ನನ್ನನ್ನು ನೀವು ಒಪ್ಪಬೇಕಿಲ್ಲ, ನನ್ನ ಜೊತೆಗೆ ಬದುಕಿ, ಅದುವೇ ಪ್ರಜಾಪ್ರಭುತ್ವ: ಜೋ ಬೈಡನ್
ಘನತೆಯ ಬದುಕು ನಮ್ಮ ಗುರಿ. ಅದನ್ನು ನಾವು ಸಾಧಿಸಬೇಕು. ಸತ್ಯವನ್ನು ಕಾಪಾಡೋಣ, ಸುಳ್ಳನ್ನು ಸೋಲಿಸೋಣ. ಇದು ನಮ್ಮ ಗುರಿಯಾಗಬೇಕು ಎಂದು ಜೋ ಬೈಡನ್ ಹೇಳಿದರು.
ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುಮಾರು ಅರ್ಧಗಂಟೆ ಮಾತನಾಡಿದ ಜೋ ಬೈಡನ್, ದೇಶದ ಏಳ್ಗೆಯ ಮಂತ್ರ ಪಠಿಸಿದರು. ಅಲ್ಲದೆ, ಅಮೆರಿಕದ ಶಾಂತಿ ಕದಡಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಬೆಂಬಲಿಗರಿಗೆ ಪರೋಕ್ಷವಾಗಿ ತಮ್ಮ ಮೃದು ಮಾತಿನಿಂದಲೇ ಚಾಟಿ ಬೀಸಿದರು.
ನನ್ನನ್ನು ವಿರೋಧಿಸಿದವರಿಗೂ ನಾನು ಹೇಳುತ್ತೇನೆ. ನನ್ನನ್ನು ನೀವು ಒಪ್ಪಬೇಕಿಲ್ಲ. ಆದರೆ, ನನ್ನ ಜೊತೆಗೆ ಬದುಕಿ. ಅದುವೇ ಪ್ರಜಾಪ್ರಭುತ್ವ. ಭಿನ್ನಮತಗಳು ದೇಶವನ್ನು ಒಡೆಯಲು ಕಾರಣವಾಗಬಾರದು. ಕೇವಲ ನನ್ನನ್ನು ಬೆಂಬಲಿಸಿದವರಿಗಷ್ಟೇ ಅಲ್ಲ, ಅಮೆರಿಕದ ಪ್ರತಿಯೊಬ್ಬನಿಗೂ ನಾನು ಅಧ್ಯಕ್ಷ ಎಂದು ಜೋ ಬೈಡನ್ ಒತ್ತಿಒತ್ತಿ ಹೇಳಿದರು.
ಇದು ಅಮೆರಿಕದ ದಿನ. ಅಮೆರಿಕ ಎಲ್ಲ ಸವಾಲುಗಳನ್ನು ಗೆಲ್ಲಲಿದೆ. ಪ್ರಜಾಪ್ರಭುತ್ವಕ್ಕಾಗಿ ನಾವು ಹೋರಾಡಿದ್ದೇವೆ. ಪ್ರಜಾಪ್ರಭುತ್ವ ಅಮೂಲ್ಯವಾದುದು ಎಂದು ನಮಗೆ ಅರ್ಥವಾಗಿದೆ. ಸಂವಿಧಾನ ಮತ್ತು ನಮ್ಮ ದೇಶದ ಶಕ್ತಿಯ ಬಗ್ಗೆ ದೇಶಭಕ್ತರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ಹಲವು ಶತಮಾನಗಳಿಂದ ಶಾಂತಿ ಮತ್ತು ಸಂಘರ್ಷದ ಸಂದರ್ಭದಲ್ಲಿ ಒಟ್ಟಿಗೇ ಇದ್ದೇವೆ. ಭವಿಷ್ಯದಲ್ಲಿ ನಾವು ಇನ್ನೂ ಸಾಕಷ್ಟು ಸಾಧಿಸಬೇಕಿದೆ. ಸಾಕಷ್ಟು ಅವಕಾಶಗಳೂ ಇವೆ. ಹಲವು ಗಾಯಗಳು ವಾಸಿಯಾಗಬೇಕಿದೆ, ನಾವೆಲ್ಲರೂ ಬೆಳೆಯಬೇಕಿದೆ-ಪರಸ್ಪರರನ್ನು ಬೆಳೆಸಬೇಕಿದೆ, ಒಟ್ಟಿಗೆ ಗಳಿಸಬೇಕಿದೆ ಎಂದು ಅವರು ಹೇಳಿದರು.
ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ನಲ್ಲಿ ಗಲಭೆ ಎಬಿಸಿದ್ದ ಬಗ್ಗೆ ಮಾತನಾಡಿದ ಜೋ ಬೈಡನ್, ಕೆಲ ದಿನಗಳ ಹಿಂದೆ ಕ್ಯಾಪಿಟಲ್ನ ತಳಹದಿಯನ್ನೇ ಅವರು ಅಲುಗಾಡಿಸಿದ್ದರು. 2 ಶತಮಾನಗಳಿಗೂ ಹೆಚ್ಚು ಕಾಲ ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾದ ಪರಂಪರೆ ನಮ್ಮಲ್ಲಿದೆ. ಆದರೆ ಈ ಬಾರಿ ಅದು ಅಲುಗಾಡಿತು ಎಂದು ಬೇಸರ ಹೊರ ಹಾಕಿದರು.
ಬೈಡನ್ ಕಳವಳ ವಿಶ್ವಕ್ಕೆ ಲಗ್ಗೆ ಇಟ್ಟ ಕೊರೊನಾ ವೈರಸ್ ಬಗ್ಗೆ ಮಾತನಾಡಲು ಜೋ ಬೈಡನ್ ಮರೆಯಲಿಲ್ಲ. ಶತಮಾನಕ್ಕೆ ಒಮ್ಮೆ ವೈರಸ್ ಲಗ್ಗೆ ಇಡುತ್ತದೆ. 2ನೇ ಮಹಾಯುದ್ಧದಲ್ಲಿ ಸತ್ತಷ್ಟು ಜನರು ಈ ಬಾರಿ ಕೊರೊನಾದಿಂದ ನಮ್ಮಲ್ಲಿ ಸತ್ತಿದ್ದಾರೆ. ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಕೊರೊನಾ ಪಿಡುಗನ್ನು ನಾವು ಒಂದು ದೇಶವಾಗಿ ಎದುರಿಸೋಣ. ಈ ದೊಡ್ಡ ಸಮಸ್ಯೆಯನ್ನು ನಾವು ಒಂದಾಗಿ ಎದುರಿಸುತ್ತೇವೆ, ಗೆಲ್ಲುತ್ತೇವೆ ಎನ್ನುವ ಭರವಸೆ ನನಗಿದೆ. ಜಗತ್ತು ನಮ್ಮನ್ನು ನೋಡುತ್ತಿದೆ. ಅಮೆರಿಕ ಹಲವು ಪರೀಕ್ಷೆಗಳನ್ನು ಎದುರಿಸಿದೆ. ಕೇವಲ ನಿನ್ನೆಯ ಸವಾಲುಗಳು ಮಾತ್ರವಲ್ಲ, ಇಂದಿನ ಮತ್ತು ನಾಳೆಯ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧರಾಗೋಣ ಎಂದು ಎಲ್ಲರಲ್ಲಿ ಸ್ಫೂರ್ತಿ ತುಂಬಿದರು.
ಪ್ರಜಾಪ್ರಭುತ್ವ, ಏಕತೆ ನಮ್ಮ ಮಂತ್ರವಾಗಬೇಕು ಇತ್ತೀಚೆಗೆ ಅಮೆರಿಕದಲ್ಲಿ ಕರಿಯರ ಮೇಲೆ ನಡೆದ ದಾಳಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಮುಂದೆ ಈ ರೀತಿ ಘಟನೆ ಆಗುವುದಿಲ್ಲ ಎಂದಿರುವ ಅವರು, ಬಿಳಿಯರು ಶ್ರೇಷ್ಠರೆಂಬ ಭ್ರಮೆಗೆ ಅವಕಾಶವಿಲ್ಲ. ಅಮೆರಿಕದ ಭವಿಷ್ಯವನ್ನು ನಾವು ಕಾಪಾಡಬೇಕಿದೆ. ಪ್ರಜಾಪ್ರಭುತ್ವ, ಏಕತೆ ನಮ್ಮ ಮಂತ್ರವಾಗಬೇಕು. ಅಮೆರಿಕದ ಎಲ್ಲಾ ಪ್ರಜೆಗಳನ್ನೂ ಜತೆಗೆ ಕರೆದುಕೊಂಡು ಹೋಗುವುದು ನನ್ನ ಆಶಯ ಸಮಾಜ ಒಡೆಯುವುದು, ಹಿಂಸಾಚಾರ ಬೇಡ. ಒಗ್ಗಟ್ಟಿನಿಂದ ನಾವು ಸಾಕಷ್ಟು ಸಾಧಿಸಬಹುದು. ನಾವು ಅಮೆರಿಕವನ್ನು ಮತ್ತೊಮ್ಮೆ ಜಗತ್ತಿನಲ್ಲಿ ಒಳಿತಿನ ದೊಡ್ಡ ಶಕ್ತಿಯಾಗಿ ಮಾಡೋಣ ಎಂದು ಜನರನ್ನು ಹುರಿದುಂಬಿಸಿದರು.
ಒಗ್ಗಟ್ಟಿನ ಬಗ್ಗೆ ಮಾತಾಡುವವರನ್ನು ಕೆಲವರು ಮೂರ್ಖರಂತೆ ನೋಡುತ್ತಿದ್ದಾರೆ. ನಮ್ಮ ಇತಿಹಾಸ ಸತತ ಸಂಘರ್ಷದಿಂದ ಕೂಡಿದೆ. ಇತಿಹಾಸ, ನಂಬಿಕೆ, ಕಾರಣಗಳು ನಮಗೆ ಒಗ್ಗಟ್ಟಿನ ದಾರಿ ತೋರಿಸುತ್ತಿವೆ. ನಾವು ಪರಸ್ಪರರನ್ನು ಗೌರವದಿಂದ ಕಾಣೋಣ. ಅಕ್ಕಪಕ್ಕದವರ ಘನತೆ ಕಾಪಾಡೋಣ. ಇದು ನಮ್ಮ ಐತಿಹಾಸಿಕ ಕ್ಷಣ. ನಾವು ಹಿಂದೆಯೂ ಇದನ್ನು ಸಾಧಿಸಿದ್ದೇವೆ. ಮುಂದೆಯೂ ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ನಾವೆಲ್ಲರೂ ಮತ್ತೊಬ್ಬರನ್ನು ನೋಡೋಣ, ಗೌರವಿಸೋಣ, ಕೇಳಿಸಿಕೊಳ್ಳೋಣ. ಎಲ್ಲ ಭಿನ್ನಮತಗಳೂ ಜಗಳಕ್ಕೆ ಕಾರಣವಾಗಬೇಕಿಲ್ಲ ಎಂದರು ಜೋ ಬೈಡನ್.
ಅಮೆರಿಕದ ಉಪಾಧ್ಯಕ್ಷೆಯಾಗಿ ಮಹಿಳೆಯಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಅಮೆರಿಕ ಈಗಿರುವ ಸ್ಥಿತಿಗಿಂತಲೂ ಉತ್ತಮ ಸ್ಥಿತಿಗೆ ಹೋಗಬೇಕಿದೆ. ಮಹಿಯರಿಗೆ ಮತದಾನದ ಹಕ್ಕು ಸಿಗಬಾರದೆಂದು 2 ಶತಮಾನಗಳ ಹಿಂದೆ ಇದೇ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಆದ್ರೆ ಇಂದು ಅಮೆರಿಕದ ಉಪಾಧ್ಯಕ್ಷರಾಗಿ ಮಹಿಳೆಯಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು ಸಂತಸ ವ್ಯಕ್ತಪಡಿಸಿದರು.
ಸತ್ಯವನ್ನು ಕಾಪಾಡೋಣ, ಸುಳ್ಳನ್ನು ಸೋಲಿಸೋಣ ನನಗೆ ಬೆಂಬಲ ಸೂಚಿಸಿದವರಿಗೆ ಮಾತ್ರವೇ ನಾನು ಅಧ್ಯಕ್ಷನಲ್ಲ. ನಾನು ಎಲ್ಲರಿಗೂ ಅಧ್ಯಕ್ಷ. ಸಂತ ಆಗಸ್ಟೀನ್ ಒಂದು ಮಾತು ಹೇಳಿದ್ದರು. ಒಂದು ಸಾಮಾನ್ಯ ಗುರಿಗಾಗಿ ನಾವು ಶ್ರಮಿಸಬೇಕು ಎಂದಿದ್ದರು ಅವರು. ನಮ್ಮ ಸಾಮಾನ್ಯ ಗುರಿ ಏನು? ಘನತೆಯ ಬದುಕು ನಮ್ಮ ಗುರಿ. ಅದನ್ನು ನಾವು ಸಾಧಿಸಬೇಕು. ಸತ್ಯವನ್ನು ಕಾಪಾಡೋಣ, ಸುಳ್ಳನ್ನು ಸೋಲಿಸೋಣ. ಇದು ನಮ್ಮ ಗುರಿಯಾಗಬೇಕು ಎಂದರು.
ಒಗ್ಗಟ್ಟು ಈಗ ಅನಿವಾರ್ಯ ನಾವು ಭವಿಷ್ಯ ಸುಂದರವಾಗಿಸಿಕೊಳ್ಳಲು ಇನ್ನಷ್ಟು ಕಷ್ಟಪಡಬೇಕಿದೆ. ನಾವು ಎಲ್ಲರೂ ಎಲ್ಲರಿಗೂ ಆಧಾರವಾಗಿ ನಿಲ್ಲಬೇಕಿದೆ. ಒಗ್ಗಟ್ಟು ಈಗ ಅನಿವಾರ್ಯ. ನಾವು ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ. ಇದು ಪರೀಕ್ಷೆಯ ಕಾಲ. ಅಸಮಾನತೆ, ಜನಾಂಗೀಯವಾದ ಹೆಚ್ಚಾಗುತ್ತಿದೆ. ಅಮೆರಿಕ ಜಗತ್ತಿನ ಕಣ್ಣುಗಳಲ್ಲಿ ತಪ್ಪು ಮಾಡಿದಂತೆ ಕಾಣಿಸಿಕೊಂಡಿದೆ. ನಾವು ಇವೆಲ್ಲವುಗಳಿಂದ ಹೊರಬರಬೇಕಿದೆ. ನಮ್ಮ ನಡುವೆ ಬಾಂಧವ್ಯದ ಬೆಸುಗೆ ಬೆಳೆಯಬೇಕಿದೆ. ನಾವು ಈ ಸಂಕೀರ್ಣ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಇತಿಹಾಸ ನಮ್ಮನ್ನು ಅಳೆಯುತ್ತದೆ. ನಾವು ಈ ಸವಾಲು ಎದುರಿಸಿ ಗೆಲ್ಲುತ್ತೇವೆ ಎಂಬ ಬಗ್ಗೆ ನನಗೆ ಭರವಸೆಯಿದೆ ಎಂದರು.
ಒಡಕು ಬೇಡ, ಒಗ್ಗಟ್ಟು ಬೇಕು ನಾನು ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ, ನಮ್ಮ ಅಮೆರಿಕವನ್ನು ಕಾಪಾಡುತ್ತೇನೆ. ನಾವು ಅಮೆರಿಕದ ಭರವಸೆಯ ಕಥನವನ್ನು ಬರೆಯಬೇಕಿದೆ. ದೊಡ್ಡತನ, ಒಳ್ಳೆಯ ಸ್ಫೂರ್ತಿದಾಯಕ ವಿಚಾರಗಳಿಂದ ನಾವು ಅಮೆರಿಕದ ಇತಿಹಾಸವನ್ನು ಪುನರ್ ರಚಿಸಬೇಕಿದೆ. ಒಡಕು ಬೇಡ, ಒಗ್ಗಟ್ಟು ಬೇಕು. ದೇವರು ಅಮೆರಿಕವನ್ನು, ಅಮೆರಿಕದ ಸೈನಿಕರನ್ನು ಕಾಪಾಡಲಿ. ಅಮೆರಿಕ ನಿನಗೆ ಧನ್ಯವಾದಗಳು ಎಂದು ಬೈಡನ್ ಭಾಷಣ ಮುಗಿಸಿದರು.
ಕಮಲಾ ಹ್ಯಾರಿಸ್ ಎಂಬ ಸ್ಫೂರ್ತಿ ಕಥನ; ಅಮೆರಿಕದಲ್ಲಿ ಹಲವು ಪ್ರಥಮಗಳಿಗೆ ಕಮಲಾ ಕಾರಣ
ಕಮಲಾ ಹ್ಯಾರಿಸ್ ಪದಗ್ರಹಣ: ತಮಿಳುನಾಡಿನ ಪುಟ್ಟ ಹಳ್ಳಿಯಲ್ಲಿ ಸಂಭ್ರಮ.. ಮುರುಕು ತಯಾರಿಸಿದ ಮಹಿಳೆ!
ಟಿವಿ ನೇರ ಪ್ರಸಾರದಲ್ಲಿ ಕೊರೊನಾ ಲಸಿಕೆ ಪಡೆದ ಅಮೆರಿಕ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಜೋ ಬೈಡೆನ್ ಸಂಪುಟಕ್ಕೆ 13 ಮಹಿಳೆಯರೂ ಸೇರಿ 20 ಅನಿವಾಸಿ ಭಾರತೀಯರು ಸೇರ್ಪಡೆ
Published On - 12:01 am, Thu, 21 January 21