World Most Liveable City: ವಿಶ್ವದಲ್ಲಿ ವಾಸಿಸಲು ಅತ್ಯಂತ ಯೋಗ್ಯವಾದ ನಗರ ಯಾವುದು ಗೊತ್ತಾ?

| Updated By: ಸುಷ್ಮಾ ಚಕ್ರೆ

Updated on: Jun 23, 2022 | 2:57 PM

ಈ ಹಿಂದೆ 2018 ಮತ್ತು 2019ರಲ್ಲಿ ವಿಯೆನ್ನಾ ಜಗತ್ತಿನ ವಾಸಯೋಗ್ಯ ನಗರಗಳ ಪೈಕಿ ಮೊದಲ ಸ್ಥಾನವನ್ನು ಹೊಂದಿತ್ತು. ಬಳಿಕ ಶ್ರೇಯಾಂಕದಲ್ಲಿ ಕೆಳಗೆ ಕುಸಿದಿದ್ದ ವಿಯೆನ್ನಾ ಈ ವರ್ಷ ಮತ್ತೆ ಮೊದಲ ಸ್ಥಾನಕ್ಕೇರಿದೆ.

World Most Liveable City: ವಿಶ್ವದಲ್ಲಿ ವಾಸಿಸಲು ಅತ್ಯಂತ ಯೋಗ್ಯವಾದ ನಗರ ಯಾವುದು ಗೊತ್ತಾ?
ವಿಯೆನ್ನಾ
Follow us on

ಬೆಂಗಳೂರು ಸೇರಿದಂತೆ ಜಗತ್ತಿನ ಅನೇಕ ನಗರಗಳಲ್ಲಿ ವಾಸವಾಗಲು ಜನರು ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಆದರೆ, ಜನರಿಗೆ ವಾಸಿಸಲು ಅತ್ಯಂತ ಯೋಗ್ಯವಾದ ವಾತಾವರಣ, ಮೂಲಭೂತ ಸೌಕರ್ಯಗಳು ಇತ್ಯಾದಿ ಸೌಲಭ್ಯವನ್ನು ಒದಗಿಸುವ ನಗರಗಳು ಯಾವುವು ಎಂದು ಪಟ್ಟಿ ಮಾಡಲಾಗಿದೆ. ಇಂದು ಪ್ರಕಟವಾದ ಎಕನಾಮಿಸ್ಟ್‌ನ ವಾರ್ಷಿಕ ವರದಿಯ ಪ್ರಕಾರ, ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ (Vienna) ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಈ ಮೊದಲು ವಿಶ್ವದ ಅತಿ ವಾಸಯೋಗ್ಯ ನಗರಗಳಲ್ಲಿ ಕೀವ್ ನಗರ ಕೂಡ ಸ್ಥಾನ ಪಡೆದಿತ್ತು. ಆದರೆ, ಫೆಬ್ರವರಿ ಅಂತ್ಯದಲ್ಲಿ ರಷ್ಯಾ ಉಕ್ರೇನ್ ದೇಶವನ್ನು ಆಕ್ರಮಿಸಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಎದುರಾಗಿದ್ದು, ಉಕ್ರೇನಿಯನ್ ರಾಜಧಾನಿ ಕೀವ್ ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ರಷ್ಯಾದ ನಗರಗಳಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ವರದಿಯ ಪ್ರಕಾರ, ಕೊರೋನಾವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 34ನೇ ಸ್ಥಾನಕ್ಕೆ ಕುಸಿದ ಆಕ್ಲೆಂಡ್‌ನಿಂದ ವಿಯೆನ್ನಾ ಮೊದಲ ಸ್ಥಾನವನ್ನು ಕಸಿದುಕೊಂಡು ತಾನು ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಬಿರುದು ಪಡೆದುಕೊಂಡಿದೆ.

ಇದನ್ನೂ ಓದಿ: QS World University Rankings: ಜಗತ್ತಿನ ಟಾಪ್ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ IISc

2021ರ ಆರಂಭದಲ್ಲಿ ವಸ್ತುಸಂಗ್ರಹಾಲಯಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಿದ್ದರಿಂದ ಈ ಶ್ರೇಯಾಂಕದಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದ ವಿಯೆನ್ನಾ ಇದೀಗ ಮತ್ತೆ ಮೊದಲ ಸ್ಥಾನಕ್ಕೆ ಮರಳಿದೆ. ಈ ಹಿಂದೆ 2018 ಮತ್ತು 2019ರಲ್ಲಿ ವಿಯೆನ್ನಾ ಜಗತ್ತಿನ ವಾಸಯೋಗ್ಯ ನಗರಗಳ ಪೈಕಿ ಮೊದಲ ಸ್ಥಾನವನ್ನು ಹೊಂದಿತ್ತು. ಸ್ಥಿರತೆ ಮತ್ತು ಉತ್ತಮ ಮೂಲಸೌಕರ್ಯವು ವಿಯೆನ್ನಾದ ನಿವಾಸಿಗಳಿಗೆ ನಗರದ ಪ್ರಮುಖ ಆಕರ್ಷಣೆಯಾಗಿದೆ. ಉತ್ತಮ ಆರೋಗ್ಯ ರಕ್ಷಣೆ ಮತ್ತು ಸಂಸ್ಕೃತಿ ಮತ್ತು ಮನರಂಜನೆಗಾಗಿ ಜನರು ಈ ನಗರವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ವಿಶ್ವದ ಅತಿ ವಾಸಯೋಗ್ಯ ನಗರಗಳ ಪೈಕಿ ಮೊದಲ ಹತ್ತು ನಗರಗಳಲ್ಲಿ ಆರು ನಗರಗಳು ಯುರೋಪ್ ಖಂಡದ್ದಾಗಿದೆ ಎಂಬುದು ವಿಶೇಷ. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಮೊದಲ ಸ್ಥಾನ ಪಡೆದಿದ್ದರೆ, ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ಮತ್ತು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ 2ನೇ ಮತ್ತು 3ನೇ ಸ್ಥಾನ ಪಡೆದಿವೆ. ಸ್ವಿಸ್ ನಗರ ಜಿನೀವಾ ಆರನೇ ಸ್ಥಾನ, ಜರ್ಮನಿಯ ಫ್ರಾಂಕ್‌ಫರ್ಟ್ ಏಳನೇ ಮತ್ತು ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್ 9ನೇ ಸ್ಥಾನ ಗಳಿಸಿದೆ. ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ಕಳೆದ ವರ್ಷಕ್ಕಿಂತ 23 ಸ್ಥಾನ ಮೇಲೇರಿ 19ನೇ ಸ್ಥಾನ ಪಡೆದುಕೊಂಡಿದೆ. ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ 24ನೇ ಸ್ಥಾನದಲ್ಲಿದೆ.

ಯುನೈಟೆಡ್ ಕಿಂಗ್‌ಡಮ್‌ನ ರಾಜಧಾನಿ ಲಂಡನ್ ವಿಶ್ವದ 33ನೇ ಅತಿ ಹೆಚ್ಚು ವಾಸಯೋಗ್ಯ ನಗರವಾಗಿದ್ದು, ಸ್ಪೇನ್‌ನ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ಕ್ರಮವಾಗಿ 35 ಮತ್ತು 43ನೇ ಸ್ಥಾನ ಪಡೆದಿವೆ. ಇಟಲಿಯ ಮಿಲನ್ 49ನೇ ಸ್ಥಾನದಲ್ಲಿದೆ. ಅಮೆರಿಕಾದ ನ್ಯೂಯಾರ್ಕ್ 51 ಮತ್ತು ಚೀನಾದ ಬೀಜಿಂಗ್ 71ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಯಾವ ನಗರವೂ ಸ್ಥಾನ ಪಡೆದಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Thu, 23 June 22