ಬೀಜಿಂಗ್: ಸದ್ಯ ಕೊವಿಡ್ ಸೋಂಕಿನಿಂದ ತಲ್ಲಣಿಸಿರುವ ವಿಶ್ವ ಮತ್ತೆ ದೃಢ ವಿಶ್ವಾಸದಿಂದ ಹೋರಾಡುತ್ತಿರುವ ಹೊತ್ತಲ್ಲೇ ಚೀನಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಹಕ್ಕಿಜ್ಚರದ ರೂಪಾಂತರಿ ತಳಿ H10 N3 ವೈರಸ್ ಇದೇ ಮೊದಲ ಬಾರಿಗೆ ಮಾನವನಲ್ಲಿ ಪತ್ತೆಯಾಗಿದ್ದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಮಾಹಿತಿಯನ್ನು ಖಚಿತಪಡಿಸಿದೆ.
ಏಪ್ರಿಲ್ 28ರಂದು ಜ್ವರ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿಗೆ ಹಕ್ಕಿಜ್ಚರದ ರೂಪಾಂತರಿ ತಳಿ H10 N3 ಇರುವುದು ದೃಢಪಟ್ಟಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಕುರಿತು ಪ್ರಕಟಣೆ ನೀಡಿದ್ದರೂ, ಹಕ್ಕಿಜ್ವರದ ರೂಪಾಂತರಿ ತಳಿ ವೈರಸ್ ವ್ಯಕ್ತಿಗೆ ತಗುಲಿದ್ದು ಹೇಗೆ ಎಂಬ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಎಚ್ 10 ಎನ್ 3 ವೈರಸ್ ಕಡಿಮೆ ರೋಗಕಾರಕ ಗುಣಗಳನ್ನು ಹೊಂದಿದ್ದು ಇತರ ರೋಗಕಾರಕ ವೈರಸ್ಗಳಿಗೆ ಹೋಲಿಸಿದರೆ ಅಷ್ಟೇನೂ ತೀವ್ರತರವಾದುದ್ದಲ್ಲ. ಕೋಳಿಮಾಂಸದಲ್ಲಿ ಕಂಡುಬರುವ ವೈರಸ್ ತಳಿ ಇದಾಗಿದ್ದು ವ್ಯಾಪಕವಾಗಿ ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಹೇಳಲಾಗಿದೆ. ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು, ಮರಳಿ ಮನೆಗೆ ತೆರಳಲು ಸನ್ನದ್ಧರಾಗಿದ್ದಾರೆ. ಅವರ ಸಂಪರ್ದಲ್ಲಿರುವ ವ್ಯಕ್ತಿಗಳಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ತಿಳಿಸಿದೆ. ಆದರೆ ಹಕ್ಕಿಜ್ವರದ ಎಚ್7 ಎನ್ 7 ತಳಿ 2016-17ನೇ ಸಾಲಿನಲ್ಲಿ ವಿಶ್ವದಾದ್ಯಂತ ಒಟ್ಟು 300 ಜನರ ಸಾವಿಗೆ ಕಾರಣವಾಗಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ಇದನ್ನೂ ಓದಿ: ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್ ಮೂಲಕ ಸೋಂಕಿತರ ಕಾಳಜಿ
(Worlds first H10N3 Bird flu found in China man)