ಪ್ರಾಣಿಗಳಿಗೆ ಹಿಂಸೆ ಕೊಡುವವರು ಜೀವನಪರ್ಯಂತ ಯಾವುದೇ ಪ್ರಾಣಿ ಸಾಕುವಂತಿಲ್ಲ; ಹೊಸ ನಿಯಮ ತಂದ NSW

TV9kannada Web Team

TV9kannada Web Team | Edited By: Skanda

Updated on: Jun 12, 2021 | 1:53 PM

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದಲ್ಲಿ ಮೂಕ ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಹೊಸ ನಿಯಮವನ್ನೇ ಜಾರಿಗೊಳಿಸಿದ್ದಾರೆ. ಅದರನ್ವಯ ಯಾವ ವ್ಯಕ್ತಿಯ ಮೇಲೆ ಪ್ರಾಣಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಕರಣ ದಾಖಲಾಗುತ್ತದೋ ಆ ವ್ಯಕ್ತಿ ಜೀವನಪರ್ಯಂತ ಪ್ರಾಣಿ ಸಾಕಾಣಿಕೆ ಮಾಡುವಂತಿಲ್ಲ.

ಪ್ರಾಣಿಗಳಿಗೆ ಹಿಂಸೆ ಕೊಡುವವರು ಜೀವನಪರ್ಯಂತ ಯಾವುದೇ ಪ್ರಾಣಿ ಸಾಕುವಂತಿಲ್ಲ; ಹೊಸ ನಿಯಮ ತಂದ  NSW
ಸಾಂಕೇತಿಕ ಚಿತ್ರ

ಮನುಷ್ಯ ಎಷ್ಟೇ ಬುದ್ಧಿಜೀವಿ ಎಂದೆನಿಸಿಕೊಂಡರೂ ಆತ ತೋರಿಸುವ ದುರ್ಬುದ್ಧಿ ಮಿಕ್ಕೆಲ್ಲಾ ಜೀವಿಗಳ ಬದುಕನ್ನೂ ಹದಗೆಡಿಸಬಲ್ಲದು. ಮೂಕ ಪ್ರಾಣಿಗಳನ್ನು ಗೋಳು ಹೊಯ್ದುಕೊಳ್ಳುವ ಕೆಲವರು ತಾವು ಸಾಕಿದ್ದೇವೆ ಎಂಬ ಒಂದೇ ಒಂದು ದಾರ್ಷ್ಟ್ಯಕ್ಕೆ ಅವುಗಳನ್ನು ಹಿಂಸಿಸುವ ಪರಿ ನೋಡಿದರೆ ಸಂಕಟವಾಗುತ್ತದೆ. ಇದೇ ಕಾರಣಕ್ಕಾಗಿ ಇಂದು ವಿಶ್ವದಾದ್ಯಂತ ಪ್ರಾಣಿ ದಯಾ ಸಂಘಟನೆಗಳು ತಲೆಯೆತ್ತಿದ್ದು ಅವುಗಳ ಮೇಲಾಗುವ ದೌರ್ಜನ್ಯ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದಲ್ಲಿ ಮೂಕ ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಹೊಸ ನಿಯಮವನ್ನೇ ಜಾರಿಗೊಳಿಸಿದ್ದಾರೆ. ಅದರನ್ವಯ ಯಾವ ವ್ಯಕ್ತಿಯ ಮೇಲೆ ಪ್ರಾಣಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಕರಣ ದಾಖಲಾಗುತ್ತದೋ ಆ ವ್ಯಕ್ತಿ ಜೀವನಪರ್ಯಂತ ಪ್ರಾಣಿ ಸಾಕಾಣಿಕೆ ಮಾಡುವಂತಿಲ್ಲ.

