲಾ ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ, ಆಕೆ ಯಾವ ಆನ್​ಲೈನ್​ ಕಂಪನಿ ಮೂಲಕ ಆರ್ಡರ್​ ಹಾಕಿದ್ದರೋ, ಆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. (ಈಕೆ ಆರ್ಡರ್​ ಮಾಡಿದ ಐಫೋನ್ ಬೆಲೆ ಯುಕೆನಲ್ಲಿ 1.5 ಲಕ್ಷ ರೂ.ಆಗಿದ್ದು, ಭಾರತದಲ್ಲಿ 1,29,900 ರೂಪಾಯಿಗೆ ಮಾರಾಟವಾಗುತ್ತಿದೆ.)

ಇದನ್ನೂ ಓದಿ: ವಾಕಿಂಗ್ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಐಫೋನ್ ಕಿತ್ಕೊಂಡು ಪರಾರಿಯಾದ ಖದೀಮರು, ಕೇಸ್ ದಾಖಲು

Published On - 9:51 am, Tue, 8 February 22