
ಅಂತೂ ಇಂತೂ ಜಾಗತಿಕ ಮಟ್ಟದಲ್ಲಿ ಈ ವರ್ಷದ ಅತ್ಯಂತ ರೋಚಕ ಚುನಾವಣೆಯಾಗಿ ಮಾರ್ಪಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಅತ್ಯಂತ ಕಿರಿಯ ಸೆನೆಟರ್ ಎಂಬ ಖ್ಯಾತಿ ಪಡೆದಿದ್ದ ಬೈಡನ್ ಇದೀಗ ಅತಿ ಹಿರಿಯ ಅಮೆರಿಕ ಅಧ್ಯಕ್ಷರಾಗಿ ಹೊಸ ದಾಖಲೆ ಬರೆದಿದ್ದಾರೆ. ಜೊತೆಗೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸಹ ದೇಶದ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ರ ಗೆಲುವನ್ನು ಅಭಿನಂದಿಸಿ ಜಗತ್ತಿನೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಟ್ವಿಟರ್ ಮೂಲಕ ಬೈಡನ್ ಹಾಗೂ ಹ್ಯಾರಿಸ್ಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸಲು ಒಟ್ಟಿಗೆ ಶ್ರಮಿಸೋಣ ಎಂದು ಬೈಡನ್ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
ಜೊತೆಗೆ, ಕಮಲ್ ಹ್ಯಾರಿಸ್ರನ್ನು ಸಹ ಅಭಿನಂದಿಸಿದ ಪ್ರಧಾನಿ ಮೋದಿ ನಿಮ್ಮ ಗೆಲುವು ಅಮೆರಿಕಾದಲ್ಲಿರುವ ಎಲ್ಲಾ ಭಾರತೀಯ ಸಂಜಾತರಿಗೆ ಹೆಮ್ಮೆ ತರುವಂಥ ವಿಷಯ ಎಂದು ಸಹ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ, ಇಂಗ್ಲೆಂಡ್ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಸೇರಿದಂತೆ ವಿಶ್ವದ ಹಲವು ನಾಯಕರು ಬೈಡನ್ ಹಾಗೂ ಕಮಲಾ ಹ್ಯಾರಿಸ್ಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ.
ಸ್ವಾರಸ್ಯಕರ ಸಂಗತಿಯೆಂದರೆ, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಬೈಡನ್ರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಅಮೆರಿಕ ಜೊತೆಗಿನ ನಮ್ಮ ಸಂಬಂಧ ಹಾಗೂ ತಾಂತ್ರಿಕ ಸಹಯೋಗ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಈ ಹಿಂದೆ, ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜೋ ಬೈಡನ್ ಹಾಗೂ ಅವರ ಪುತ್ರ ಹಂಟರ್ರನ್ನು ಯುಕ್ರೇನ್ನ ಭ್ರಷ್ಟಚಾರದ ಪ್ರಕರಣ ಒಂದರಲ್ಲಿ ಸಿಲುಕಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.