ಕಳೆದ ಎರಡು ವರ್ಷಗಳಿಂದ ಈ ರೀತಿಯ ನಿಯಮ ತರಬೇಕೆಂದು ಅಲ್ಲಿನ ಸ್ಟೇಟ್ ಅನಿಮಲ್​ ಜಸ್ಟೀಸ್ ಪಾರ್ಟಿಯ ಸಂಸದೆ ಎಮ್ಮಾ ಹರ್ಸ್ಟ್ ನಿರಂತರ ಅಭಿಯಾನ ನಡೆಸಿದ್ದು, ಅದರ ಫಲವಾಗಿ ಈಗ ಅಧಿಕೃತವಾಗಿ ಕಾನೂನು ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಎಮ್ಮಾ, ನ್ಯೂ ಸೌತ್ ವೇಲ್ಸ್ ಪ್ರಾಂತ್ಯದಲ್ಲಿ ಸಾಕು ಪ್ರಾಣಿಗಳ ಮೇಲೆ ಎಷ್ಟೊಂದು ಗಂಭೀರ ದೌರ್ಜನ್ಯಗಳು ನಡೆದರೂ ಇಲ್ಲಿಯ ತನಕ ಯಾರೂ ಅಂತಹವರಿಗೆ ಪ್ರಾಣಿ ಸಾಕುವ ಮಾನ್ಯತೆಯನ್ನು ರದ್ದುಪಡಿಸಿರಲಿಲ್ಲ ಎನ್ನುವುದು ಬೇಸರದ ಸಂಗತಿ. ಆದರೆ, ಈಗಲಾದರೂ ಆಯಿತಲ್ಲಾ ಎಂದು ಸಮಾಧಾನವಿದೆ. ಇನ್ನುಮುಂದೆ ಯಾರು ತಪ್ಪೆಸಗುತ್ತಾರೋ ಅವರು ಪ್ರಾಣಿಗಳೊಂದಿಗೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವುದಾಗಲೀ, ಅವುಗಳನ್ನು ಸಾಕುವುದಾಗಲೀ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಒಂದು ಘಟನೆಯಲ್ಲಿ ಸಿಡ್ನಿಯ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ನಾಯಿಗೆ ಆರು ಬಾರಿ ಚಾಕುವಿನಿಂದ ಇರಿದು ಕೊಂದ ವ್ಯಕ್ತಿ, ನಂತರ ಅದನ್ನು ಮರಕ್ಕೆ ನೇತು ಹಾಕಿದ್ದ. ಅಂತಹ ಪೈಶಾಚಿಕ ಕೃತ್ಯವೆಸಗಿದ್ದಕ್ಕೆ ಆತನಿಗೆ ಜೈಲು ಶಿಕ್ಷೆ ವಿಧಿಸಲಾಯಿತಾದರೂ ಹೊರಬಂದ ನಂತರ ಮತ್ತೆ ಪ್ರಾಣಿಗಳೊಂದಿಗೆ ಕೆಲಸ ಮಾಡಲು ಅವಕಾಶ ಗಿಟ್ಟಿಸಿಕೊಂಡ. ಅದೇ ರೀತಿ ಕಾಂಗರೂವನ್ನು ಕೊಂದು ಅದರ ಮರಿಗೆ ಬಾಣದಿಂದ ಚುಚ್ಚಿದವರಿಗೂ ಜೀವಮಾನವಿಡೀ ಪ್ರಾಣಿ ಸಾಕಾಣಿಕೆ ನಿಷೇಧಿಸಲಾಗಿರಲಿಲ್ಲ ಎನ್ನುವುದು ದುರಂತ ಎಂದು ಎಮ್ಮಾ ಹರ್ಸ್ಟ್ ತಿಳಿಸಿದ್ದಾರೆ.

ಇದರ ಅರ್ಥ ಪ್ರಾಣಿಗಳ ಮೇಲೆ ದೌರ್ಜನ್ಯವೆಸಗಿ ಎಂತಹ ಘನಘೋರ ಕೃತ್ಯ ಮಾಡಿದರೂ ತಾತ್ಕಾಲಿಕ ಶಿಕ್ಷೆಯ ನಂತರ ಅವರಿಗೆ ಮತ್ತೆ ಮೊದಲಿನಂತೆ ಪ್ರಾಣಿ ಸಾಕಾಣಿಕೆ ಅಥವಾ ಅವುಗಳೊಂದಿಗೆ ಒಡನಾಡುವ ಅವಕಾಶ ನೀಡಲಾಗುತ್ತಿತ್ತು. ಅದರಿಂದಾಗಿ ಎಷ್ಟೋ ಪ್ರಾಣಿಗಳು ನಿರಂತರ ಹಿಂಸೆ ಅನುಭವಿಸುವಂತಾಗಿತ್ತು. ಇದೀಗ ತಪ್ಪು ಮಾಡಿದವರಿಗೆ ಜೀವಮಾನಪರ್ಯಂತ ಪ್ರಾಣಿ ಸಾಕಾಣಿಕೆಯಿಂದ ನಿಷೇಧ ಹೇರುತ್ತಿರುವುದು ಮೂಕ ಪ್ರಾಣಿಗಳಿಗೆ ಸುರಕ್ಷಿತ ಭಾವನೆ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Fruit Vendors Feed Monkeys : ಲಾಕ್‌ಡೌನ್‌ನಲ್ಲಿ ಮೂಕ ಪ್ರಾಣಿಗಳಿಗಾಗಿ ಮಿಡಿದ ಹೃದಯಗಳು 

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada